ADVERTISEMENT

ನಗರಸಭೆ ನಿರ್ಲಕ್ಷ್ಯ: 2 ವಾರದಿಂದ ನೀರಿಲ್ಲ

20 ವರ್ಷಗಳಲ್ಲಿ ಪರ್ಯಾಯ ಪಂಪ್‌ನ ವ್ಯವಸ್ಥೆ ಈತನಕ ಮಾಡದ ನಗರಸಭೆ ಆಡಳಿತ

ಹರ್ಷವರ್ಧನ ಪಿ.ಆರ್.
Published 30 ಜನವರಿ 2017, 6:01 IST
Last Updated 30 ಜನವರಿ 2017, 6:01 IST
ನಗರಸಭೆ ನಿರ್ಲಕ್ಷ್ಯ: 2 ವಾರದಿಂದ ನೀರಿಲ್ಲ
ನಗರಸಭೆ ನಿರ್ಲಕ್ಷ್ಯ: 2 ವಾರದಿಂದ ನೀರಿಲ್ಲ   

ಹಾವೇರಿ: ಬರದ ಪರಿಣಾಮ ಉತ್ತರ ಕರ್ನಾಟಕದ ಬಹುತೇಕ ನಗರಗಳಲ್ಲಿ ನೀರಿನ ಸಮಸ್ಯೆ ಉದ್ಭವಿಸುತ್ತದೆ. ಆದರೆ, ಹಾವೇರಿಯಲ್ಲಿ ನಗರಸಭೆಯ ನಿರ್ಲಕ್ಷ್ಯ ಹಾಗೂ ಸ್ವಯಂಕೃತ ತಪ್ಪುಗಳ ಪರಿಣಾಮ ಹದಿನೈದಕ್ಕಿಂತಲೂ ಹೆಚ್ಚು  ದಿನಗಳಿಂದ ನೀರು ಪೂರೈಕೆ ವಿಫಲ ಗೊಂಡಿದೆ. ಹಗಲು–ರಾತ್ರಿ ಎನ್ನದೇ ಜನತೆ ಬಿಂದಿಗೆ ಹಿಡಿದು ನೀರಿಗಾಗಿ ಅಲೆದಾಡುವ ಚಿತ್ರಣ ಹೆಚ್ಚಾಗುತ್ತಿದೆ.

ತುಂಗಭದ್ರಾ ನದಿಗೆ ಕೆಂಚಾರಗಟ್ಟಿಯ ಬಳಿ ಮರಳಿನ ತಡೆಗೋಡೆ ನಿರ್ಮಿಸುವ ಮೂಲಕ ನಗರಕ್ಕೆ ಬೇಸಿಗೆಯಲ್ಲಿ ನೀರು ಪೂರೈಸುವುದು ವಾಡಿಕೆ. ನೀರಿನ ಹರಿವನ್ನು ಆಧರಿಸಿ ಮರಳಿನ ತಡೆಗೋಡೆ ನಿರ್ಮಿಸಲಾಗುತ್ತದೆ. ಈ ಬಾರಿ ಬರದ ಪರಿಣಾಮ ಮುಂಚಿತವಾಗಿ ಕ್ರಮಕೈಗೊಳ್ಳಬೇಕಿತ್ತು.

ಆದರೆ, ಡಿಸೆಂಬರ್ ತನಕವೂ ನಗರಸಭೆ ನೀರಿನ ಸಮಸ್ಯೆ ಬಗೆಹರಿಸುವ ಗೋಜಿಗೆ ಹೋಗಿಲ್ಲ. ತುಂಗಭದ್ರಾ ನದಿಯಲ್ಲಿ ನೀರು ಬತ್ತಿದ ಬಳಿಕ ಮರಳಿನ ತಡೆಗೋಡೆ ಹಾಕಲಾಗಿದೆ. ಅಲ್ಲಿನ ಜಾಕ್‌ವೆಲ್ ನಿರ್ಮಾಣವೇ ಅವೈಜ್ಞಾನಿಕವಾಗಿದೆ. ಜಾಕ್‌ವೆಲ್ ದಡಕ್ಕೆ ಸಮೀಪವಿದ್ದ ಕಾರಣ ನದಿಯಲ್ಲಿದ್ದ ನೀರೂ ಬರುತ್ತಿಲ್ಲ.
ಇದ್ದ ನೀರನ್ನೂ ಪೂರೈಸಲು ನಗರಸಭೆಗೆ ಸಾಧ್ಯವಾಗಿಲ್ಲ. 

‘ಜಾಕ್‌ವೆಲ್‌ಗೆ ನೀರು ಬಾರದ ಪರಿಣಾಮ ಸಮಸ್ಯೆ ಉದ್ಭವಿಸಿದೆ’ ಎನ್ನುತ್ತಾರೆ ಪೌರಾಯುಕ್ತ ಶಂಕರ ಬಾರ್ಕಿ.

ಪಂಪ್ ರಾಜಕೀಯ:  ಕೆಂಚಾರಗಟ್ಟಿಯಲ್ಲಿ ಆಗಾಗ್ಗೆ ಪಂಪ್ ಕೆಡುವುದು ಸಾಮಾನ್ಯವಾಗಿದೆ. ಆದರೆ, ಪರ್ಯಾಯ ಪಂಪ್‌ನ ವ್ಯವಸ್ಥೆಯನ್ನು ಈ ತನಕ 20 ವರ್ಷಗಳಲ್ಲಿ ನಗರಸಭೆ ಮಾಡಿಲ್ಲ. ಹೀಗಾಗಿ ಜಾಕ್‌ವೆಲ್‌ನಲ್ಲಿದ್ದ ನೀರನ್ನೂ ಪೂರೈಸಲು ಸಾಧ್ಯವಾಗಿರಲಿಲ್ಲ. 

ಭದ್ರಾ ಜಲಾಶಯ: ‘ಭದ್ರಾ ಡ್ಯಾಂನಿಂದ  0.5 ಟಿಎಂಸಿ ನೀರು ಬಿಡುಗಡೆಗೆ ಆದೇಶವಾಗಿದೆ. ಇದೇ 30ರಿಂದ ಫೆಬ್ರುವರಿ 3ರ ತನಕ ಪ್ರತಿನಿತ್ಯ 500 ಕ್ಯೂಸೆಕ್ಸ್ ಹಾಗೂ ಹಾಗೂ ಬಳಿಕ ಫೆ.3ರಿಂದ 6ರ ತನಕ ಪ್ರತಿನಿತ್ಯ  1,500 ಕ್ಯೂಸೆಕ್ಸ್ ನೀರು ಬಿಡುಗಡೆ ಆಗಲಿದೆ’ ಎಂದು ಜಿಲ್ಲಾಧಿಕಾರಿ  ತಿಳಿಸಿದ್ದಾರೆ.

ಆದರೆ, ಭದ್ರಾ ಜಲಾಶಯದಿಂದ ಕೆಂಚಾರಗಟ್ಟಿ ನೀರು ಹರಿದು ಬರಲು ಸುಮಾರು 219 ಕಿ.ಮೀ ದೂರ ಸಾಗಿ ಬರಬೇಕು. ಈ ನಡುವೆ ಇತರ ಪಟ್ಟಣಗಳ ಕುಡಿಯುವ ನೀರಿನ ಯೋಜನೆಗಳೂ ಇವೆ. ಅಲ್ಲದೇ, ಸುಮಾರು 59 ಸಾವಿರ ಪಂಪ್‌ಗಳ ಮೂಲಕ ಅನಧಿಕೃತವಾಗಿ ನೀರೆತ್ತಲಾಗುತ್ತಿದೆ. ಈ ಬಗ್ಗೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕಾಗಿದೆ.

ಇನ್ನೊಂದೆಡೆ, ಫೆಬ್ರುವರಿ ಎರಡನೇ ವಾರದಲ್ಲೇ ಹಾವನೂರು ಹಾಗೂ ಮೈಲಾರ ಜಾತ್ರೆ ನಡೆಯುತ್ತವೆ. ಆಗ ಲಕ್ಷಾಂತರ ಜನ ಬರುತ್ತಾರೆ. ಅವರೂ ನದಿ ನೀರನ್ನು ಆಶ್ರಯಿಸುತ್ತಾರೆ.

ನಗರದಲ್ಲಿ 320ಕ್ಕೂ ಹೆಚ್ಚು ಕೊಳವೆ ಬಾವಿ, 2 ಪ್ರಮುಖ ನದಿಗಳು, ಆರು ಕೆರೆಗಳಿವೆ. ಆದರೆ, ಜಿಲ್ಲಾ ಕೇಂದ್ರವಾಗಿ 2 ದಶಕ ಸಮೀಪಿಸುತ್ತಿದ್ದರೂ, ಕೇವಲ 74 ಸಾವಿರ ಜನಸಂಖ್ಯೆಯ ನಗರಕ್ಕೆ ಕನಿಷ್ಠ ವಾರಕ್ಕೆರಡು ಬಾರಿ ನೀರು ಪೂರೈಸಲು ಸಾಧ್ಯವಾಗಿಲ್ಲ. ‘ನಗರಸಭೆ ಸದಸ್ಯರ ಇಚ್ಛಾಶಕ್ತಿಯ ಕೊರತೆಯೇ ಈ ವೈಫಲ್ಯಕ್ಕೆ ಕಾರಣ’ ಎಂದು ಜನತೆ ಕಂಡ ಕಂಡಲ್ಲಿ ಹಿಡಿಶಾಪ ಹಾಕುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT