ADVERTISEMENT

ನೆಲದ ಕಂಪು ಪಸರಿಸಿದ ‘ಭಾರತ ಭಾಗ್ಯ ವಿಧಾತ’

ಕಿಕ್ಕಿರಿದು ತುಂಬಿದ ಜನಸಾಗರ, ಬೃಹತ್ ವೇದಿಕೆಯಲ್ಲಿ ವೈಭವದ ಪ್ರದರ್ಶನ: ಅಂಬೇಡ್ಕರ್‌ ಬದುಕು ಅನಾವರಣ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2017, 12:00 IST
Last Updated 16 ಫೆಬ್ರುವರಿ 2017, 12:00 IST
ಹಾವೇರಿಯ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಮಂಗಳವಾರ ರಾತ್ರಿ ನಡೆದ ‘ಭಾರತ ಭಾಗ್ಯ ವಿಧಾತ’ದಲ್ಲಿ ಭೂತಕೋಲ
ಹಾವೇರಿಯ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಮಂಗಳವಾರ ರಾತ್ರಿ ನಡೆದ ‘ಭಾರತ ಭಾಗ್ಯ ವಿಧಾತ’ದಲ್ಲಿ ಭೂತಕೋಲ   
ಹಾವೇರಿ: ದೇವರ ಸ್ವರೂಪವಾಗಿ ಮಾನವರು ಆರಾಧಿಸುವ ಶಕ್ತಿಯೇ ‘ದೈವ’. ಈ ‘ದೈವ’ವನ್ನು ಕರಾವಳಿಯಲ್ಲಿ ‘ಭೂತ’ ಎಂದೂ ಕರೆಯುತ್ತಾರೆ. ವರ್ತ ಮಾನದ ಮನುಷ್ಯರಿಗೆ ಭವಿಷ್ಯತ್ತಿನ ಅಭಯ ನೀಡುವುದೇ ಈ ‘ಭೂತ’ ಪಾತ್ರಧಾರಿ. ಯಾವುದೇ ವ್ಯಕ್ತಿ, ಸಮಾಜ, ದೇಶ ಗಳಿಗೆ ತನ್ನ ‘ಭೂತ’ದ ಅರಿವಿದ್ದರೆ ಮಾತ್ರ ‘ಭವಿಷ್ಯತ್’ ಹೊಂದಲು ಸಾಧ್ಯ ಎಂದೇ ಹಿರಿಯರು ‘ಇತಿಹಾಸ ಬಲ್ಲವ ಮಾತ್ರ ಇತಿಹಾಸ ನಿರ್ಮಿಸಬಲ್ಲ’ ಎಂದಿದ್ದಾರೆ.
 
ಹೀಗೆ ನಮ್ಮ ದೇಶದ ಭದ್ರ ಬುನಾದಿಯ ಇತಿಹಾಸವನ್ನು ‘ಭೂತ ಪಾತ್ರ’ದ ಮೂಲಕ ತೆರೆದಿಟ್ಟು, ನೆಲದ ತಳಸಮುದಾಯಗಳ ಕಲೆ ಮೂಲಕ ಪ್ರಸ್ತುತ ಪಡಿಸಿದ ವಿಭಿನ್ನ ಪ್ರಯೋಗವೇ  ‘ಭಾರತ ಭಾಗ್ಯ ವಿಧಾತ’. ಅದು, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಬದುಕು, ಸಂದೇಶಗಳನ್ನು ಅನಾವರಣಗೊಳಿಸಿ ವಿನೂತನ ವೈಭವ. 
 
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಧ್ವನಿ–ಬೆಳಕು ದೃಶ್ಯ ವೈಭವಗಳ ‘ಭಾರತ ಭಾಗ್ಯ ವಿಧಾತ’ ಕಾರ್ಯಕ್ರಮವನ್ನು ಮಂಗಳವಾರ ಸಂಜೆ ನಗರದ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಆಯೋಜಿಸಿತ್ತು. ಕಿಕ್ಕಿರಿದು ತುಂಬಿದ ಮೈದಾನದಲ್ಲಿ ‘ದೃಶ್ಯ, ಬೆಳಕು, ಬಣ್ಣ, ನಾದಗಳ ಸೃಜನಶೀಲತೆಯ ವೈಭವ’ ಮೇಳೈಸಿತ್ತು.
 
