ADVERTISEMENT

ಕುಸಿದ ಅಂತರ್ಜಲ: ಹೆಚ್ಚಿದ ಆತಂಕ

ಹರ್ಷವರ್ಧನ ಪಿ.ಆರ್.
Published 26 ಆಗಸ್ಟ್ 2017, 5:11 IST
Last Updated 26 ಆಗಸ್ಟ್ 2017, 5:11 IST
ಭಣಗುಟ್ಟುತ್ತಿರುವ ಹಾವೇರಿ ಹೆಗ್ಗೇರಿ ಕೆರೆ
ಭಣಗುಟ್ಟುತ್ತಿರುವ ಹಾವೇರಿ ಹೆಗ್ಗೇರಿ ಕೆರೆ   

ಹಾವೇರಿ: ಜಿಲ್ಲೆಯ ಅಂತರ್ಜಲ ಮಟ್ಟವು ಎರಡು ವರ್ಷಗಳಲ್ಲಿ 10.95 ಮೀಟರ್ಸ್ ಕುಸಿದಿದೆ. ವರ್ಷದಲ್ಲೇ ಗರಿಷ್ಠ ಮಳೆಯಾಗುವ ಮುಂಗಾರು ಹಂಗಾಮಿನ ಜುಲೈ (ವಾಡಿಕೆ ಮಳೆ 170 ಮಿ.ಮೀ.) ತಿಂಗಳಲ್ಲೇ ಅಂತರ್ಜಲ ಕುಸಿದಿರುವುದು ಆತಂಕಕ್ಕೆ ಕಾರಣವಾಗಿದೆ.

ಜುಲೈಯಲ್ಲಿ ಕೇವಲ 124.69 ಮಿ.ಮೀ. ಮಳೆಯಾಗಿದೆ. ಜನವರಿಯಿಂದ ಈ ತನಕ ವಾಡಿಕೆಯ  ಶೇ 65ರಷ್ಟು  ಮಳೆಯಾಗಿದೆ. ಜಿಲ್ಲೆಯ ನಾಲ್ಕು ನದಿಗಳ ಪೈಕಿ ಕುಮುದ್ವತಿಯಲ್ಲಿ ಹರಿವು ಇನ್ನೂ ಆರಂಭಿಸಿಲ್ಲ. ಧರ್ಮಾದಲ್ಲಿ ಅಲ್ಪ ಸ್ವಲ್ಪ ನೀರಿದ್ದರೆ, ತುಂಗಭದ್ರಾ ಮತ್ತು ವರದಾ ನದಿಯಲ್ಲೂ ಹರಿವು ತೀರಾ ಕಡಿಮೆ ಇದೆ.

‘ಜಿಲ್ಲೆಯ ವಿವಿಧೆಡೆ ಒಟ್ಟು 44 ವೀಕ್ಷಣಾ ಕೊಳವೆಬಾವಿಗಳಿದ್ದು, ಇದರ ಸ್ಥಿರ ನೀರಿನ ಮಟ್ಟವನ್ನು ದಾಖಲಿಸಿಕೊಳ್ಳುತ್ತೇವೆ. ಉತ್ತಮ ಮಳೆಯಾಗುವ ಜುಲೈಯಲ್ಲಿ ಎರಡು ವರ್ಷದ ಹಿಂದೆ ನೆಲಮಟ್ಟಕ್ಕಿಂತ 15 ಮೀಟರ್ಸ್ ಆಸುಪಾಸಿನಲ್ಲಿ ಸ್ಥಿರ ಜಲ ಇತ್ತು. ಈ ಬಾರಿ ಗಣನೀಯ ಕುಸಿತ ಕಂಡಿದೆ’ ಎನ್ನುತ್ತಾರೆ ಅಂತರ್ಜಲ ಇಲಾಖೆಯ ಹಿರಿಯ ಭೂ ವಿಜ್ಞಾನಿ ಡಾ.ಎಂ.ಬಿ. ಬಳಿಗಾರ.

