ADVERTISEMENT

ನ್ಯಾ.ಮೋಹನ ಶಾಂತಗೌಡರಗೆ ಸನ್ಮಾನ ನಾಳೆ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2017, 6:27 IST
Last Updated 13 ಮಾರ್ಚ್ 2017, 6:27 IST
ಮೋಹನ ಎಂ. ಶಾಂತಗೌಡರ
ಮೋಹನ ಎಂ. ಶಾಂತಗೌಡರ   

ಹಾವೇರಿ: ‘ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗಿ ಪದೋನ್ನತಿ ಪಡೆದ ಹಾವೇರಿ ಜಿಲ್ಲೆಯವರಾದ ನ್ಯಾ. ಮೋಹನ ಎಂ. ಶಾಂತಗೌಡರ ಅವರನ್ನು ಇದೇ 14ರಂದು ಇಲ್ಲಿನ ಜಿಲ್ಲಾ ವಕೀಲರ ಭವನದಲ್ಲಿ ಸನ್ಮಾನಿಸಲಾಗುವುದು’ ಎಂದು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಅಶೋಕ ನೀರಲಗಿ ಹೇಳಿದರು.

ಇಲ್ಲಿನ ಜಿಲ್ಲಾ ನ್ಯಾಯಾಲಯಗಳ ಸಂಕಿರಣದ ಆವರಣದಲ್ಲಿನ ವಕೀಲರ ಭವನದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹಿರೇಕೆರೂರು ತಾಲ್ಲೂಕಿನ ಚಿಕ್ಕೆ ರೂರು ಗ್ರಾಮದ ವರಾದ ನ್ಯಾ. ಮೋಹನ ಶಾಂತ ಗೌಡರ ಅವರು ಕೇರಳ ಹೈಕೋರ್ಟ್‌ ನ ಮುಖ್ಯ ನ್ಯಾಯಮೂರ್ತಿ ಯಾಗಿದ್ದರು. 17 ಫೆಬ್ರುವರಿ 2017ರಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಪದೋನ್ನತಿ ಪಡೆದಿರುವುದು ಜಿಲ್ಲೆಗೆ ಹೆಮ್ಮೆ ತಂದಿದೆ’ ಎಂದರು.

‘ಸನ್ಮಾನ ಸಮಾರಂಭದಲ್ಲಿ ಉಪಲೋಕಾಯುಕ್ತ ಸುಭಾಷ ಆಡಿ, ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿ ಯಾದ ಹೈಕೋರ್ಟ್‌ನ ನ್ಯಾಯಮೂರ್ತಿ ರತ್ನಕಲಾ, ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶ ಈಶಪ್ಪ ಕೆ. ಭೂತೆ ಪಾಲ್ಗೊಳ್ಳುವರು’ ಎಂದರು.

ADVERTISEMENT

ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷ ಎಂ.ಪಿ.ಹೊಸಳ್ಳಿ, ಕಾರ್ಯದರ್ಶಿ ದೇವರಾಜ ನಾಯ್ಡು, ಉಮೇಶ ಗೊಡ್ಡೆಮ್ಮಿ, ಎಸ್‌.ಎಚ್‌. ಭೀಮಕ್ಕನವರ, ಎಂ.ಎಸ್‌. ಹೊಸಮನಿ, ಪಿ.ಎಸ್‌.ಹತ್ತಿಮತ್ತೂರ, ರೆಹನಾ ಇದ್ದರು.

