ADVERTISEMENT

ಖಾಸಗಿ ಆಸ್ಪತ್ರೆಗಳಲ್ಲೂ ‘ಗರ್ಭಪಾತ’ದ ದೂರು

ಹಾವೇರಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀಬಾಯಿ ಭೇಟಿ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2017, 9:27 IST
Last Updated 23 ಮಾರ್ಚ್ 2017, 9:27 IST
ಹಾವೇರಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಬುಧವಾರ ಭೇಟಿ ನೀಡಿದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಬಾಯಿ ಬಾಣಂತಿಯರು, ಮಕ್ಕಳ ಆರೋಗ್ಯ ವಿಚಾರಿಸಿದರು.
ಹಾವೇರಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಬುಧವಾರ ಭೇಟಿ ನೀಡಿದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಬಾಯಿ ಬಾಣಂತಿಯರು, ಮಕ್ಕಳ ಆರೋಗ್ಯ ವಿಚಾರಿಸಿದರು.   

ಹಾವೇರಿ: ‘ಜಿಲ್ಲೆಯ ಖಾಸಗಿ ಆಸ್ಪತ್ರೆ ಗಳಲ್ಲಿಯೂ ಗರ್ಭಪಾತ ಮಾಡಿಸಿದ ಬಗ್ಗೆ ಆಯೋಗಕ್ಕೆ ದೂರುಗಳು ಬಂದಿವೆ.  ಗರ್ಭಕೋಶಗಳನ್ನೇ ತೆಗೆದ ಪ್ರಕರಣಗಳ ಬಗ್ಗೆ ದೂರುಗಳಿವೆ. ಅದಕ್ಕಾಗಿ ಖಾಸಗಿ ಆಸ್ಪತ್ರೆಗಳಿಗೂ ದಿಢೀರ್ ಭೇಟಿ ನೀಡಲಾಗುವುದು. ತಪ್ಪು ಕಂಡುಬಂದ ಆಸ್ಪತ್ರೆ ಹಾಗೂ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀಬಾಯಿ ಹೇಳಿದರು.

ಇಲ್ಲಿನ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಬುಧವಾರ ಭೇಟಿ ನೀಡಿದ ಅವರು, ಗರ್ಭಿಣಿಯರು, ಬಾಣಂತಿಯರು ಹಾಗೂ ನವಜಾತ ಶಿಶುಗಳ ಆರೋಗ್ಯ ವಿಚಾರಿಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದರು.

‘ಜಿಲ್ಲೆಯಲ್ಲಿ ಬಹುತೇಕ ಗರ್ಭಿಣಿ ಯರಿಗೆ ಅಪೌಷ್ಟಿಕತೆ ಮತ್ತು ರಕ್ತಹೀನತೆ ಪರಿಣಾಮ ಗರ್ಭಪಾತ ಆಗುತ್ತಿದೆ.  ಅವರಿಗೆ ಸೂಕ್ತ ಔಷಧಿ ಹಾಗೂ ಪೌಷ್ಟಿಕ ಆಹಾರ ನೀಡಲು ಕ್ರಮ ಕೈಗೊಳ್ಳ ಬೇಕಾಗಿದೆ’ ಎಂದರು.

‘ಗರ್ಭಿಣಿ, ಬಾಣಂತಿಯರಿಗೆ ಚಿಕಿತ್ಸೆ, ಸೌಲಭ್ಯ ನೀಡಲು ಲಂಚ ಪಡೆದರೆ ಶಿಸ್ತು ಕ್ರಮಕೈಗೊಳ್ಳಲಾಗುವುದು’ ಎಂದ ಅವರು, ‘ಗರ್ಭಕೋಶವನ್ನು ಯಾವ ಕಾರಣಕ್ಕೆ ತೆಗೆಯಲಾಗುತ್ತಿದೆ’ ಎಂಬ ಬಗ್ಗೆ ಮಾಹಿತಿ ನೀಡಬೇಕು ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕರಿಗೆ ಸೂಚಿಸಿದರು.  

