ADVERTISEMENT

ಛಲ ಬಿಡದ ಅಕ್ಷತಾ ‘ಓಟ’

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2015, 9:56 IST
Last Updated 2 ಆಗಸ್ಟ್ 2015, 9:56 IST

ಹಾವೇರಿ: ರಾಷ್ಟ್ರೀಯ, ಅಂತರ ರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆಲ್ಲುವ ತವಕ. ದಾಖಲೆ ಬರೆಯುವ ಇಚ್ಛೆ. ಅದಕ್ಕಾಗಿ  ಪ್ರತಿನಿತ್ಯ ಬೆಳಿಗ್ಗೆ 5 ಗಂಟೆಯಿಂದಲೇ ಅಭ್ಯಾಸ. ಇಂತಹ ಗುರಿ ಜೊತೆ ಪರಿಶ್ರಮ ಹಾಕುತ್ತಿರುವ ಪ್ರತಿಭೆಯೇ ಹಾವೇರಿಯ ವಿದ್ಯಾನಗರದ ಅಕ್ಷತಾ ಎಚ್‌. ಪ್ರಾಥಮಿಕ, ಪ್ರೌಢ ಹಾಗೂ ಪಿಯು ವಿನಲ್ಲಿ ತಾಲ್ಲೂಕು, ಜಿಲ್ಲಾ ಮಟ್ಟದ ವೇಗದ ಹಾಗೂ ದೂರದ ಓಟದಲ್ಲಿ ಗೆಲ್ಲುವ ಮೂಲಕ ‘ಸೈ’ ಅನಿಸಿಕೊಂಡ ಅಕ್ಷತಾ ಈಗ ರಾಜ್ಯ ಮಟ್ಟದಲ್ಲೂ ಪ್ರಶಸ್ತಿ ಗೆದ್ದಿದ್ದಾರೆ.

ಗೋವಾ, ಮಂಗಳೂರು, ಬೆಂಗಳೂರು, ಚಿತ್ರದುರ್ಗ, ಗದಗ, ಕೊಪ್ಪಳ, ಧಾರವಾಡ, ಉಡುಪಿ, ವಿಜಯಪುರ, ಬೆಳಗಾವಿ, ದಾವಣಗೆರೆ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ನಡೆಯುವ ದಸರಾ, ಪೈಕಾ, ಮಹಿಳಾ, ಗ್ರಾಮೀಣ ಕ್ರೀಡಾ ಕೂಟದಲ್ಲಿ ಪಾಲ್ಗೊಂಡು ಪದಕ ಜಯಿಸಿದ್ದಾರೆ. ವಿವಿಧ ಕ್ರೀಡಾ ಸ್ಪರ್ಧೆಯಲ್ಲಿ ಪಾಲ್ಗೊಂಡು ಈಗಾಗಲೇ 45 ಪದಕ ಮುಡಿಗೇರಿಸಿಕೊಂಡಿದ್ದಾರೆ.

‘ನಾನು ಬಾಲ್ಯದಲ್ಲಿಯೇ ಅಪ್ಪ ಹಾಗೂ ಅಮ್ಮನನ್ನು ಕಳೆದುಕೊಂಡೆ. ಚಿಕ್ಕಮ್ಮ ಹಾಗೂ ಸೋದರ ಮಾವನ ಆಶ್ರಯದಲ್ಲಿ ಬೆಳೆಯುತ್ತಿದ್ದೇನೆ. ಓಟ ನನ್ನ ಮೆಚ್ಚಿನ ಆಯ್ಕೆ. ಅದಕ್ಕಾಗಿ ಹೆತ್ತವರನ್ನು ಕಳೆದುಕೊಂಡ ನೋವನ್ನು ಮೀರಿ ಸಾಧಿಸಲು ಯತ್ನಿಸುತ್ತಿದ್ದೇನೆ’ ಎನ್ನುತ್ತಾರೆ ಅಕ್ಷತಾ ಎಚ್‌. ‘ಊಟ ನಿದ್ದೆಗಿಂತ ಹೆಚ್ಚಾಗಿ ನನಗೆ ಓಟಗಾರ್ತಿ ಆಗಬೇಕು ಎಂಬ ಆಶಯ ಕಾಡುತ್ತಿದೆ. ಅದಕ್ಕಾಗಿ ಈ ಪರಿಶ್ರಮ ಹಾಕುತ್ತಿದ್ದೇನೆ. ಜಿಲ್ಲೆಯಲ್ಲಿ ಕಾಯಂ ಆಗಿ ನುರಿತ ಕೋಚ್‌ ಇಲ್ಲದ ಕಾರಣ ಕ್ರೀಡಾಪಟುಗಳಿಗೆ ಹಿನ್ನಡೆಯಾಗಿದೆ’ ಎನ್ನುತ್ತಾರೆ. ಹೀಗೆ ಹೆತ್ತವ ರನ್ನು ಕಳೆದುಕೊಂಡ ನೋವಿನ ನಡುವೆಯೂ, ಛಲ ಹಿಡಿದು ಸಾಧನೆ ಮಾಡುತ್ತಿರುವ ಅಕ್ಷತಾ ಇತರ ಕ್ರೀಡಾ ಪಟುಗಳಿಗೂ ಮಾದರಿಯಾಗಿದ್ದಾಳೆ.

