ADVERTISEMENT

ಗುಂಡಿ ಬಿದ್ದ ರಸ್ತೆ, ಸಂಚಾರ ದುಸ್ತರ

​ಪ್ರಜಾವಾಣಿ ವಾರ್ತೆ
Published 21 ಜುಲೈ 2017, 6:56 IST
Last Updated 21 ಜುಲೈ 2017, 6:56 IST

ಹಿರೇಕೆರೂರ: ತಾಲ್ಲೂಕಿನ ಚಿಕ್ಕೇರೂರು ಗ್ರಾಮದ ಮಧ್ಯದಲ್ಲಿ ಹಾಯ್ದು ಹೋಗಿರುವ ಹಾವೇರಿ–ಸೊರಬ ರಾಜ್ಯ ಹೆದ್ದಾರಿ ವಿಸ್ತರಣೆ ಕಾಮಗಾರಿ ಹಾಗೂ ಗುಂಡಿ ಬಿದ್ದ ರಸ್ತೆಯಿಂದ ಗ್ರಾಮಸ್ಥರು ತತ್ತರಿಸಿ ಹೋಗಿದ್ದಾರೆ. ವಿಸ್ತರಣೆಗಾಗಿ ಅಲ್ಲಲ್ಲಿ ರಸ್ತೆ ಬದಿಯ ನೂರಾರು ಮನೆ, ಕಟ್ಟಡಗಳನ್ನು ಒಡೆದು ಹಾಕಲಾಗಿದೆ. ಬೇಸಿಗೆಯಲ್ಲಿ ದೂಳಿಗೆ ಕಾರಣವಾಗಿದ್ದ  ಪ್ರದೇಶವು, ಇದೀಗ ಮಳೆ ಸುರಿಯುತ್ತಿರುವ ಕಾರಣ ಕೆಸರುಗದ್ದೆಯಾಗಿ ಮಾರ್ಪಟ್ಟಿದೆ.

ಮನೆಗಳ ತೆರವುಗೊಳಿಸಿದ ಮಣ್ಣು ಬಿದ್ದು ರಸ್ತೆಯಲ್ಲಿ ಸಂಚಾರವೇ ದುಸ್ತರಗೊಂಡಿದೆ. ಕಟ್ಟಡಗಳ ಅವಶೇಷಗಳು ರಸ್ತೆಯ ಬದಿಯ ಎರಡೂ ಬದಿಗಳ ಚರಂಡಿಗಳು ತುಂಬಿದ್ದು, ಮಳೆ ನೀರು ರಸ್ತೆ ಆವರಿಸುತ್ತಿದೆ. ರಸ್ತೆ ಜಲಾವೃತಗೊಳ್ಳುವ ಕಾರಣ ಬೈಕ್ ಸವಾರರು ಹಾಗೂ ಸಣ್ಣ ವಾಹನಗಳ ಸವಾರರು ಹರಸಾಹಸ ಪಡುತ್ತಿದ್ದಾರೆ.

‘ಗ್ರಾಮದ ಒಳಗಿನ ರಸ್ತೆ ಸಂಪೂರ್ಣ ಹಾಳಾಗಿದ್ದು, ಜನತೆ ಶಪಿಸುವಂತಾಗಿದೆ. ಜನ ನಮ್ಮನ್ನು ಪ್ರಶ್ನಿಸುತ್ತಿದ್ದಾರೆ. ರಸ್ತೆ ದುರಸ್ತಿಯನ್ನೂ ತ್ವರಿತವಾಗಿ ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಕ್ಷಣ ಪತ್ರ ಬರೆದು ಒತ್ತಾಯಿಸಬೇಕು’ ಎಂದು ಇತ್ತೀಚೆಗೆ ನಡೆದ ಗ್ರಾಮ ಸಭೆಯಲ್ಲಿ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಮಂಜುನಾಥ ಶೆಟ್ಟರ್ ಒತ್ತಾಯಿಸಿದ್ದಾರೆ.

ADVERTISEMENT

ಈ ಕುರಿತು ಪ್ರತಿಕ್ರಿಯಿಸಿರುವ ಪಿಡಿಒ ಎಂ.ಎನ್.ಕೋಣಸಾಲಿ, ‘ಗ್ರಾಮದ ರಸ್ತೆಯನ್ನು ತಕ್ಷಣ ದುರಸ್ತಿ ಮಾಡಲು ಕ್ರಮ ಕೈಗೊಳ್ಳಬೇಕೆಂದು ಲೋಕೋಪಯೋಗಿ ಇಲಾಖೆಗೆ ಪತ್ರ ಬರೆಯಲಾಗಿದೆ. ಮಳೆ ಬರುತ್ತಿರುವ ಪರಿಣಾಮ ದುರಸ್ತಿ ಕಾಮಗಾರಿ ವಿಳಂಬವಾಗಿದೆ’ ಎಂದರು.

‘ಗ್ರಾಮದ ಹಿರೇಕಾಲುವೆ ಕೂಡ ಒತ್ತುವರಿಯಾಗುತ್ತಿದೆ. ಇದರಲ್ಲಿಕೆಲವರು ಮನೆ, ಅಂಗಡಿ ನಿರ್ಮಿಸಿಕೊಂಡು ಸ್ಥಳೀಯರಿಗೆ ಕಿರಿಕಿರಿ ಉಂಟು ಮಾಡುತ್ತಿರುವ ದೂರು ಬಂದಿವೆ. ಇಲ್ಲಿನ ಒತ್ತುವರಿಯನ್ನು ತೆರವುಗೊಳಿಸಿ, ನೀರು ಹರಿದು ಹೋಗುವಂತೆ ವ್ಯವಸ್ಥೆ ಕಲ್ಪಿಸಬೇಕೆಂದು ಲೋಕೋಪಯೋಗಿ ಇಲಾಖೆಗೆ ಬರೆದ ಪತ್ರದಲ್ಲಿ ಒತ್ತಾಯಿಸಲಾಗಿದೆ’ ಎಂದೂ ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.