ADVERTISEMENT

ಕೃಷಿ ಕೆಲಸದಲ್ಲಿ ಮೃತಪಟ್ಟ ರೈತರಿಗೆ ₹1ಲಕ್ಷ

​ಪ್ರಜಾವಾಣಿ ವಾರ್ತೆ
Published 21 ಜುಲೈ 2017, 6:55 IST
Last Updated 21 ಜುಲೈ 2017, 6:55 IST

ಹಾವೇರಿ: ‘ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎ.ಪಿ.ಎಂ.ಸಿ.)ಯ ಅಡಿಯಲ್ಲಿ ರೈತರಿಗೆ ಸಾಕಷ್ಟು ಯೋಜನೆಗಳಿವೆ. ರೈತರು ಇವುಗಳ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ಹಾವೇರಿ ಎ.ಪಿ.ಎಂ.ಸಿ. ಅಧ್ಯಕ್ಷ ಮಲ್ಲಿಕಾರ್ಜುನ ಹಾವೇರಿ ಹೇಳಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೃಷಿ ಚಟುವಟಿಕೆ ಸಂದರ್ಭದಲ್ಲಿ ರೈತರು ಮೃತಪಟ್ಟರೆ ₹ 1ಲಕ್ಷ ಸಹಾಯಧನವನ್ನು ‘ರೈತ ಸಂಜೀವಿನಿ ಅಪಘಾತ ವಿಮಾ ಯೋಜನೆ’ ಅಡಿಯಲ್ಲಿ ನೀಡಲಾಗುವುದು. ಅಪಘಾತ ಅಥವಾ ಕೃಷಿ ಚಟುವಟಿಕೆ ಸಂರ್ಭದಲ್ಲಿ ಕೈ ಅಥವಾ ಕಾಲು ಕಳೆದುಕೊಂಡ ರೈತರಿಗೆ ₹50 ಸಾವಿರದ ವರೆಗೆ ಸಹಾಯಧನ ನೀಡಲಾಗುವುದು’ ಎಂದರು.

‘ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗದ ಕೃಷಿ ಉತ್ಪನ್ನಗಳನ್ನು ‘ಅಡಮಾನ ಸಾಲ ಯೋಜನೆ’ ಅಡಿಯಲ್ಲಿ ಎ.ಪಿ.ಎಂ.ಸಿ. ಉಗ್ರಾಣದಲ್ಲಿ ಇಟ್ಟು, ದಾಸ್ತಾನು ಆಧಾರದ ಮೇಲೆ ಮೂರು ತಿಂಗಳಿಗೆ ಬಡ್ಡಿ ರಹಿತ ₹2 ಲಕ್ಷ ಸಾಲ ಪಡೆಯಬಹುದು’ ಎಂದರು.

ADVERTISEMENT

‘ನಾನು ಅಧ್ಯಕ್ಷನಾದ ಬಳಿಕ ಕೃಷಿ ಉತ್ಪನ್ನ ಮಾರುಕಟ್ಟೆಯ ಅಭಿವೃದ್ಧಿಗೆ ಶ್ರಮಿಸಿದ್ದು, ಕುರಿ ಮತ್ತು ಮೇಕೆಗಳ ಮಾರುಕಟ್ಟೆಯನ್ನು ₹16.66 ಲಕ್ಷದಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ಕುರಿ ಮತ್ತು ಮೇಕೆಗಳನ್ನು ಎಲೆಕ್ಟ್ರಾನಿಕ್ ಯಂತ್ರದ ಮೂಲಕ ತೂಕ ಮಾಡಿ, ‘ಟ್ಯಾಗ್‌’ ಅಳವಡಿಸಲಾಗುತ್ತಿದೆ. ಇದರಿಂದ ಕುರಿಗಾಹಿಗಳಿಗೆ ಉಂಟಾಗುತ್ತಿದ್ದ ಅನ್ಯಾಯವನ್ನು ತಪ್ಪಿಸಲಾಗುತ್ತಿದೆ’ ಎಂದರು.

‘ಎ.ಪಿ.ಎಂ.ಸಿ. ಪ್ರಾಂಗಣದಲ್ಲಿ ₹3.84 ಲಕ್ಷ ವೆಚ್ಚದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ₹20.83 ಲಕ್ಷ ವೆಚ್ಚದಲ್ಲಿ ಸ್ನಾನಗೃಹ ಮತ್ತು ಶೌಚಾಲಯವನ್ನು ನಿರ್ಮಿಸಲಾಗಿದೆ. ದೇವಿಹೊಸೂರಿನಲ್ಲಿ ₹25.45 ಲಕ್ಷದಲ್ಲಿ ಗ್ರಾಮೀಣ ಸಂತೆ ಮಾರುಕಟ್ಟೆಯನ್ನು ನಿರ್ಮಿಸಲಾಗಿದೆ’ ಎಂದರು.

