ADVERTISEMENT

‘ಕೆಲಸ ನಿರ್ಲಕ್ಷಿಸಿದರೆ ಜೈಲು ವಾಸ’

ಪರಿಶಿಷ್ಟ ಜಾತಿ ಮತ್ತು ವರ್ಗಗಳ ಕಲ್ಯಾಣ ಯೋಜನೆಗಳ ಕುರಿತ ಸಭೆಯಲ್ಲಿ ಅಧಿಕಾರಿಗಳಿಗೆ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 28 ಜನವರಿ 2017, 9:34 IST
Last Updated 28 ಜನವರಿ 2017, 9:34 IST
‘ಕೆಲಸ ನಿರ್ಲಕ್ಷಿಸಿದರೆ ಜೈಲು ವಾಸ’
‘ಕೆಲಸ ನಿರ್ಲಕ್ಷಿಸಿದರೆ ಜೈಲು ವಾಸ’   

ಹಾವೇರಿ: ‘ಪರಿಶಿಷ್ಟ ಜಾತಿ ಮತ್ತು ವರ್ಗಗಳ ಕಲ್ಯಾಣದ ಅನುದಾನವನ್ನು ಕಾಲಮಿತಿಯಲ್ಲಿ ಬಳಸದ ಅಧಿಕಾರಿಗಳ ಮೇಲೆ ಮೊಕದ್ದಮೆ ದಾಖಲಿಸಿ, ಜೈಲಿಗೆ ಕಳುಹಿಸಬಹುದಾಗಿದೆ’ ಎಂದು ಜಿಲ್ಲಾಧಿಕಾರಿ ಡಾ. ವೆಂಕಟೇಶ ಎಂ.ವಿ. ಹೇಳಿದರು.

ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಶುಕ್ರವಾರ ‘ವಿಶೇಷ ಘಟಕ ಹಾಗೂ ಗಿರಿಜನ ಉಪಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣಕ್ಕಾಗಿ ಸರ್ಕಾರದ ಯೋಜನೆಗಳ ಅನುಷ್ಠಾನ’ ಕುರಿತ ವಿವಿಧ ಇಲಾಖಾಧಿಕಾರಿಗಳ ಸಭೆಯಲ್ಲಿ ಅವರು ಎಚ್ಚರಿಕೆ ನೀಡಿದರು.

‘ರಾಜ್ಯ ಪರಿಷತ್ ನಿಯಮಾವಳಿ ಪ್ರಕಾರ ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ವಿರುದ್ಧ ಮೊಕದ್ದಮೆ ದಾಖಲಿಸಿ, 6 ತಿಂಗಳು  ಜೈಲು ವಿಧಿಸಲಾಗುವುದು’ ಎಂದು ಅವರು ತಿಳಿಸಿದರು.

‘ವಾರ್ಷಿಕ ಅನುದಾನವನ್ನು ಮಾರ್ಚ್ ಒಳಗೆ ಖರ್ಚು ಮಾಡುವ ಮಾಫಿಯಾದಿಂದ ಹೊರಗೆಬನ್ನಿ. ಆಯಾ ತ್ರೈಮಾಸಿಕದಲ್ಲಿ ಅನುದಾನವನ್ನು  ಬಳಕೆ ಮಾಡಿ. ಇಲ್ಲವೇ, ಕ್ರಮ ಎದುರಿಸಲು ಸಿದ್ಧರಾಗಿ’ ಎಂದರು.

ಅಪೂರ್ಣ ಮಾಹಿತಿ ನೀಡಿದ ಲೋಕೋಪಯೋಗಿ ಇಲಾಖೆ ಹಾಗೂ ತುಂಗಾ ಮೇಲ್ದಂಡೆ ಯೋಜನೆ ಎಂಜಿನಿಯರ್‌ಗಳ ಬಗ್ಗೆ ಜಿಲ್ಲಾಧಿಕಾರಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ‘ಈ ಅಧಿಕಾರಿಗಳಿಗೆ ನೋಟಿಸ್‌ ನೀಡಿ. ಯೋಜನೆ ಜಾರಿಯ ವಿಳಂಬಕ್ಕೆ  ಸಮರ್ಪಕ ಉತ್ತರ ಕೊಡದಿದ್ದರೆ ಮೊಕದ್ದಮೆ ದಾಖಲಿಸೋಣ’ ಎಂದರು.

