ADVERTISEMENT

ನಗರಸಭೆ: ಸಿಬ್ಬಂದಿ ಭರ್ತಿಗೆ ಕ್ರಮ

ಹಾವೇರಿಯಲ್ಲಿ ವಿವಿಧ ಕಾಮಗಾರಿಗೆ ಶಂಕುಸ್ಥಾಪನೆ: ಪೌರಾಡಳಿತ ಸಚಿವ ಈಶ್ವರ ಖಂಡ್ರೆ ಭರವಸೆ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2017, 7:22 IST
Last Updated 3 ಮಾರ್ಚ್ 2017, 7:22 IST
ಹಾವೇರಿಯ ಗುರುಭವನದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಪೌರಾಡಳಿತ ಸಚಿವ ಈಶ್ವರ ಖಂಡ್ರೆ ಅವರಿಗೆ ಕತ್ತಿ ನೀಡಿ ನಗರಸಭೆಯಿಂದ ಸನ್ಮಾನ ಮಾಡಲಾಯಿತು. ಈ ಸಂದರ್ಭದಲ್ಲಿ ಸಿಬ್ಬಂದಿ ಅವರ ಜೊತೆ ಫೋಟೊ ಕ್ಲಿಕಿಸಿಕೊಂಡರು.  ಸಚಿವ ರುದ್ರಪ್ಪ ಲಮಾಣಿ ಇದ್ದಾರೆ
ಹಾವೇರಿಯ ಗುರುಭವನದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಪೌರಾಡಳಿತ ಸಚಿವ ಈಶ್ವರ ಖಂಡ್ರೆ ಅವರಿಗೆ ಕತ್ತಿ ನೀಡಿ ನಗರಸಭೆಯಿಂದ ಸನ್ಮಾನ ಮಾಡಲಾಯಿತು. ಈ ಸಂದರ್ಭದಲ್ಲಿ ಸಿಬ್ಬಂದಿ ಅವರ ಜೊತೆ ಫೋಟೊ ಕ್ಲಿಕಿಸಿಕೊಂಡರು. ಸಚಿವ ರುದ್ರಪ್ಪ ಲಮಾಣಿ ಇದ್ದಾರೆ   

ಹಾವೇರಿ: ‘ಸ್ಥಳೀಯಾಡಳಿತ ಸಂಸ್ಥೆಗಳ ಸಿಬ್ಬಂದಿ ಭರ್ತಿಗೆ ಕ್ರಮಕೈಗೊಳ್ಳ ಲಾಗುವುದು. ಪೌರಕಾರ್ಮಿಕರನ್ನು ಹಂತ ಹಂತವಾಗಿ ಕಾಯಂಗೊಳಿಸಲಾಗು ವುದು’ ಎಂದು ಪೌರಾಡಳಿತ ಸಚಿವ ಈಶ್ವರ ಖಂಡ್ರೆ ಹೇಳಿದರು.

ನಗರದ ವಿವಿಧ ಕಾಮಗಾರಿಗಳಿಗೆ ಗುರುವಾರ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಗುರುಭವನದಲ್ಲಿ ನಡೆದ ಸಮಾರಂಭದಲ್ಲಿ  ಮಾತನಾಡಿದರು.
‘ನಗರೀಕರಣದ ಪ್ರಭಾವದಿಂದ ನಗರಕ್ಕೆ ವಲಸೆ ಬರುತ್ತಿರುವುದು ಹೆಚ್ಚುತ್ತಿದೆ. ಸದ್ಯ ಶೇ 40ರಷ್ಟು ಜನ ನಗರದಲ್ಲಿ ವಾಸವಿದ್ದಾರೆ. ಇದು ಶೇ 45ನ್ನು ದಾಟಬಹುದು. ಅದಕ್ಕೆ ಪೂರಕವಾಗಿ ನಗರದ ಮೂಲಸೌಕರ್ಯ ಅಭಿವೃದ್ಧಿ ಪಡಿಸುವ ಕಾರ್ಯ ನಡೆಯುತ್ತಿದೆ’ ಎಂದರು.