‘ರೈತರು ತಮ್ಮ ಉತ್ಪನಗಳನ್ನು ದಾಸ್ತಾನು ಇರಿಸಲು ನೂತನ ತಂತ್ರಜ್ಞಾನದ ‘ಸೈಲೊ’ (ಆಹಾರ ಧಾನ್ಯ ಶೇಖರಿಸುವ ಘಟಕ– silo) ) ₹1.80 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುವುದು. ಇದಕ್ಕೆ ಕೇಂದ್ರ ಸರ್ಕಾರದಿಂದ ₹1 ಕೋಟಿ ಮಂಜೂರಾಗಿದೆ’ ಎಂದರು.

‘ನಗರದ ಎ.ಪಿ.ಎಂ.ಸಿ. ಮಾರುಕಟ್ಟೆಯಲ್ಲಿ ಆಹಾರ ಧಾನ್ಯಗಳ ಸ್ವಚ್ಛತೆ ಹಾಗೂ ವರ್ಗೀಕರಣ ಘಟಕವನ್ನು  ₹ 1ಕೋಟಿ ವೆಚ್ಚದಲ್ಲಿ ಸ್ಥಾಪಿಸಲಾಗುತ್ತಿದೆ. ವಾರ್ಷಿಕ 11 ಕ್ರಿಯಾ ಯೋಜನೆ ರೂಪಿಸಿ, ತಲಾ ₹3,12 ಲಕ್ಷ ವೆಚ್ಚದಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ’ ಎಂದರು.

‘ಹಾನಗಲ್‌ ರಸ್ತೆ ಬದಿಯ ಜಾನುವಾರು ಮಾರುಕಟ್ಟೆಯಲ್ಲಿ 12 ಹಾಗೂ ಗುತ್ತಲ ರಸ್ತೆಯ ಮಾರುಕಟ್ಟೆಯಲ್ಲಿ 8 ವಾಣಿಜ್ಯ ಮಳಿಗೆಗಳನ್ನು ಸ್ಥಾಪಿಸಲಾಗುತ್ತಿದೆ. ನಗರದ ಲಾಲ್‌ ಬಹದ್ದೂರ್ ಶಾಸ್ತ್ರಿ ತರಕಾರಿ ಮಾರುಕಟ್ಟೆಗೆ ಬೆಳಿಗ್ಗೆ 9ಗಂಟೆ ಬಳಿಕ ಬಂದ ರೈತರ ತರಕಾರಿಗೆ ಉತ್ತಮ ಬೆಲೆ ದೊರೆಯುತ್ತಿಲ್ಲ.

ಅಲ್ಲದೇ, ಜಾಗದ ಕೊರತೆಯಿಂದ ಸಂಚಾರಕ್ಕೂ ಅಡಚಣೆಯಾಗುತ್ತಿದೆ. ಹೂವಿನ ಮಾರುಕಟ್ಟೆಯು ಕೇವಲ ದರ್ಗಾ ಕಾಂಪ್ಲೆಕ್ಸ್‌ನಲ್ಲಿ ನಡೆಯುತ್ತಿದ್ದು, ಬೇರೆ ಹೂವಿನ ವ್ಯಾಪಾರಿಗಳಿಗೆ ಅವಕಾಶ ಸಿಗುತ್ತಿಲ್ಲ. ಇದಕ್ಕಾಗಿ ನಗರದ ಕಾಗಿನೆಲೆ ರಸ್ತೆ ಬದಿ ₹ 4.50 ಕೋಟಿ ವೆಚ್ಚದಲ್ಲಿ ಹೊಸ ‘ಹೂವು, ಹಣ್ಣು ಮತ್ತು ತರಕಾರಿ ಮಾರುಕಟ್ಟೆ’ ನಿರ್ಮಿಸಲು ಯೋಜಿಸಲಾಗಿದೆ’ ಎಂದರು. ನಗರದಲ್ಲಿನ ಸಗಟು ಹಣ್ಣಿನ ವ್ಯಾಪಾರಿಗಳು ಎ.ಪಿ.ಎಂ.ಸಿ. ಪರವಾನಗಿ ಪಡೆಯಬೇಕು. ಅಲ್ಲದೇ, ಕಡ್ಡಾಯವಾಗಿ ಸೆಸ್ ಕಟ್ಟಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.