ADVERTISEMENT

ನೀರಿನ ಕೊರತೆ: ಗುಲಾಬಿ ಗಿಡ ನಾಶಪಡಿಸಿದ ರೈತ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2017, 6:19 IST
Last Updated 14 ಏಪ್ರಿಲ್ 2017, 6:19 IST
ನೀರಿನ ಅಭಾವದಿಂದಾಗಿ ಮೋಟೆಬೆನ್ನೂರ ಗ್ರಾಮದ ರೈತ ಅಶೋಕ ಅಗಡಿ ಅವರ ಮೂರು ಎಕರೆ ಜಮೀನಿನಲ್ಲಿ ಬೆಳೆದ ಗುಲಾಬಿ ಗಿಡಗಳನ್ನು ಬುಧವಾರ ಟ್ರ್ಯಾಕ್ಟರ್‌ನಿಂದ ನಾಶಪಡಿಸಲಾಯಿತು
ನೀರಿನ ಅಭಾವದಿಂದಾಗಿ ಮೋಟೆಬೆನ್ನೂರ ಗ್ರಾಮದ ರೈತ ಅಶೋಕ ಅಗಡಿ ಅವರ ಮೂರು ಎಕರೆ ಜಮೀನಿನಲ್ಲಿ ಬೆಳೆದ ಗುಲಾಬಿ ಗಿಡಗಳನ್ನು ಬುಧವಾರ ಟ್ರ್ಯಾಕ್ಟರ್‌ನಿಂದ ನಾಶಪಡಿಸಲಾಯಿತು   

ಬ್ಯಾಡಗಿ: ಕಳೆದ ಮೂರು ವರ್ಷಗಳಿಂದ ಸತತ ಅನಾವೃಷ್ಟಿಯಿಂದ ಕಂಗಾಲಾದ ತಾಲ್ಲೂಕಿನ ಮೋಟೆಬೆನ್ನೂರ ಗ್ರಾಮದ ರೈತ ಅಶೋಕ ಬಸವರಾಜಪ್ಪ ಅಗಡಿ ಅವರು ಮೂರು ಎಕರೆ ಜಮೀನಿನಲ್ಲಿ ಬೆಳೆದ ಗುಲಾಬಿ ಗಿಡಗಳನ್ನು ಬುಧವಾರ ಟ್ರ್ಯಾಕ್ಟರ್‌ನಿಂದ ನಾಶಪಡಿಸಿದರು.

ಹೂವುಗಳನ್ನು ಬೆಳೆದು ಉತ್ತಮ ಆದಾಯ ಪಡೆಯುವ ಉದ್ದೇಶದಿಂದ ಗುಲಾಬಿ ಹೂವುಗಳಿಗೆ ಮನಸೋತಿದ್ದರು. ಹೀಗಾಗಿ ಬೆಂಗಳೂರ ಸಮೀಪದ ಸರ್ಜಾಪುರ ಭಾಗದಲ್ಲಿ ಮಾತ್ರ ಬೆಳೆಯುತ್ತಿದ್ದ ವಿಶಿಷ್ಟ ಜಾತಿಯ 4,000 ಗುಲಾಬಿ ಸಸಿಗಳನ್ನು ತಂದು, ಒಂದೂವರೆ ಎಕರೆ ಜಮೀನಿನಲ್ಲಿ ಬೆಳೆದಿದ್ದರು.

‘ಆರಂಭದ ವರ್ಷ ನಾಲ್ಕು ತಿಂಗಳಿಗೆ ಫಸಲು ಆರಂಭವಾಯಿತು. ಪ್ರತಿ ಕೆ.ಜಿಗೆ ₹70ರಂತೆ ಹಾವೇರಿ, ದಾವಣಗೆರೆ ಪಟ್ಟಣದಲ್ಲಿ ಮಾರಾಟ ಮಾಡಲಾಗುತ್ತಿತ್ತು. ಇದರಿಂದ ಮೊದಲ ವರ್ಷ ಅಂದಾಜು ₹4 ಲಕ್ಷ ಆದಾಯ ಗಳಿಸಿದ್ದೆ. ಒಂದು ಸಾರಿ ನಾಟಿ ಮಾಡಿದ ಬಳಿಕ ನಿರಂತರವಾಗಿ ಫಸಲು ಬರುತ್ತದೆ. ಕ್ರಿಮಿನಾಶಕ, ಕೊಟ್ಟಿಗೆ ಗೊಬ್ಬರ ಸ್ವಲ್ಪ ರಾಸಾಯನಿಕ ಗೊಬ್ಬರ ಹಾಗೂ ಕೂಲಿಗಳ ಖರ್ಚನ್ನು ಹೊರತು ಪಡಿಸಿದರೆ ಹೆಚ್ಚಿನ ಖರ್ಚು ಬರುತ್ತಿರಲಿಲ್ಲ.