ಪಡೆದಿರುವ ಪ್ರಶಸ್ತಿಗಳು :
* ಪಂಚಾಯತ್‌ ಯುವ ಕ್ರೀಡಾ ಔರ್‌ ಖೇಲ್‌ ಅಭಿಯಾನ್‌ (ಪೈಕಾ)ದ ರಾಜ್ಯ ಮಟ್ಟದ ಮಹಿಳಾ ಕ್ರೀಡಾ ಕೂಟದ 4*100 ಮೀ. ರಿಲೇ 2011–12 ರಲ್ಲಿ ತೃತೀಯ, 2012–13ರಲ್ಲಿ ದ್ವಿತೀಯ.
* ‘ಪೈಕಾ’ ಜಿಲ್ಲಾ ಮಟ್ಟದ ಗ್ರಾಮೀಣ ಕ್ರೀಡಾ ಕೂಟದಲ್ಲಿ 2013–14ರಲ್ಲಿ 100 ಮೀ. ಓಟ (ತೃತೀಯ), ಹಾಕಿ (ಪ್ರಥಮ), ಜಿಲ್ಲಾ ಮಟ್ಟದ ಮಹಿಳಾ ಕ್ರೀಡಾ ಕೂಟ 2013–14 ರಲ್ಲಿ 100 ಮೀ.ಓಟ (ದ್ವಿತೀಯ), 200ಮೀ. ಓಟ (ಪ್ರಥಮ).
* ರಾಜೀವ್‌ಗಾಂಧಿ ಖೇಲ್‌ ಅಭಿಯಾನ್‌ (ಆರ್‌.ಜಿ.ಕೆ.ಎ) ಜಿಲ್ಲಾ ಮಟ್ಟದ ಮಹಿಳಾ ಕ್ರೀಡಾಕೂಟ 2014–15ರಲ್ಲಿ 4*100 ಮೀ. ರಿಲೇ, 100 ಮಿ.ಓಟ (ತೃತೀಯ).

* ಪದವಿ ಪೂರ್ವ ಶಿಕ್ಷಣ ಇಲಾಖೆಯ ಜಿಲ್ಲಾ ಮಟ್ಟದ ಪದವಿ ಕಾಲೇಜುಗಳ ಜಿಲ್ಲಾ ಮಟ್ಟದ ಕ್ರೀಡಾಕೂಟ 2014–15 100 ಮೀ. ಓಟ (ದ್ವಿತೀಯ) 200 ಮೀ. (ಪ್ರಥಮ)
* ಜಿಲ್ಲಾ ಮಟ್ಟದ ದಸರಾ ಕ್ರೀಡಾ ಕೂಟ 2009–10 ರಲ್ಲಿ 100 ಮೀ. ಓಟ 4*400 ರಿಲೇ  (ಪ್ರಥಮ), 100 ಮೀ. (ದ್ವಿತೀಯ), 200 ಮೀ.(ತೃತೀಯ), 2010–11 4*400 ರಿಲೇ , 4*100 ರಿಲೇ, 100 ಮೀ. ಓಟ , 400 ಮೀ. ಓಟ , 800 ಮೀ. ಓಟ (ಪ್ರಥಮ),
* ಜಿಲ್ಲಾ ಮಟ್ಟದ ಪ್ರಾಥಮಿಕ ಶಾಲೆಗಳ ಇಲಾಖೆ ಕ್ರೀಡಾ ಕೂಟ 2010–11ರಲ್ಲಿ 100 ಮೀ.ಓಟ (ದ್ವಿತೀಯ), 200ಮೀ. ಓಟ (ಪ್ರಥಮ) ಸ್ಥಾನ ಪಡೆದಿದ್ದಾರೆ.    –ದಾವೂದ್‌ಸಾಬ್‌ ನದಾಫ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.