ADVERTISEMENT

ನೇಕಾರರ ₹55.17 ಕೋಟಿ ಸಾಲ ಮನ್ನಾ: ಲಮಾಣಿ ಘೋಷಣೆ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2017, 6:53 IST
Last Updated 7 ನವೆಂಬರ್ 2017, 6:53 IST

ಹಾವೇರಿ: ‘ಸಹಕಾರ ಸಂಘಗಳಲ್ಲಿ ನೇಕಾರರು ಪಡೆದಿರುವ ₹50 ಸಾವಿರವರೆಗಿನ ಅಲ್ಪಾವಧಿ ಸಾಲ ಮನ್ನಾ ಮಾಡಲಾಗುವುದು’ ಎಂದು ಜವಳಿ ಸಚಿವ ರುದ್ರಪ್ಪ ಲಮಾಣಿ ಸೋಮವಾರ ಇಲ್ಲಿ ತಿಳಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಈ ಘೋಷಣೆ ಮಾಡುತ್ತಿರುವುದಾಗಿ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಇದರಿಂದ ರಾಜ್ಯದ 9 ಸಾವಿರ ನೇಕಾರರಿಗೆ ಅನುಕೂಲ ಆಗಲಿದೆ. ಅವರು ಪಡೆದಿರುವ ₹55.17 ಕೋಟಿ ಸಾಲ ಮನ್ನಾ ಆಗಲಿದೆ’ ಎಂದು ಅವರು ವಿವರಿಸಿದರು.

‘ರಾಜ್ಯದಲ್ಲಿನ ಸ್ಪಿನ್ನಿಂಗ್ ಮಿಲ್‌ಗಳ ₹199 ಕೋಟಿ ಸಾಲವನ್ನು ಷೇರುಗಳನ್ನಾಗಿ ಪರಿವರ್ತಿಸಲಾಗಿದೆ. ನೇಕಾರರ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವ ಸಲುವಾಗಿ ವಿದ್ಯಾ ವಿಕಾಸ ಯೋಜನೆಯಡಿ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮಕ್ಕೆ 65 ಲಕ್ಷ ಮೀಟರ್ ಹಾಗೂ ರಾಜ್ಯ ಜವಳಿ ಮೂಲಸೌಕರ್ಯ ಅಭಿವೃದ್ಧಿ ನಿಗಮಕ್ಕೆ 15 ಲಕ್ಷ ಮೀಟರ್ ಬಟ್ಟೆ ಉತ್ಪಾದನೆಗೆ ಅನುಮತಿ ನೀಡಲಾಗಿದೆ. ಈ ಸಲುವಾಗಿ ಶೇ 50ರಷ್ಟು ಹಣ ಮುಂಗಡವಾಗಿ ನೀಡಲಾಗಿದೆ’ ಎಂದು ತಿಳಿಸಿದರು.

‘ಕೈಮಗ್ಗ ನೇಕಾರರಿಗೆ ಮಿನಿ ಯಂತ್ರ (ಅರ್ಧ ಅಶ್ವ ಶಕ್ತಿ ಸಾಮರ್ಥ್ಯ) ನೀಡಲು ಉದ್ದೇಶಿಸಲಾಗಿದೆ. ಇದನ್ನು ಉನ್ನತೀಕರಿಸಿದ ಕೈಮಗ್ಗ ಎಂದು ಪರಿಗಣಿಸುವಂತೆ ಕೇಂದ್ರಕ್ಕೆ ಮನವಿ ಮಾಡಿಕೊಳ್ಳಲಾಗುವುದು. ಇದರಿಂದ ಸಣ್ಣ ಯಂತ್ರ ಬಳಕೆ ಮಾಡುವವರನ್ನೂ ಕೈಮಗ್ಗದಾರರು ಎಂದು ಪರಿಗಣಿಸಿ, ಸೌಲಭ್ಯ ನೀಡಲು ಅನುಕೂಲ ಆಗಲಿದೆ’ ಎಂದರು. ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ರವೀಂದ್ರ ಕಲಬುರ್ಗಿ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.