‘ನಗರೋತ್ಥಾನದಡಿಯಲ್ಲಿ ₹ 2,886 ಕೋಟಿ ನೀಡಲಾಗಿದೆ. ಈ ಪೈಕಿ ಹಾವೇರಿ ನಗರಸಭೆಗೆ ₹35 ಕೋಟಿ ಮಂಜೂರಾಗಿದೆ. ಪೌರಕಾರ್ಮಿಕರ ಕಾಯಮಾತಿ, ಖಾಲಿ ಹುದ್ದೆಯ ಭರ್ತಿಗೆ ಕ್ರಮಕೈಗೊಳ್ಳಲಾಗುತ್ತಿದೆ. ನಗರ ಮತ್ತು ಪುರಸಭೆಯ ಸದಸ್ಯರ ಗೌರವಧನವನ್ನು ಹೆಚ್ಚಿಸಲಾಗಿದೆ’ ಎಂದ ಅವರು, ‘ಅಧಿಕಾರ ವಿಕೇಂದ್ರೀಕರಣದ ಭಾಗ ವಾಗಿ ₹5 ಕೋಟಿ ತನಕದ ಕಾಮಗಾರಿ ಗಳಿಗೆ ಅನುಮೋದನೆ ನೀಡುವ ಅಧಿ ಕಾರವನ್ನು ಜಿಲ್ಲಾಧಿಕಾರಿಗೆ ನೀಡಲಾಗಿದೆ. ಪದೇ ಪದೇ ಬೆಂಗಳೂರಿಗೆ ಅಲೆಯು ವುದನ್ನು ತಪ್ಪಿಸಲಾಗಿದೆ’ ಎಂದರು.

‘ಹಾವೇರಿಯನ್ನು ಮಾದರಿ ಜಿಲ್ಲೆ ಯಾಗಿ ಮಾಡುವ ನಿಟ್ಟಿನಲ್ಲಿ ಸರ್ಕಾರವು ಹಲವು ಯೋಜನೆಗಳಿಗೆ ಅನುದಾನ ನೀಡಿದೆ. ಈ ಪೈಕಿ ನಗರಕ್ಕೆ ನೀಡಿದ ಅನುದಾನವನ್ನು ನೀವು ಸಮರ್ಪಕವಾಗಿ ಬಳಸಿದರೆ, ಮತ್ತಷ್ಟು ಅನುದಾನ ನೀಡಲು ಪೌರಾಡಳಿತ ಸಿದ್ಧವಿದೆ’ ಎಂದರು.

ಸಾವಿರಾರು ಕೋಟಿಯ ಖಾತೆ: ‘ಸಚಿವ ರುದ್ರಪ್ಪ ಲಮಾಣಿ ಬೇಡಿಕೆ ಪ್ರಕಾರ ವಿವಿಧ ಯೋಜನೆಗಳಿಗೆ ಅನುದಾನ ನೀಡಿದ್ದೇವೆ. ಈಗ ಅವರು  ಮುಜರಾಯಿ ಖಾತೆಯಿಂದ ನಮ್ಮ ಜಿಲ್ಲೆಗೆ ಹೆಚ್ಚು ಅನುದಾನ ನೀಡಬೇಕು’ ಎಂದು ಸಚಿವ ಈಶ್ವರ ಖಂಡ್ರೆ ಹೇಳಿದರು. ತಕ್ಷಣವೇ ಪ್ರತಿಕ್ರಿಯಿಸಿದ ಸಚಿವ ರುದ್ರಪ್ಪ ಲಮಾಣಿ, ‘ನಿಮ್ಮದು ಸಾವಿರಾರು ಕೋಟಿಯ ಖಾತೆ. ನನ್ನದು ಕೇವಲ ₹54 ಕೋಟಿ’ ಎಂದರು. 

ಇದಕ್ಕೂ ಮೊದಲು ಮಾತನಾಡಿದ ಸಚಿವ ರುದ್ರಪ್ಪ ಲಮಾಣಿ, ‘ಈ ಸರ್ಕಾರ ಆಡಳಿತಕ್ಕೆ ಬಂದ ಬಳಿಕ ಹಾವೇರಿ ನಗರದ ಅಭಿವೃದ್ಧಿಗೆ ಹಲವಾರು ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಇನ್ನು ಏಳೆಂಟು ತಿಂಗಳಲ್ಲಿ ಯೋಜನೆ ಗಳು ಪೂರ್ಣಗೊಳ್ಳಲಿವೆ. ಆ ಬಳಿಕ ಹಿಂದಿನ ಸರ್ಕಾರದ ಅವಧಿಯಲ್ಲಿ ಹಾವೇರಿ ಹೇಗಿತ್ತು? ಈಗ ಹೇಗಾಗಿದೆ ಎಂದು ನಿಮ್ಮ ಮುಂದಿಡುತ್ತೇವೆ?’ ಎಂದರು.

