ADVERTISEMENT

‘ಪ್ರಾಣಿಗಳ ಔಷಧಿ ಕ್ರಮ ಅನುಕರಿಸಿದ ಮನುಷ್ಯ’

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2017, 5:38 IST
Last Updated 24 ಏಪ್ರಿಲ್ 2017, 5:38 IST

ಹಾವೇರಿ: ‘ಪ್ರಾಣಿಗಳು ಬಳಸುವ ಔಷಧಿ ಕ್ರಮವನ್ನು ಮನುಷ್ಯ ಅನಾದಿ ಕಾಲದಿಂದ ಅನುಸರಿಸುತ್ತಾ ಬಂದಿದ್ದಾನೆ. ಆ ಮೂಲಕವೇ ಇಂದು ಬಹುತೇಕ ರೋಗಗಳಿಗೆ ಔಷಧಿಗಳನ್ನು ಕಂಡುಹಿಡಿದಿದ್ದಾನೆ’ ಎಂದು ದೂರದರ್ಶನ (ಚಂದನ)ದ ‘ಥಟ್‌ ಅಂತ ಹೇಳಿ’ ಕಾರ್ಯಕ್ರಮದ ಕ್ವಿಜ್‌ ಮಾಸ್ಟರ್‌ ಡಾ.ನಾ. ಸೋಮೇಶ್ವರ ಹೇಳಿದರು.
ನಗರದ ಹಾನಗಲ್‌ ರಸ್ತೆಯ ಲಕ್ಷ್ಮೀನಾರಾಯಣ ಸಭಾಭವನದಲ್ಲಿ ಕರ್ನಾಟಕ ರಾಜ್ಯ ಸಹಕಾರಿ ಫಾರ್ಮಸಿಸ್ಟ್‌  (ಔಷಧಿ ತಜ್ಞರ) ಸಂಘವು ಭಾನುವಾರ ಆಯೋಜಿಸಿದ ‘ಜಿಲ್ಲಾ ಮಟ್ಟದ ಫಾರ್ಮಸಿಸ್ಟ್‌ ವೈಜ್ಞಾನಿಕ ಸಮ್ಮೇಳನ ಹಾಗೂ ರಾಜ್ಯ ಮಟ್ಟದ ಕಾರ್ಯಕಾರಿಣಿ ಸಭೆ’ಯಲ್ಲಿ ಅವರು ಮಾತನಾಡಿದರು.

‘ಆಯಾ ಪರಿಸರದಲ್ಲಿ ದೊರೆಯುವ ಔಷಧೀಯ ಗುಣವುಳ್ಳ ಸಸ್ಯಗಳಿಂದಲೇ ಪ್ರಾಣಿಗಳು ತಮ್ಮ  ಕಾಯಿಲೆಗಳನ್ನು ಗುಣಪಡಿಸಿಕೊಳ್ಳುತ್ತವೆ. ಪ್ರಾಣಿಗಳ ಈ ಪ್ರಕ್ರಿಯೆಯನ್ನು ಮನುಷ್ಯನೂ ರೂಢಿಸಿಕೊಂಡು ಬಂದಿದ್ದಾನೆ’ ಎಂದರು.‘ಪ್ರಾಣಿಗಳು ಅಥವಾ ಮನುಷ್ಯರು ರೂಢಿಸಿಕೊಳ್ಳತ್ತಿರುವ ಔಷಧಿಯ ಬಳಕೆ ಮತ್ತು ಉಪಯೋಗಗಳನ್ನು ಆರು ಕಾಲ ಘಟ್ಟಗಳಾಗಿ ವಿಂಗಡಿಸಿ, ಅಧ್ಯಯನ ಮಾಡಲಾಗಿದೆ’ ಎಂದರು.

‘ಚಿಂಪಾಂಜಿಗಳು ಹೊಟ್ಟೆಯಲ್ಲಿ ಜಂತುಹುಳು ಆದರೆ,  ‘ಶಿಸ್ಟೋಸೋಮಿಯಾಸಿಸ್‌’ ಎಂಬ ಮರದ ಎಲೆಗಳನ್ನು ತಿನ್ನುತ್ತವೆ. ಆ ಎಲೆಯಿಂದಲೇ ಮನುಷ್ಯ ‘ಜಂತುಹುಳುವಿನ ಕಾಯಿಲೆ’ಗೆ ಔಷಧಿ ಕಂಡುಕೊಂಡಿದ್ದಾನೆ.ಚಿಂಪಾಂಜಿಗಳಿಗೆ ಅಜೀರ್ಣವಾದರೆ ‘ಡೆಸ್ಟೋಡಿಯಂ’ ಮರದ ಬೇರುಗಳನ್ನು ತಿನ್ನುತ್ತವೆ. ಆ ಬೇರಿನಿಂದಲೇ ಮನುಷ್ಯ ‘ಅಜೀರ್ಣ’ಕ್ಕೆ  ಔಷಧಿ ಕಂಡುಕೊಂಡಿದ್ದಾನೆ’ ಎಂದರು.