‘ಅಧಿಕ ರಕ್ತಸ್ರಾವ, ಗರ್ಭಕೋಶದಲ್ಲಿ ಗೆಡ್ಡೆ, ಕ್ಯಾನ್ಸರ್ ಸೋಂಕು ಕಂಡುಬಂದ ಸಂದರ್ಭಗಳಲ್ಲಿ ಚಿಕಿತ್ಸೆ ಫಲಿಸದಿದ್ದರೆ, ಗರ್ಭಕೋಶ ತೆಗೆಯಲಾಗುತ್ತದೆ. ಮನೆ ಯಲ್ಲಿಯೇ ಹೆರಿಗೆ ಮಾಡಿಸಿದ ಕೆಲವು ಮಹಿಳೆಯರಲ್ಲಿ ಗರ್ಭಕೋಶ ಜಾರುತ್ತದೆ. ಅಂತಹ ಪ್ರಕರಣಗಳಲ್ಲಿ ಗರ್ಭಕೋಶ ತೆಗೆಯಲಾಗುತ್ತದೆ’ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿ ಕಾರಿ ಡಾ.ಮಹೇಶ ಬಡ್ಡಿ ವಿವರಿಸಿದರು.

‘ಅಪೌಷ್ಟಿಕತೆಗೆ ಉತ್ತಮ ಆಹಾರ ಸೇವೆನೆಯೇ ಪರಿಹಾರ. ಜಿಲ್ಲಾ ಆಸ್ಪತ್ರೆಯಲ್ಲಿ ತಿಂಗಳಿಗೆ 500 ಹೆರಿಗೆ ಗಳನ್ನು ಮಾಡಿಸಲಾಗುತ್ತಿದೆ. ಇದು, 325 ಹಾಸಿಗೆಗಳ ಆಸ್ಪತ್ರೆಯಾಗಿದ್ದು, 32 ವೈದ್ಯರು ಹಾಗೂ 18 ಶುಶ್ರೂಷಕಿಯರು ಇದ್ದಾರೆ. ವೈದ್ಯರು ಹಾಗೂ ಸಿಬ್ಬಂದಿ ಕೊರತೆ ಇದೆ’ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಸುನೀಲಚಂದ್ರ ಅವರಾದಿ ತಿಳಿಸಿದರು.

ಪ್ರಯೋಗಾಲಯ, ಮಹಿಳಾ ವಾರ್ಡ್ ಹಾಗೂ ಮಕ್ಕಳ ತುರ್ತು ನಿಗಾಘಟಕಕ್ಕೆ ತೆರಳಿ ದಾಖಲಾಗಿದ್ದ ಮಕ್ಕಳು ಹಾಗೂ ಮಹಿಳೆಯರ ಆರೋಗ್ಯ ಮತ್ತು ವೈದ್ಯಕೀಯ ಉಪಚಾರಗಳ ಕುರಿತು ವಿಚಾರಿಸಿದರು.

ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷೆ ಮಮತಾಜಬಿ ತಡಸ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಎಂ.ಎನ್.ಮಾಳಗೇರ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಡಿ.ಎಚ್. ಲಲಿತಾ ಮತ್ತಿತರರು ಇದ್ದರು.

*
ವೈದ್ಯ ವೃತ್ತಿಯು ದೇವರ ಕೆಲಸಕ್ಕೆ ಸಮ. ಆದರೆ, ಕೆಲವು ವೈದ್ಯರು ದೆವ್ವಗಳ ರೀತಿಯಲ್ಲಿ ವರ್ತಿಸುವುದು ಖೇದಕರ.
-ನಾಗಲಕ್ಷ್ಮಿಬಾಯಿ,
ಅಧ್ಯಕ್ಷರು, ರಾಜ್ಯ ಮಹಿಳಾ ಆಯೋಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT