ADVERTISEMENT

ಪ್ರೊ ಕಬಡ್ಡಿ ಲೀಗ್‌ಗೆ ಸಕಲ ಸಿದ್ಧತೆ...

ಫೆ.1ರಿಂದ ಐದು ದಿನಗಳ ಕಾಲ ನಡೆಯಲಿರುವ ಟೂರ್ನಿ; ₹50 ಸಾವಿರ ಮೊದಲ ಬಹುಮಾನ

​ಪ್ರಜಾವಾಣಿ ವಾರ್ತೆ
Published 31 ಜನವರಿ 2017, 5:59 IST
Last Updated 31 ಜನವರಿ 2017, 5:59 IST
ಪ್ರೊ ಕಬಡ್ಡಿ ಪಂದ್ಯಾವಳಿಗೆ ಅಂಕಣ ನಿರ್ಮಾಣ ಭರದಿಂದ ಸಾಗಿದೆ
ಪ್ರೊ ಕಬಡ್ಡಿ ಪಂದ್ಯಾವಳಿಗೆ ಅಂಕಣ ನಿರ್ಮಾಣ ಭರದಿಂದ ಸಾಗಿದೆ   

ರಾಣೆಬೆನ್ನೂರು: ನಗರದೇವತೆ ಚೌಡೇಶ್ವರಿ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಇಲ್ಲಿನ ನಗರಸಭೆ ಕ್ರೀಡಾಂಗಣದಲ್ಲಿ ಫೆಬ್ರುವರಿ 1ರಿಂದ ಐದು ದಿನಗಳ ಕಾಲ ಪುರುಷರ ಪ್ರೊ ಕಬಡ್ಡಿ ಪ್ರೀಮಿಯರ್ ಲೀಗ್‌ ಟೂರ್ನಿ ನಡೆಯಲಿದ್ದು, ಅದಕ್ಕಾಗಿ ಹಿಂದೂಸ್ತಾನ ಸ್ಪೋರ್ಟ್ಸ್ ಸಂಸ್ಥೆ ಸಕಲ ಸಿದ್ಧತೆ ನಡೆಸಿದೆ.

ಹಾವೇರಿ ಜಿಲ್ಲಾ ಅಮೆಚೂರ ಕಬಡ್ಡಿ ಸಂಸ್ಥೆಯ ಸಹ ಆಶ್ರಯದಲ್ಲಿ ಈ ಟೂರ್ನಿ ನಡೆಯುತ್ತಿದೆ. ಪಂದ್ಯಾವಳಿ ನಡೆಸಲು 10 ಮೀX13 ಮೀ ಅಳತೆಯ ಸುಸಜ್ಜಿತ ಮಣ್ಣಿನ ಕೋರ್ಟ್‌ ತಯಾರಿಸಲಾಗಿದೆ.

8 ತಂಡ, 80 ಆಟಗಾರರು: ಟೂರ್ನಿಗೆ ಜಿಲ್ಲೆಯ ಅತ್ಯುತ್ತಮ ಕ್ರೀಡಾಪಟುಗಳನ್ನು ಆಯ್ಕೆ ಮಾಡಲಾಗಿದೆ. ಒಟ್ಟು  8 ತಂಡ ರಚಿಸಲಾಗಿದ್ದು, ಪ್ರತಿ ತಂಡದಲ್ಲಿ 10 ಕ್ರೀಡಾಪಟು ಇರಲಿದ್ದಾರೆ.

‘ಸ್ಪರ್ಧಾತ್ಮಕ ಆಟಕ್ಕೆ ಒತ್ತು ನೀಡುವ ಉದ್ದೇಶದಿಂದ ಪ್ರತಿಯೊಂದು ತಂಡಕ್ಕೆ ರಾಜ್ಯದ ಇತರ ಜಿಲ್ಲೆಯ ಮೂವರು ಆಟಗಾರರನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ’ ಎಂದು ಹಿಂದೂಸ್ತಾನ ಸ್ಪೋರ್ಟ್ಸ್‌ ಸಂಸ್ಥೆಯ ಗೌರವಾಧ್ಯಕ್ಷ ಭರಮಪ್ಪ ಪೂಜಾರ ತಿಳಿಸಿದ್ದಾರೆ.

ಆಸನಗಳ ವ್ಯವಸ್ಥೆ: ಟೂರ್ನಿ ವೀಕ್ಷಿಸಲು ಸುಮಾರು 5 ಸಾವಿರ ಜನರ ಸಾಮರ್ಥ್ಯದ ಪ್ರೇಕ್ಷಕರ ಗ್ಯಾಲರಿ ನಿರ್ಮಿಸಲಾಗಿದ್ದು,  ಮಹಿಳೆಯರಿಗೆ ಪ್ರತ್ಯೇಕ ಆಸನಗಳನ್ನು ಮೀಸಲಿರಲಿವೆ. ₹4.50 ಲಕ್ಷ ವೆಚ್ಚದಲ್ಲಿ ಮಹಾರಾಷ್ಟ್ರದ ಇಚಲಕರಂಜಿಯವರು ಇದನ್ನು ನಿರ್ಮಿಸಿದ್ದಾರೆ.

ರಾಷ್ಟ್ರೀಯ ತೀರ್ಪುಗಾರರು:  ರಾಷ್ಟ್ರೀಯ ಕಬಡ್ಡಿ ತೀರ್ಪುಗಾರರು ಕ್ರೀಡಾಕೂಟ ನಡೆಸಿಕೊಡಲಿದ್ದಾರೆ. ಎಲ್ಲ ಕಬಡ್ಡಿ ಕ್ರೀಡಾಪಟುಗಳಿಗೆ ಮತ್ತು ನಿರ್ಣಾಯಕರಿಗೆ ಊಟ, ವಸತಿ ವ್ಯವಸ್ಥೆ ಮಾಡಲಾಗಿದೆ.

ಫೆ.1ಕ್ಕೆ ಸಂಜೆ ಉದ್ಘಾಟನೆ: ಫೆ.1ರಿಂದ 5 ವರೆಗೆ ಪ್ರೊ ಕಬಡ್ಡಿ ಪಂದ್ಯಾವಳಿ ನಗರಸಭೆ ಕ್ರೀಡಾಂಗಣದಲ್ಲಿ ನಡೆಯುತ್ತವೆ. ಫೆ.1ರಂದು ಸಂಜೆ 4 ಗಂಟೆಗೆ ಕಬಡ್ಡಿ ಕ್ರೀಡಾಕೂಟ ಉದ್ಘಾಟನೆ ನಡೆಯುತ್ತದೆ ಎಂದು ಜಿಲ್ಲಾ ಅಮೆಚೂರ ಕಬಡ್ಡಿ ಸಂಸ್ಥೆಯ ಕಾರ್ಯದರ್ಶಿ ಶಿವಾನಂದ ಮಲ್ಲಕನಗೌಡ್ರ ಹೇಳಿದರು. ಇಲ್ಲಿನ ನಗರಸಭೆ ಕ್ರೀಡಾಂಗಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಶೇಕಡ 90 ರಷ್ಟು ಸಿದ್ಧತೆ ಪೂರ್ಣಗೊಂಡಿದೆ ಎಂದರು.

ಜಿಲ್ಲಾ ಅಮೆಚೂರ ಕಬಡ್ಡಿ ಸಂಸ್ಥೆ ಅಧ್ಯಕ್ಷ ಮಂಜಣ್ಣ ಎಲಿ, ಖಜಾಂಚಿ ಗಂಗಣ್ಣ ಎಲಿ, ಉಪಾಧ್ಯಕ್ಷ ಕೆ.ವಿ. ಬಳ್ಳಾರಿ, ಹಿಂದುಸ್ತಾನ ಸ್ಪೋರ್ಟ್ಸ್‌ ಸಂಸ್ಥೆ ಯ ಗೌರವಾಧ್ಯಕ್ಷ ಭರಮಪ್ಪ ಪೂಜಾರ, ಮೃತ್ಯುಂಜಯ ಗುದಿಗೇರ, ರವಿರಾಜ ಹುಲಗಮ್ಮನವರ, ಸಂತೋಷ ಲಮಾಣಿ, ಸಿದ್ದಣ್ಣ ಗುಡದಪ್ಪನವರ ಇದ್ದರು.

***

ಗ್ರಾಮೀಣ ಮತ್ತು ಬಡ ಜನತೆ ಮೆಚ್ಚಿನ ಕ್ರೀಡೆಯಾದ ಕಬಡ್ಡಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದೆ
- ಆನಂದ ಟಿ. ಹುಲಬನ್ನಿ, ಹಿಂದೂಸ್ಥಾನ ಸ್ಪೋರ್ಟ್ಸ್‌ ಸಂಸ್ಥೆ ಅಧ್ಯಕ್ಷ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.