ADVERTISEMENT

‘ಆನೆಗಳು ಪ್ರಸವ ಸಂದರ್ಭದಲ್ಲಿ ಹೆಬ್ಬೇವು ಹಾಗೂ ಜೇಡಿ ಮಣ್ಣನ್ನು ತಿನ್ನುತ್ತವೆ. ಇವು ರಕ್ತ ಹೆಪ್ಪುಗಟ್ಟಿಸುವ ಹಾಗೂ ಪೌಷ್ಟಿಕಾಂಶದ ಗುಣಗಳನ್ನು ಹೊಂದಿವೆ. ಅದೇ ರೀತಿಯ ಗರ್ಭಿಣಿಯರು ಕೆಮ್ಮಣ್ಣು ಮತ್ತು ಜೇಡಿ ತಿನ್ನುವುದನ್ನು ನಾವು ಕೇಳಿದ್ದೇವೆ’ ಎಂದರು.‘ಕಾಡುಹಂದಿಗಳು ‘ಲಾಡಿ ಹುಳು ರೋಗ’ ಬಂದರೆ  ‘ದಂಟಿನ ಗಿಡದ ಎಲೆ’ ಅಥವಾ ‘ದಾಳಿಂಬೆ ಬೇರು’ಗಳನ್ನು ತಿನ್ನುತ್ತವೆ. ಈ ರೋಗ ಬಂದ ಹಂದಿಗಳ ಮಾಂಸ ತಿಂದ ಮನುಷ್ಯನಿಗೂ ‘ಲಾಡಿ ಹುಳು ರೋಗ’ ಬರುತ್ತದೆ. ಆಗ  ದಾಳಿಂಬೆ ಬೇರುಗಳಿಂದ ತಯಾರಿಸಿದ ಔಷಧಿಯನ್ನು ನೀಡಲಾಗುತ್ತದೆ’ ಎಂದರು.

‘ಔಷಧೀಯ ಸಸ್ಯಗಳನ್ನು ಮಿಶ್ರಣ ಮಾಡಿ, ಮೊದಲು ಪ್ರಾಣಿಗಳ ಮೇಲೆ ಪ್ರಯೋಗ ಮಾಡುತ್ತೇವೆ. ನಂತರ ಮನುಷ್ಯರ ಮೇಲೆ ಪ್ರಯೋಗ ಮಾಡಲಾಗುತ್ತದೆ. ಯಶಸ್ವಿಯಾದರೆ, ಔಷಧಿಯನ್ನು ಮಾರುಕಟ್ಟೆಗೆ ಬಿಡಲಾಗುತ್ತದೆ. ಆದರೆ, ಎಷ್ಟೋ ರೋಗಗಳಿಗೆ ಔಷಧಿ ಕಂಡುಹಿಡಿಯಲು ಮನುಷ್ಯರಿಂದ ಇನ್ನೂ ಸಾಧ್ಯವಾಗಿಲ್ಲ ’ ಎಂದರು.
ಕರ್ನಾಟಕ ರಾಜ್ಯ ಸಹಕಾರಿ ಫಾರ್ಮಸಿಸ್ಟ್‌ (ಔಷಧಿ ತಜ್ಞರ) ಸಂಘದ ರಾಜ್ಯ ಘಟಕ ಅಧ್ಯಕ್ಷ  ಬಿ.ಎಸ್‌.ದೇಸಾಯಿ ಮಾತನಾಡಿ, ‘ಔಷಧಿಯ ಬಗ್ಗೆ ಅರಿವು’ ಮೂಡಿಸುವ ವಿಭಿನ್ನ ಕಾರ್ಯಕ್ರಮವನ್ನು ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಇಲ್ಲಿ ಮಾಡಿರುವುದು ಶ್ಲಾಘನೀಯ’ ಎಂದರು.

ಡಾ.ನಾ. ಸೋಮೇಶ್ವರ ಬರೆದ ‘ಬಹಿರಂಗ ಶುದ್ಧಿ’ ಮತ್ತು ‘ಸತ್ತ ಮೇಲೂ ಸಮಾಜ ಸೇವೆ’ ಎಂಬ ಎರಡು ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು.ಸಂಘದ ರಾಜ್ಯ ಘಟಕದ ಉಪಾಧ್ಯಕ್ಷೆ ಅನುಸೂಯಾ, ಜಿಲ್ಲಾ ಘಟಕ ಅಧ್ಯಕ್ಷ ಶಿವಯೋಗಿ ಬಣಕಾರ, ಕೋಶಾಧ್ಯಕ್ಷ ಶಶಿಧರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಮಹೇಶ ಬಡ್ನಿ, ಜಿಲ್ಲಾ ಶಸ್ತ್ರಚಿಕಿತ್ಸಕ ಸುನೀಲಚಂದ್ರ ಅವರಾದಿ, ಹಿರಿಯ ಫಾರ್ಮಸಿಸ್ಟ್‌ ವಿರೂಪಾಕ್ಷ ಲಮಾಣಿ, ನಿವೃತ್ತ ಪ್ರಾಧ್ಯಾಪಕ ಎಸ್‌.ಎಸ್‌.ಹಿರೇಮಠ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.