ಈ ಹಿನ್ನೆಲೆಯಲ್ಲಿ ಮತ್ತೆ ಒಂದೂವರೆ ಎಕರೆ ಜಮೀನಲ್ಲಿ ‘ರೆಡ್‌ ರೋಸ್‌’ ಜಾತಿಯ ಸುಮಾರು 2,500 ಸಸಿಗಳನ್ನು ಬೆಳೆದಿದ್ದೆ. ಉತ್ತಮ ಫಸಲು ಸಹ ತೆಗೆದಿದ್ದೆ, ಆದರೆ ಕಳೆದ ನವೆಂಬರ್‌ನಲ್ಲಿ ಕೊಳವೆ ಬಾವಿಗಳು ಬತ್ತಿದ್ದರಿಂದ ನೀರಿನ ಸಮಸ್ಯೆಯುಂಟಾಯಿತು. ಪಕ್ಕದ ಹೊಲದ ಕೊಳವೆ ಬಾವಿಯಿಂದ ನೀರು ಎರವಲು ಪಡೆದು ಗುಲಾಬಿ ಗಿಡಗಳಿಗೆ ಹಾಯಿಸಿದೆ. ಅವರ ನೀರೂ ಸಹ ಕಡಿಮೆಯಾಯಿತು.

ಅಂತಿಮವಾಗಿ ಗ್ರಾಮದ ಸಮೀಪದ ಕೆರೆಯಿಂದ ಟ್ಯಾಂಕರ್‌ ಮೂಲಕ ನೀರು ಹಾಯಿಸಿದೆ. ಆದರೆ ಬಿಸಿಲಿನ ತಾಪಕ್ಕೆ ಇಳುವರಿ ಕಡಿಮೆಯಾಗತೊಡಗಿತು. ಖರ್ಚು ಹೆಚ್ಚಿತು. ಅಂತಿಮವಾಗಿ ಅವುಗಳನ್ನು ನಾಶಪಡಿಸುವ ತೀರ್ಮಾನಕ್ಕೆ ಬರಬೇಕಾಯಿತು’ ಎಂದು ರೈತ ಅಶೋಕ  ‘ಪ್ರಜಾವಾಣಿ’ ಎದುರು ನೋವು ತೋಡಿಕೊಂಡರು.

‘ಸತತ ಬರಗಾಲದಿಂದ ರೈತರ ಬದುಕು ದುಸ್ತರವಾಗುತ್ತಿದೆ. ಸರ್ಕಾರ ರೈತರ ನೆರವಿಗೆ ಬರಬೇಕಾಗಿದೆ’ ಎಂದು ಅವರು ಮನವಿ ಮಾಡಿಕೊಂಡರು. ಈ ಸಂದರ್ಭದಲ್ಲಿ ರೈತ ಮುಖಂಡ ಮಲ್ಲಿಕಾರ್ಜುನ ಬಳ್ಳಾರಿ, ಕಿರಣಕುಮಾರ ಗಡಿಗೋಳ ಹಾಗೂ ಇನ್ನಿತರರು ಇದ್ದರು.

*
ಬರದಿಂದ ಬೆಳೆ ನಾಶವಾಗಿ ರೈತರು ಸಂಕಷ್ಟಕ್ಕೆ ಒಳಗಾಗಿ ದ್ದಾರೆ. ಅಂತರ್ಜಲ ಹೆಚ್ಚಲು ಪ್ರತಿ ಗ್ರಾಮದ ಕೆರೆ ಹೂಳೆತ್ತಿ ಮಳೆಗಾಲದಲ್ಲಿ ಸರ್ಕಾರ ನೀರು ಸಂಗ್ರಹಿಸಬೇಕು.
–ಮಲ್ಲಿಕಾರ್ಜುನ ಬಳ್ಳಾರಿ,
ರೈತ ಮುಖಂಡ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.