ADVERTISEMENT

ಗೊಂದಲ ನಿವಾರಣೆಗೆ ಆಗ್ರಹ

ಪಿಯುಸಿ ಫಲಿತಾಂಶ: ಭಾರತ ವಿದ್ಯಾರ್ಥಿ ಫೆಡರೇಷನ್‌ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 23 ಮೇ 2015, 9:02 IST
Last Updated 23 ಮೇ 2015, 9:02 IST

ಹಾವೇರಿ: ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ಲಕ್ಷ್ಯವನ್ನು ಖಂಡಿಸಿ ಹಾಗೂ ಪಿಯು ಪರೀಕ್ಷಾ ಮರು ಮೌಲ್ಯಮಾಪನದ ಶುಲ್ಕ ಇಳಿಸಬೇಕು ಎಂದು ಒತ್ತಾಯಿಸಿ ಶುಕ್ರವಾರ ಭಾರತ ವಿದ್ಯಾರ್ಥಿ ಒಕ್ಕೂಟ (ಎಸ್‌ಎಫ್‌ಐ) ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ವಿದ್ಯಾರ್ಥಿಗಳು ನಗರದ ತಹಶೀಲ್ದಾರ್‌ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಎಸ್‌ಎಫ್‌ಐ ಜಿಲ್ಲಾ ಘಟಕದ ಅಧ್ಯಕ್ಷೆ ರೇಣುಕಾ ಕಹಾರ ಮಾತನಾಡಿ, ‘ದ್ವಿತೀ ಯ ಪಿಯು ಪರೀಕ್ಷಾ ಫಲಿತಾಂಶ  ಸಾಕಷ್ಟು ಲೋಪದೋಷಗಳಿಂದ ಕೂಡಿದೆ.  ಶಿಕ್ಷಣ ಇಲಾಖೆಯ ವೆಬ್‌ಸೈಟ್‌ನಲ್ಲಿ ಪ್ರಕಟವಾಗಿ ರುವ  ಫಲಿತಾಂಶ ಮತ್ತು ಕಾಲೇಜುಗಳಲ್ಲಿ ಪ್ರಕಟಗೊಂಡ ಪರೀಕ್ಷಾ ಫಲಿತಾಂಶದ ಪ್ರತಿಯಲ್ಲಿನ ಅಂಕಗಳಲ್ಲಿ ಕೂಡ ಸಾಕಷ್ಟು ವ್ಯತ್ಯಾಸಗಳು ಕಂಡು ಬಂದಿವೆ. ಅಲ್ಲದೇ, ಒಂದೇ ವಿದ್ಯಾರ್ಥಿಯ ಅಂಕಗಳು ಒಂದೊಂದು ವೆಬ್‌ಸೈಟ್‌ನಲ್ಲಿ ಒಂದೊಂದು ರೀತಿ ಪ್ರಕಟಗೊಂಡಿವೆ’ ಎಂದು ಆರೋಪಿಸಿದರು.

‘ಫಲಿತಾಂಶದ ದಿನದಿಂದಲೇ ವಿದ್ಯಾ ರ್ಥಿಗಳು ಬೀದಿಗಿಳಿದು ಪ್ರತಿಭಟನೆ ನಡೆ ಸುತ್ತಿದ್ದರೂ ಸಚಿವರು, ಶಿಕ್ಷಣ ಇಲಾಖೆಯ ಜವಾಬ್ದಾರಿಯುತ ಅಧಿಕಾರಿಗಳು ಮೌನ ವಹಿಸಿ ಬೇಜವಾಬ್ದಾರಿಯನ್ನು ಪ್ರದರ್ಶಿಸಿ ದ್ದಾರೆ.  ಪರೀಕ್ಷಗೆ ಹಾಜರಾಗಿದ್ದ ಸಾಕಷ್ಟು ವಿದ್ಯಾರ್ಥಿಗಳ ಫಲಿತಾಂಶವೂ ಈ ತನಕ ಪ್ರಕಟಗೊಂಡಿಲ್ಲ’ ಎಂದು ದೂರಿದರು.

‘ಪೂರಕ ಪರೀಕ್ಷೆ, ಮರು ಮೌಲ್ಯಮಾಪನಕ್ಕೆ, ಉತ್ತರ ಪತ್ರಿಕೆ ನಕಲು ಪ್ರತಿಗೆ ಶುಲ್ಕ ಏರಿಕೆ ಮಾಡಿದ್ದು. ವಿದ್ಯಾರ್ಥಿಗಳ ಮೇಲೆ ಮತ್ತಷ್ಟು ಹೊರೆ ಹಾಕುವುದರ ಜೊತೆಗೆ ಶಿಕ್ಷಣ ಇಲಾಖೆಯ ಮೇಲೆ ವಿದ್ಯಾರ್ಥಿಗಳು ಇಟ್ಟಿರುವ ವಿಶ್ವಾಸವನ್ನು ಕಳೆದುಕೊಳ್ಳುತ್ತಿದೆ’ ಎಂದು ಆರೋಪಿಸಿದ ಅವರು, ‘ಸರ್ಕಾರ ಪರೀಕ್ಷಾ ಫಲಿತಾಂಶದಲ್ಲಿನ ಗೊಂದಲಗಳನ್ನು ಕೂಡಲೇ ಸರಿಪಡಿಸಬೇಕು’ ಎಂದು ಆಗ್ರಹಿಸಿದರು.

ಎಸ್‌ಎಫ್‌ಐ ಮುಖಂಡರಾದ ಚಂದ್ರು ಶಂಕ್ರಪ್ಪನವರ, ಮಲ್ಲಿಕಾರ್ಜುನ ಕುರುಬರ, ಜಾವೀದ ನದಾಫ್‌,  ದೇವರಾಜ ರಿತ್ತಿ, ಶಿವರಾಜ, ಸುನೀಲ, ಕಿರಣ ಹಡಪದ, ವಿನಾಐಕ ವೈ. ಮತ್ತಿತರರು ಇದ್ದರು.

ಬಡವರ, ಸಾಮಾನ್ಯ ಜನರ ಶೈಕ್ಷಣಿಕ ಪ್ರಗತಿಗೆ ಅನುಕೂಲಕರವಾದ ನೀತಿಗಳನ್ನು ಸರ್ಕಾರ ಹಾಗೂ ಶಿಕ್ಷಣ ಇಲಾಖೆ ಜಾರಿಗೊಳಿಸಬೇಕು
ರೇಣುಕಾ ಕಹಾರ, ಎಸ್‌ಎಫ್‌ಐ ಜಿಲ್ಲಾ ಘಟಕದ ಅಧ್ಯಕ್ಷೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.