‘ಪರಿಶಿಷ್ಟರ ಯೋಜನೆಗಳ ಅನುಷ್ಠಾನದಲ್ಲಿ ವಿಳಂಬ ಮಾಡುವ ಅಧಿಕಾರಿಗಳ ಮೇಲೆ ಮೊಕದ್ದಮೆ ದಾಖಲಿಸಿ, ಜೈಲು ಶಿಕ್ಷೆ ವಿಧಿಸುವ ಅಧಿಕಾರ ಡಿ.ಸಿ.ಗೆ ನೀಡಲಾಗಿದೆ’ ಎಂದು ಮತ್ತೊಮ್ಮೆ ಅಧಿಕಾರಿಗಳಿಗೆ ಎಚ್ಚರಿಸಿದರು.

‘ಹಿಪ್ಪುನೆರಳೆ ಬೆಳೆಯಲು ಕ್ಷೇತ್ರ ವಿಸ್ತರಣೆ ಕಾರ್ಯಕ್ಕಾಗಿ ನರೇಗಾ ಅನುದಾನ ಬಳಕೆಮಾಡಿ’ ಎಂದು ರೇಷ್ಮೆ ಇಲಾಖೆ ಅಧಿಕಾರಿಗಳಿಗೆ ಹಾಗೂ ಜಿಲ್ಲಾ ಪಂಚಾಯ್ತಿ ಉಪ ಕಾರ್ಯದರ್ಶಿಗೆ ಸಲಹೆ ನೀಡಿದರು. 

‘ಅಪೌಷ್ಟಿಕ ಮಕ್ಕಳಿಗೆ ಹೆಚ್ಚಿನ ಅನುದಾನ ಒದಗಿಸಬೇಕು. ಅರ್ಹ ಎಲ್ಲ ಮಕ್ಕಳನ್ನು ಈ ಯೋಜನೆ ವ್ಯಾಪ್ತಿಗೆ ತರಬೇಕು’ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

‘ಅಧಿಕಾರಿಗಳು ನೀಡುವ ಅಂಕಿ ಅಂಶಗಳು ನಿಖರವಾಗಿರಬೇಕು. ನೀವೇ ಇನ್ನೊಮ್ಮೆ  ಪರಿಶೀಲಿಸಿ ಖಾತರಿ ಪಡಿಸಿಕೊಳ್ಳಬೇಕು’ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಜಿಲ್ಲಾ ಪಂಚಾಯ್ತಿ ಉಪ ಕಾರ್ಯದರ್ಶಿ ಜಿ. ಗೋವಿಂದಸ್ವಾಮಿ, ಸಮಾಜ ಕಲ್ಯಾಣಾಧಿಕಾರಿ ಜಗದೀಶ ಹೆಬ್ಬಳ್ಳಿ, ಪರಿಶಿಷ್ಟ ಪಂಗಡದ ಕಲ್ಯಾಣಾಧಿಕಾರಿ ಸುರೇಶ ರೆಡ್ಡಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಶಿವನಗೌಡ ಪಾಟೀಲ, ಕೃಷಿ  ಇಲಾಖೆ ಜಂಟಿ ನಿರ್ದೇಶಕ ರಾಜಶೇಖರ ಬಿಜಾಪುರ, ಅರಣ್ಯ ಇಲಾಖೆ ಅಧಿಕಾರಿ ರಾಘವೇಂದ್ರ ಇದ್ದರು.

***
ಕೆಲ ಗ್ರಾಮಗಳು ಆಯ್ಕೆ ಮಾಡಿ, ಎಲ್ಲ ಮನೆಗಳಿಗೆ ಅಡುಗೆ ಅನಿಲದ ಸಂಪರ್ಕ ಒದಗಿಸುವ ಮೂಲಕ ಹೊಗೆರಹಿತ ಗ್ರಾಮಗಳಾಗಿ ಘೋಷಣೆ  ಮಾಡಬೇಕು
-ಡಾ. ವೆಂಕಟೇಶ ಎಂ.ವಿ.
ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.