ಈ ನೆಲವನ್ನು ಕಟ್ಟಿದ ಇತಿಹಾಸವನ್ನು ಭೂತಾರಾಧನೆ, ಗೊರವರು, ಗೀಗೀ ಹಾಡುಗಳು, ಹಲಿಗೆ, ಡೊಳ್ಳು, ಮಂಟೇ ಸ್ವಾಮಿ, ಸಿದ್ದಯ್ಯಾ, ನರಸಣ್ಣ, ಹಸೆ, ಮರಾಠಿ ನೃತ್ಯಗಳ ಮೂಲಕ ಪ್ರಸ್ತುತ ಪಡಿಸಿದ ರೀತಿ ವಿಭಿನ್ನವಾಗಿತ್ತು. ಇಂಗ್ಲಿಷ್‌, ಪಾಶ್ಚಾತ್ಯ ಸಂಸ್ಕೃತಿಗೆ ಮಾರುಹೋಗಿ ‘ನೆಲದ ಬೇರು’ಗಳನ್ನು ಮರೆತ ಯುವಜನತೆ ಜೊತೆ ಇತಿಹಾಸದ ಮುಖಾಮುಖಿ ಮಾಡುವ ಮೂಲಕ ಡಾ. ಬಿ.ಆರ್. ಅಂಬೇಡ್ಕರ್ ಅವರ ಬದುಕಿನ ಕಥನವನ್ನು ನಿರೂಪಿಸಲಾಗಿತ್ತು. 
 
ಆ ಮೂಲಕ ದೇಶ ಕಟ್ಟಿದ ಇತಿಹಾಸ ಹಾಗೂ ಜಾನಪದ ಕಲಾ, ಗಾನ ವೈಭವವನ್ನು ಯುವಜನತೆಗೆ ಪರಿಚಯಿಸಲಾಗಿತ್ತು. ಭೂತದ ಅಭಯ, ಗೊರವರ ನುಡಿ, ನರಸಣ್ಣ ಭವಿಷ್ಯ, ಗೀಗೀ ಹಾಡು, ಮಂಟೇಸ್ವಾಮಿ ಗಾನ, ಸುಗಮ ಸಂಗೀತದ ಸೊಗಡು, ಸಂಗೀತದೊಳಗಿನ ಪಾಶ್ಚಾತ್ಯ ಪ್ರಭಾವ, ಮರಾಠಿ ಜೋಗುಳ, ವೈವಿಧ್ಯಮಯ ವಾದ್ಯ ಪರಿಕರಗಳ ನಾದ–ನಿನಾದಗಳು ಹೊಸ ಲೋಕವನ್ನೇ ಸೃಷ್ಟಿಸಿತು. ‘ಲೂಸಿಯಾ’ ಮೂಲಕ ಕನ್ನಡ ಸಂಗೀತ ಲೋಕದಲ್ಲಿ ಹೊಸ ‘ನಿನಾದ’ ಹೊಮ್ಮಿಸಿದ ಪೂರ್ಣಚಂದ್ರ ತೇಜಸ್ವಿ ಸಂಗೀತ ಸಂಯೋಜನೆಯಲ್ಲಿ ಅನನ್ಯವಾಗಿ ಮೂಡಿಬಂದಿತ್ತು. 
 