ಶಾಂತಗೌಡರ: ವಕೀಲರಾಗಿದ್ದ ಮಲ್ಲಿಕಾರ್ಜುನ ಸಿ. ಶಾಂತನಗೌಡರ ಹಾಗೂ ಇಂದಿರಾ ಶಾಂತನಗೌಡರ ಪುತ್ರರಾದ ಮೋಹನ ಎಂ. ಶಾಂತಗೌಡರ 5 ಮೇ 1958ರಂದು ಚಿಕ್ಕೆರೂರಿನಲ್ಲಿ ಜನಿಸಿದರು. ತಮ್ಮ ಆರಂಭಿಕ ಶಿಕ್ಷಣವನ್ನು ಧಾರವಾಡದ ಬಾಷೆಲ್ ಮಿಶನ್‌ ಕನ್ನಡ ಮಾಧ್ಯಮ ಪ್ರಾಯೋಗಿಕ ಶಾಲೆ ಮತ್ತು ಆರ್.ಎಲ್.ಎಸ್. ಪ್ರೌಢಶಾಲೆಯಲ್ಲಿ ಶಿಕ್ಷಣ ಪಡೆದರು. ಧಾರವಾಡದ ವಿಜ್ಞಾನ ಕಾಲೇಜಿನಲ್ಲಿ ಬಿ.ಎಸ್ಸಿ ಪದವಿ ಪಡೆದರು. ಬಳಿಕ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಕಾನೂನು ಮಹಾವಿದ್ಯಾಲಯದಲ್ಲಿ ಎಲ್‌.ಎಲ್‌.ಬಿ ಪದವಿ ಪೂರೈಸಿದರು.

ಅನಂತರ ಐ.ಜಿ. ಹಿರೇಗೌಡ್ರ ಜೊತೆ ವಕೀಲಿ ವೃತ್ತಿ ಆರಂಭಿಸಿದ ಅವರು, ಬಳಿಕ ಬೆಂಗಳೂರು ಹೈಕೋರ್ಟ್‌ಗೆ ತೆರಳಿದರು. ನ್ಯಾ.ಶಿವರಾಜ್ ಪಾಟೀಲ್ ಅವರ ತಂಡದಲ್ಲಿ ಬೆಂಗಳೂರಿನಲ್ಲಿ ವೃತ್ತಿ ಮುಂದುವರಿಸಿದರು. ಹೈಕೋರ್ಟ್‌ನಲ್ಲಿ ವಕಾಲತ್ತು ನಡೆಸುವ ಸಮಯದಲ್ಲೇ ವಕೀಲರ ಸಂಘದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಸರ್ಕಾರಿ ಅಭಿಯೋಜಕರಾಗಿಯೂ ಕರ್ತವ್ಯ ನಿರ್ವಹಿಸಿದ್ದರು.

2003ರಲ್ಲಿ ಕರ್ನಾಟಕ ಹೈಕೋರ್ಟ್‌ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಂಡರು. ಸೆಪ್ಟೆಂಬರ್ 2004ರಲ್ಲಿ ಕಾಯಂ ನ್ಯಾಯಮೂರ್ತಿಗಳಾದರು. 1 ಆಗಸ್ಟ್‌ 2016ರಲ್ಲಿ ಕೇರಳ ಹೈಕೋರ್ಟ್‌ನ ಪ್ರಭಾರ ಮುಖ್ಯ ನ್ಯಾಯಮೂರ್ತಿಯಾದರು. 22 ಸೆಪ್ಟೆಂಬರ್ 2016ರಲ್ಲಿ ಮುಖ್ಯನ್ಯಾಯಮೂರ್ತಿ ಆದರು. 17 ಫೆಬ್ರುವರಿ 2017ರಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಪದೋನ್ನತಿ ಪಡೆದರು.

**

ಹಾವೇರಿ ಜಿಲ್ಲೆಯ ಮೂಲದ ವರು ನೆಲದ ಅತ್ಯುನ್ನತ ನ್ಯಾಯಾಲಯ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಆಗಿ ನಿಯುಕ್ತಿಗೊಂಡಿ ರುವುದು ಹೆಮ್ಮೆಯ ವಿಚಾರವಾಗಿದೆ
–ಅಶೋಕ ನೀರಲಗಿ,
ಅಧ್ಯಕ್ಷ, ಜಿಲ್ಲಾ ವಕೀಲರ ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.