ADVERTISEMENT

ತಹಶೀಲ್ದಾರ್ ವಿರುದ್ಧ ದೂರು

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2017, 4:52 IST
Last Updated 19 ಏಪ್ರಿಲ್ 2017, 4:52 IST

ಹಾವೇರಿ: ‘ಹಾವೇರಿ ತಾಲ್ಲೂಕಿನ ಗ್ರಾಮ ಲೆಕ್ಕಾಧಿಕಾರಿಗಳಿಗೆ ತಹಶೀಲ್ದಾರ್ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ಅವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳ­ಬೇಕು’ ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ಸದಸ್ಯರು ಮಂಗಳವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಕಂದಾಯ ಇಲಾಖೆಯಲ್ಲಿ ಗ್ರಾಮ ಲೆಕ್ಕಾಧಿಕಾರಿಗಳ ಪಾತ್ರ ಪ್ರಮುಖವಾಗಿದೆ. ವ್ಯಕ್ತಿಯ ಜನನದಿಂದ ಮರಣಾನಂತರ ತನಕ ಪ್ರಮುಖ ವರದಿಗಳನ್ನು ಗ್ರಾಮಲೆಕ್ಕಾಧಿಕಾರಿಗಳು ನಿರ್ವಹಿಸು­ತ್ತಾರೆ. ಈ ನಡುವೆಯೇ ಪಡಿತರ ಚೀಟಿಯ ಕಾರ್ಯವನ್ನು ವಹಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ರಾಜ್ಯ ಪದಾಧಿಕಾರಿಗಳು, ಸರ್ಕಾರಕ್ಕೆ ಮನವಿ ಮಾಡಿ ಪಡಿತರ ಚೀಟಿಯ ಜವಾಬ್ದಾರಿಯನ್ನು ಆಹಾರ ನಿರೀಕ್ಷಕರಿಗೆ ವಹಿಸಿದ್ದಾರೆ.

ಆದರೆ, ಹಾವೇರಿ ತಹಶೀಲ್ದಾರರು ಮಾತ್ರ ಪಡಿತರ ಚೀಟಿ ಕಾರ್ಯವನ್ನು ನಿರ್ವಹಿಸುವಂತೆ ಒತ್ತಡ ಹೇರುತ್ತಾರೆ. ಇಲ್ಲದಿದ್ದಲ್ಲಿ ಕ್ರಮಕೈಗೊಳ್ಳುತ್ತೇನೆ ಎಂದು ನಿಂದಿಸುತ್ತಾರೆ. ಅಲ್ಲದೇ, ಪ್ರತಿ ತಿಂಗಳು ಕ್ಲುಪ್ತ ಸಮಯಕ್ಕೆ ಸಂಬಳ ಬಿಡುಗಡೆ ಮಾಡುವುದಿಲ್ಲ’ ಎಂದಿದ್ದಾರೆ.‘ಬರದಲ್ಲೂ ಕರ್ತವ್ಯ ನಿರ್ಲಕ್ಷಿಸುವ ಸಿಬ್ಬಂದಿಗೆ ಏನು ಮಾಡಬೇಕು?’: ‘ತಾಲ್ಲೂಕಿ­ನಲ್ಲಿ ತೀವ್ರ ಬರ ಇದ್ದು, ಎಲ್ಲ ಸಿಬ್ಬಂದಿ ತ್ವರಿತಗತಿಯಲ್ಲಿ ಜನರ ಸಮಸ್ಯೆಗೆ ಸ್ಪಂದಿಸಬೇಕಾಗಿದೆ. ಈಗಲೂ ಕರ್ತವ್ಯ ನಿರ್ಲಕ್ಷಿಸುವ ಸಿಬ್ಬಂದಿಗೆ ಕೆಲಸ ಮಾಡುವಂತೆ ಒತ್ತಡ ಹೇರದೇ ಬಿಡಬೇಕೇ?’ ಎಂದು ತಹಶೀಲ್ದಾರ್‌ ಜಿ.ಬಿ. ಮಜ್ಜಗಿ ಪ್ರತಿಕ್ರಿಯಿಸಿದ್ದಾರೆ.

ADVERTISEMENT

‘ಬರದ ಪರಿಣಾಮ ಜನರಿಗೆ ನೀರು, ಪಡಿತರ ನೀಡುವುದು ಬಹುಮುಖ್ಯ. ಆದರೆ, ‘ಪಡಿತರ’ದ ಕೆಲಸ ಮಾಡುವುದಿಲ್ಲ’ ಎನ್ನುವ ಸಿಬ್ಬಂದಿಗೆ ಏನು ಮಾಡಬೇಕು? ಎಂದು ಜನತೆಯೇ ತಿಳಿಸಲಿ’ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.