ಅಂಬೇಡ್ಕರ್ ಅನುಭವಿಸಿದ ಜಾತಿ ನಿಂದನೆಗಳ ನೋವು, ಅಸ್ಪೃಶ್ಯತೆ, ಸ್ವಾತಂತ್ರ್ಯ ಹೋರಾಟ, ಅಂಬೇಡ್ಕರ್ ಪತ್ನಿ ರಮಾಬಾಯಿ ಅನುಭವಿಸಿದ ಕೊಳಗೇರಿಯ ಕಷ್ಟದ ಬದುಕು, ಕಲಿತರೂ ಸಿಗದ ಹುದ್ದೆ, ಶೋಷಿತರ ಪರವಾಗಿ ಗಾಂಧೀಜಿ ಜೊತೆಗೆ ವಾದ, ತನ್ನ ವಿರುದ್ಧ ವಾದಿಸಿದ ತತ್ವಜ್ಞಾನಿಗೇ ಉನ್ನತ ಹುದ್ದೆ ಕೊಡಿಸಿದ ಗಾಂಧೀಜಿ, ಹೀಗೆ ಇತಿಹಾಸ ಎಳೆಗಳನ್ನು ಸಾಂಸ್ಕೃತಿಕವಾಗಿ ಪ್ರತಿಬಿಂಬಿಸಿತು. 
 
ಅಲ್ಲದೇ, ವೈಚಾರಿಕ ನೋಟ, ಸಂವಿಧಾನ ಹಾಗೂ ಕಾನೂನು ಮೂಲಕ ಅಂಬೇಡ್ಕರ್ ಕೊಡಿಸಿದ ಸ್ತ್ರೀ ಸಮಾನತೆ, ಕಾರ್ಮಿಕರ ರಕ್ಷಣೆ, ಶೋಷಿತರಿಗೆ ರಕ್ಷಣೆ, ಮತದ ಹಕ್ಕು ಸೇರಿದಂತೆ ಸಮಸಮಾಜ ನಿರ್ಮಾಣದ ಕುರಿತು ಸಂದೇಶ ನೀಡಿತು. 
 
ಇಲಾಖೆಯ ನಿರ್ದೇಶಕ ಎಂ.ಆರ್. ವಿಶುಕುಮಾರ್ ಪರಿಕಲ್ಪನೆಯಲ್ಲಿ ಮೂಡಿ ಬಂದಿರುವ ಕಾರ್ಯಕ್ರಮದ ನಿರ್ದೇಶನ ವನ್ನು ಸಿನಿಮಾ ನಿರ್ದೇಶಕ ಬಿ.ಎಂ. ಗಿರಿರಾಜ ಮಾಡಿದ್ದರು. ಶಶಿಧರ ಅಡಪ ರಂಗವಿನ್ಯಾಸ, ಪದ್ಮಿನಿ ಅಚ್ಚೆ ನೃತ್ಯ ಸಂಯೋಜನೆ, ನಂದಕಿಶೋರ ಬೆಳಕು, ಪ್ರಮೋದ ಶಿಗ್ಗಾವಿ ವಸ್ತ್ರಾಲಂಕಾರ, ಎಂ.ಪಿ.ಎಂ.ವಿರೇಶ ಸಹ ನಿರ್ದೇಶನದಲ್ಲಿ ಮೂಡಿಬಂದಿತ್ತು. ಸ್ಥಳೀಯವಾಗಿ ವಾರ್ತಾಧಿಕಾರಿ ಬಿ.ಆರ್.ರಂಗನಾಥ್ ಕುಳಗಟ್ಟೆ ಹಾಗೂ ಬಳಗದವರು ಯಶಸ್ವಿಯಾಗಿ ಆಯೋಜಿಸಿದ್ದರು. ನಮ್ಮ ಭೂತವನ್ನು ನೆನೆಪಿಸುವ ವೈಚಾರಿಕ ನೋಟದ ಅನನ್ಯ ಕಾರ್ಯಕ್ರಮ ಅದ್ಧೂರಿಯಾಗಿ ಮೂಡಿಬಂತು. 
 
* ಇತಿಹಾಸ ಹಾಗೂ ವೈಚಾರಿಕ ದೃಷ್ಟಿಕೋನವನ್ನು ನೆಲದ ಕಲೆಗಳ ಮೂಲಕ ಪ್ರಸ್ತುತ ಪಡಿಸಿರುವುದು ವಿಭಿನ್ನವಾಗಿದೆ
ಆರ್.ಸಿ. ನಂದಿಹಳ್ಳಿ, ಪ್ರೇಕ್ಷಕರು
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.