ADVERTISEMENT

ನೀರಿನ ಕೊರತೆ: ಗ್ರಾಮೀಣ ಭಾಗದಲ್ಲಿ ಪ್ರತಿ ವ್ಯಕ್ತಿಗೆ ಪ್ರತಿನಿತ್ಯ 55 ಲೀಟರ್ ನೀರು ಪೂರೈಕೆ ಮಾಡಬೇಕು. ಆದರೆ, ಜಿಲ್ಲೆಯಲ್ಲಿ 743 ಜನವಸತಿಗಳಿದ್ದು, 676 ಗ್ರಾಮಗಳಲ್ಲಿ ಇದಕ್ಕಿಂತ ಕಡಿಮೆ ನೀರು ಪೂರೈಕೆಯಾಗುತ್ತಿದೆ. ಕೇವಲ 67 ಜನವಸತಿಗಳು ಮಾತ್ರ ಸಮರ್ಪಕ  ನೀರು ಹೊಂದಿವೆ. ಸವಣೂರಿನ ಕಾರಡಗಿ ಹಾಗೂ ಬ್ಯಾಡಗಿಯ ತಡಸ ಮತ್ತು ಹೊಸಗುಂಗರಕೊಟ್ಟಿಗೆಗೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ.

ಜಿಲ್ಲಾಡಳಿತವು150 ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆ ಪಡೆದು 103 ಗ್ರಾಮಗಳಿಗೆ ನೀರು ನೀಡುತ್ತಿದೆ. ಈ ವರ್ಷ ಕೊರೆಯಿಸಲಾದ 1,341 ಕೊಳವೆಬಾವಿಗಳ ಪೈಕಿ 401 ವಿಫಲಗೊಂಡಿವೆ. ಪುನಶ್ಚೇತನ ಮಾಡಲಾದ 401 ಕೊಳವೆ ಬಾವಿಗಳ ಪೈಕಿಯೂ 116 ವಿಫಲಗೊಂಡಿವೆ.

‘ಒಟ್ಟು 15 ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಿದ್ದು, ತುಂಗಭದ್ರಾ ನದಿಯಿಂದ 7 ಯೋಜನೆಗಳ ಮೂಲಕ 144 ಗ್ರಾಮಗಳು ಹಾಗೂ ವರದಾ ನದಿಯ 8 ಯೋಜನೆಗಳಿಂದ 93 ಗ್ರಾಮ ಗಳಿಗೆ ನೀರು ಪೂರೈಕೆ ಮಾಡಲಾಗುತ್ತಿದೆ’ ಎನ್ನುತ್ತಾರೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಕಾರ್ಯನಿರ್ವಾಹಕ ಎಂಜಿನಿಯರ್ ವಿನಾಯಕ ಹುಲ್ಲೂರ,

ಶುದ್ಧ ಕುಡಿಯುವ ನೀರಿನ ಘಟಕ: ಗ್ರಾಮೀಣ ಭಾಗದಲ್ಲಿ ಒಟ್ಟು 386 ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು, 19 ತಾಂತ್ರಿಕ ಸಮಸ್ಯೆಗಳಿಂದ ಸ್ಥಗಿತಗೊಂಡಿವೆ. ಸುಮಾರು 5 ಘಟಕಗಳಿಗ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ.

‘ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆಯ ಕಾರಣ, ಈ ಬಾರಿ ಬರದಲ್ಲೂ ಜನತೆಗೆ ನೀರಿನ ಸಮಸ್ಯೆ ತೀವ್ರವಾಗಿ ಕಾಡಿಲ್ಲ. ಅಲ್ಲದೇ, ಆರೋಗ್ಯ ಸಮಸ್ಯೆಯೂ ಗಣನೀಯ ಇಳಿಕೆ ಕಂಡಿದೆ. ಜಿಲ್ಲೆಗೆ ಹೊಸದಾಗಿ 180 ಘಟಕಗಳು ಮಂಜೂರಾಗಿದ್ದು, ಸವಣೂರು, ಬ್ಯಾಡಗಿ, ಹಾವೇರಿ ಮತ್ತು ರಾಣೆಬೆನ್ನೂರನ್ನು ‘ಸಂಪೂರ್ಣ ಶುದ್ಧ ಕುಡಿಯುವ ನೀರು ಯುಕ್ತ ತಾಲ್ಲೂಕು’ ಮಾಡಲಾಗುವುದು’ ಎನ್ನುತ್ತಾರೆ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಕೊಟ್ರೇಶಪ್ಪ ಬಸೇಗಣ್ಣಿ.

