ADVERTISEMENT

‘ಜನಧನ: ಬ್ಯಾಂಕಿಂಗ್ ವ್ಯಾಪ್ತಿಗೆ ಸರ್ವ ಜನ’

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2017, 10:25 IST
Last Updated 18 ಫೆಬ್ರುವರಿ 2017, 10:25 IST
ಹಾವೇರಿ: ‘ದೇಶದ ಎಲ್ಲ ವರ್ಗದ ಜನರನ್ನು ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ತೊಡಗಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಜನ ಧನ ಯೋಜನೆಯನ್ನು ಜಾರಿಗೆ ತಂದರು. ಅಧಿಕ ಮುಖಬೆಲೆಯ ನೋಟು ರದ್ದತಿಯು ಕಾಳಧನಿಕರ ನಿಯಂತ್ರಣಕ್ಕೆ  ಸಹಾಯವಾಗಿದೆ’ ಎಂದು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ನ ವ್ಯವಸ್ಥಾಪಕ ಭಗತ್ ಜಿ.ಕೆ ಹೇಳಿದರು.
 
ಇಲ್ಲಿಗೆ ಸಮೀಪದ ಕೆರಿಮತ್ತಿಹಳ್ಳಿಯ ಕರ್ನಾಟಕ ವಿಶ್ವವಿದ್ಯಾಲಯ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಜಿಲ್ಲಾ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ, ನೆಹರೂ ಯುವ ಕೇಂದ್ರ ಹಾಗೂ ಶ್ರೀನಿಧಿ ಮಹಿಳಾ ಸೇವಾ ಸಮಿತಿ ಆಶ್ರಯದಲ್ಲಿ ಬುಧವಾರ ನಡೆದ ‘ಜನಧನ ಯೋಜನೆ’ ಕುರಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
 
‘ಜನಧನ ಯೋಜನೆಯಲ್ಲಿ ಕುಟುಂಬ ಮುಖ್ಯಸ್ಥರಿಗೆ ಮಾತ್ರ ವಿಮಾ ಸೌಲಭ್ಯವಿದೆ. 18ರಿಂದ 60 ವರ್ಷದೊಳಗಿನವರು ವ್ಯಾಪ್ತಿಗೆ ಒಳಪಡುತ್ತಾರೆ. ಸಹಜವಾಗಿ ಮರಣ ಹೊಂದಿದರೆ ₹30 ಸಾವಿರ ಹಾಗೂ ಅಪಘಾತದಲ್ಲಿ ಮೃತರಾದರೆ ₹ 1 ಲಕ್ಷ ವಿಮಾ ಸೌಲಭ್ಯ ಸಿಗುತ್ತದೆ’ ಎಂದರು.
 
‘ಜನ ಧನ ಬ್ಯಾಂಕ್‌ ಖಾತೆ ತೆರೆಯಲು ಆಧಾರ್‌ ಕಡ್ಡಾಯ. ಆಧಾರ್‌ ಇಲ್ಲದಿದ್ದರೆ, ಚುನಾವಣಾ ಗುರುತಿನ ಚೀಟಿ ಅಥವಾ ವಾಹನ ಚಾಲನಾ ಪರವಾನಗಿ ನೀಡಬಹುದು. ಸರ್ಕಾರದಿಂದ ಲಭ್ಯವಾಗುವ ಎಲ್ಲ ಸಬ್ಸಿಡಿ, ಸೌಲಭ್ಯಗಳು ಈ ಖಾತೆಯ ಮೂಲಕ ನೀಡುವುದರಿಂದ ಭ್ರಷ್ಟಾಚಾರವನ್ನು ತಡೆದು, ಯೋಗ್ಯ ರೀತಿಯಲ್ಲಿ ಹಣ ಬಳಕೆ ಮಾಡಿಕೊಳ್ಳಲು ನೆರವಾಗುತ್ತದೆ’ ಎಂದರು.
 
ಗಾಂಧಿಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್ ಸಂಯೋಜನಾಧಿಕಾರಿ ಚಂದ್ರಪ್ರಭಾ ಪಟಗಾರ ಮಾತನಾಡಿ, ‘ಬಡವರ, ದೀನ ದಲಿತರ ಬಗ್ಗೆ ಸೇವಾ ಮನೋಭಾವ ಬೆಳೆಸುವುದೇ ಎನ್.ಎಸ್.ಎಸ್‌ನ  ಮೂಲ ಉದ್ದೇಶ. ಎನ್‌ಎಸ್‌ಎಸ್ ಸ್ವಯಂ ಸೇವಕ ಸಮಾಜದ ಸೇವೆಗೆ ಸದಾ ಕಂಕಣಬದ್ಧರಾಗಿರಬೇಕು’ ಎಂದರು.
 
ಸಹ ಪ್ರಾಧ್ಯಾಪಕ ಮಲ್ಲಪ್ಪ ಬಂಡಿ ಮಾತನಾಡಿ, ‘ಚರಿತ್ರೆಯ ಪ್ರತಿ ಹಂತದಲ್ಲಿಯೂ ಮಾನವ ಸಂಬಂಧಗಳು  ಸಮನಾಗಿಲ್ಲ. ಹಿಂದಿನ ಕಾಲಘಟ್ಟದಲ್ಲಿ ಮಹಿಳೆಯರು ಅಧೀನವಾಗಿ ಉಳಿದಿರುವ ಅಂಶ ಬೇಳಕಿಗೆ ಬರುತ್ತವೆ. ಅದನ್ನು ಹೋಗಲಾಡಿಸಬೇಕು. ಇದಕ್ಕೆ ಅಡ್ಡಿಯಾದ ಸಮಾಜಿಕ ಹಾಗೂ ಸಾಂಸ್ಕೃತಿಕ ಚೌಕಟ್ಟಿನ ಎಲ್ಲ ಕಟ್ಟಳೆಗಳನ್ನು ಒಡೆದು ಹಾಕಬೇಕು’ ಎಂದರು.
 
ಅತಿಥಿ ಉಪನ್ಯಾಸಕ ಬಿ.ಬಿ.ಹಡಪದ ’ಅಂಗವಿಕಲತೆ ಮತ್ತು ಅವರ ಹಕ್ಕುಗಳು’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ನ ಪ್ರಾದೇಶಿಕ ಪ್ರಬಂಧಕ ಬಾಲಚಂದ್ರ ಶೆಟ್ಟಿ, ಸಹಪ್ರಾಧ್ಯಾಪಕ ಪ್ರಶಾಂತ ಎಚ್.ವೈ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.