‘ಈ ಡಿಸೆಂಬರ್ ಅಂತ್ಯದೊಳಗೆ ಹೆಗ್ಗೇರಿ ಕೆರೆಗೆ ತುಂಗಾ ಮೇಲ್ದಂಡೆ ಕಾಲುವೆ ನೀರು ಹರಿಸಲಾಗುವುದು’ ಎಂದರು.  ನಗರಸಭೆ ಅಧ್ಯಕ್ಷೆ ಪಾರ್ವತೆವ್ವ ಹಲಗಣ್ಣನವರ, ಉಪಾಧ್ಯಕ್ಷ ಇರ್ಫಾನ್‌ ಖಾನ್ ಫಠಾಣ್‌ ಇದ್ದರು.

‘ಮದುವೆ ಸಮಾರಂಭವಾ?’
ಹಾವೇರಿ:
ನಗರದ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ಕಾರ್ಯಕ್ರವು ಬೆಳಿಗ್ಗೆ ನಿಗದಿಯಾಗಿತ್ತು. ಆದರೆ, ಕಾರ್ಯಕ್ರಮ ಆರಂಭಗೊಳ್ಳುವ ವೇಳೆಗೆ ಸಂಜೆ 5 ಗಂಟೆ ಸಮೀಪಿಸಿತ್ತು.

ಸಭೆಯ ಆರಂಭದಲ್ಲಿ ನಗರಸಭೆಯ ವತಿಯಿಂದ ಪೌರಾಡಳಿತ ಸಚಿವ ಈಶ್ವರ ಖಂಡ್ರೆ ಅವರಿಗೆ ಪೇಟ ತೊಡಿಸಿ, ಶಾಲು, ಹಾರ ಹಾಕಿ ಕತ್ತಿ ನೀಡಿ ಸನ್ಮಾನಿಸಲಾಯಿತು. ಆ ಬಳಿಕ ಸದಸ್ಯರು, ಅಧಿಕಾರಿಗಳು, ಸಿಬ್ಬಂದಿ, ಪೌರಕಾರ್ಮಿಕರು, ಗುತ್ತಿಗೆ ನೌಕರರು ಸೇರಿದಂತೆ ಎಲ್ಲರೂ ಸಾಲು ಸಾಲಾಗಿ ಬಂದು ವೇದಿಕೆಯಲ್ಲೇ ಸಚಿವರ ಜೊತೆ ನಿಂತು ಫೋಟೊ ತೆಗೆಸಿಕೊಳ್ಳಲು ಆರಂಭಿಸಿದರು.

ಇದನ್ನು ನೋಡಿ ನೋಡಿ ಬೇಸತ್ತ ಸಭಿಕರ ಸಾಲಿನ ಹಿರಿಯರೊಬ್ಬರು, ‘ಇದೇನು ಮದುವೆಯಾ? ನಗರದ ದುಃಸ್ಥಿತಿ ಕಂಡರೆ ನಗರಸಭೆ ಪರಿಸ್ಥಿತಿ ಅರಿವಾಗುತ್ತದೆ. ಇದಕ್ಕೆ ಫೋಟೊ ಬೇರೆ ಬೇಕಾ?’ ಎಂದು ಗೊಣಗಿದರು.

*
ಪೌರಕಾರ್ಮಿಕರ ಕಾಯಮಾತಿ, ಸದಸ್ಯರ ಗೌರವಧನ ಹೆಚ್ಚಳ, ಅನುದಾನ ಇತ್ಯಾದಿ ನೀಡಿದ್ದು ಸಿದ್ದರಾಮಯ್ಯ ಸರ್ಕಾರ ಎಂಬುದು ನೆನಪಿನಲ್ಲಿ ಇರುತ್ತದೆ ತಾನೇ?
-ಈಶ್ವರ ಖಂಡ್ರೆ,
ಪೌರಾಡಳಿತ ಸಚಿವ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.