ಜಿಲ್ಲೆಯಲ್ಲಿ ಒಟ್ಟು 1,416 ಜಿಲ್ಲಾ ಪಂಚಾಯ್ತಿ ಹಾಗೂ ಸಣ್ಣ ನೀರಾವರಿ ಇಲಾಖೆಯ ಅಧೀನದ ಕೆರೆಗಳಿದ್ದು, ಸಣ್ಣ ಸಣ್ಣ ಕೆರೆಗಳೆಲ್ಲ ಸೇರಿ 9,988 ಕೆರೆಗಳಿವೆ. ಆದರೆ, ಶೇ 90ಕ್ಕೂ ಹೆಚ್ಚು  ಭಣಗುಟ್ಟುತ್ತಿವೆ.

‘ಜಿಲ್ಲೆಯ ಕೆರೆಗಳಿಗೆ ತುಂಗಭದ್ರಾ ನದಿ, ವರದಾ ಹಾಗೂ ಯುಟಿಪಿ ಕಾಲುವೆ ಮೂಲಕ ನೀರು ತುಂಬಿಸುವ ಯೋಜನೆಗಳನ್ನು ವೇಗಗೊಳಿಸಲಾಗುತ್ತಿದೆ’ ಎನ್ನುತ್ತಾರೆ ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ.

ನಗರ: ಹಾವೇರಿ ಜಿಲ್ಲೆಯಲ್ಲಿ ಎರಡು ನಗರಸಭೆ ಹಾಗೂ ಐದು ಪುರಸಭೆ ಹಾಗೂ ಎರಡು ಪಟ್ಟಣ ಪಂಚಾಯ್ತಿಗಳಿವೆ. ಜಿಲ್ಲಾ ಕೇಂದ್ರವಾದ ಹಾವೇರಿಯಲ್ಲೇ ಈ ಬಾರಿ ತಿಂಗಳ ಕಾಲ ನೀರು ಪೂರೈಸಲು ಅಸಾಧ್ಯವಾಗಿತ್ತು. ಮಳೆಗಾಲದಲ್ಲೇ 10 ದಿನಗಳ ಕಾಲ ನೀರು ಪೂರೈಕೆ ಸ್ಥಗಿತಗೊಂಡಿತ್ತು. ಆದರೆ, ಜಿಲ್ಲಾ ನಗರಾಭಿವೃದ್ಧಿ ಕೋಶದ ದಾಖಲೆಗಳಲ್ಲಿ ಮಾತ್ರ ವಾರಕ್ಕೆ ಕನಿಷ್ಠ ಎರಡು ಬಾರಿ ನೀರು ಪೂರೈಸಲಾಗುತ್ತಿದೆ.

* *

ಜಿಲ್ಲೆಯ ಶೇ 90ರಷ್ಟು ಜನವಸತಿಗೆ ನಿಗದಿತ ಮಾನದಂಡಕ್ಕಿಂತ ಕಡಿಮೆ ನೀರು ಪೂರೈಕೆಯಾಗುತ್ತಿದೆ. ದಿನೇ ದಿನೇ ನೀರಿನ ಸಮಸ್ಯೆ ಹೆಚ್ಚುತ್ತಿದೆ
ವಿನಾಯಕ ಹುಲ್ಲೂರ,
ಕಾರ್ಯನಿರ್ವಾಹಕ ಎಂಜಿನಿಯರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.