ADVERTISEMENT

‘ಬರ’ದ ನೀರಿನಲ್ಲಿ ಭರ್ಜರಿ ಬೆಳೆ ತೆಗೆದ ಅನ್ನದಾತ

ಹಾವೇರಿ ನಗರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ, ಮೈಲಾರದಲ್ಲಿ ಭರಪೂರ ಬೆಳೆ ಬೆಳೆಯುತ್ತಿರುವ ರೈತರು

ಹರ್ಷವರ್ಧನ ಪಿ.ಆರ್.
Published 9 ಮಾರ್ಚ್ 2017, 11:18 IST
Last Updated 9 ಮಾರ್ಚ್ 2017, 11:18 IST
‘ಬರ’ದ ನೀರಿನಲ್ಲಿ ಭರ್ಜರಿ ಬೆಳೆ ತೆಗೆದ ಅನ್ನದಾತ
‘ಬರ’ದ ನೀರಿನಲ್ಲಿ ಭರ್ಜರಿ ಬೆಳೆ ತೆಗೆದ ಅನ್ನದಾತ   
ಹಾವೇರಿ: ನಗರದ ಬೇಸಿಗೆಯ ಬವಣೆ ನೀಗಿಸುವ ಸಲುವಾಗಿ ಭದ್ರಾ ಜಲಾಶಯ ದಿಂದ ಬಿಟ್ಟಿದ್ದ ನೀರಿನಲ್ಲಿ ಬಳ್ಳಾರಿ ಜಿಲ್ಲೆಯ ಮೈಲಾರ ಸೇರಿದಂತೆ  ತುಂಗಭದ್ರಾ ನದಿ ತೀರಗಳ ರೈತರು ಭರ್ಜರಿ ಕೃಷಿ ಮಾಡುತ್ತಿದ್ದು, ನಗರದಲ್ಲಿ ನೀರಿನ ಹಾಹಾಕಾರ ಹೆಚ್ಚಾಗಿದೆ. 
 
ಜಿಲ್ಲಾ ಕೇಂದ್ರವಾದ ಹಾವೇರಿ ನಗರಕ್ಕೆ ತಾಲ್ಲೂಕಿನ ಕೆಂಚಾರಗಟ್ಟಿಯ ತುಂಗಭದ್ರಾ ನದಿಯಿಂದ ಕುಡಿಯುವ ನೀರು ಪೂರೈಸಲಾಗುತ್ತದೆ. ಬರದ ಪರಿಣಾಮ, ಡಿಸೆಂಬರ್‌ (2016) ಅಂತ್ಯದ ಮೊದಲೇ ನದಿ ನೀರು ಬತ್ತಿ ಹೋಗಿತ್ತು. ಜನವರಿಯಲ್ಲಿ ನೀರಿನ ಹಾಹಾಕಾರ ತೀವ್ರಗೊಂಡಿತ್ತು. ಬಳಿಕ, ಭದ್ರಾ ಜಲಾಶಯದಿಂದ  ನದಿಗೆ ಬಿಟ್ಟ 0.5 ಟಿಎಂಸಿ ನೀರನ್ನು ಕೆಂಚಾರಗಟ್ಟಿ ಯಲ್ಲಿ ಮರಳಿನ ತಡೆಗೋಡೆ ನಿರ್ಮಿಸಿ ಸಂಗ್ರಹಿಸಲಾಗಿತ್ತು.  
 
ಆ ಬಳಿಕ ನಗರಕ್ಕೆ ಪ್ರತಿನಿತ್ಯ 70 ಎಂಎಲ್‌ಡಿ ನೀರನ್ನು ಪೂರೈಸಲಾಗು ತ್ತಿದ್ದು, ಬೇಸಿಗೆಯ 3 ತಿಂಗಳ ಬವಣೆ ನೀಗಿಸಬಹುದು ಎಂದು ಅಂದಾಜಿಸ ಲಾಗಿತ್ತು. ಆದರೆ, ನದಿಯ ಇನ್ನೊಂದು ತೀರದ ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿಯ ಮೈಲಾರದ ರೈತರು ಇದೇ ನೀರಿನಲ್ಲಿ ಬೆಳೆ ಬೆಳೆಯುತ್ತಿದ್ದಾರೆ. ಇನ್ನೊಂದೆಡೆ, ಹಾವೇರಿ ಜಿಲ್ಲೆಯ ಚೌಡಯ್ಯದಾನಾಪುರ, ನರಸೀಪುರದ ರೈತರೂ ಭತ್ತ ಇತ್ಯಾದಿ ಬೆಳೆಯುತ್ತಿದ್ದಾರೆ.  
 
ನೀರಿನ ಕೊರತೆ: ‘ಹಾವೇರಿ ನಗರಕ್ಕೆ ಪ್ರತಿನಿತ್ಯ 270 ಎಚ್‌ಪಿ ಸಾಮರ್ಥ್ಯದ ಪಂಪ್‌ ಮೂಲಕ ನೀರು ಪೂರೈಸಲಾಗು ತ್ತಿದೆ. ಆದರೆ, ರೈತರು 165 ಪಂಪ್‌ ಗಳನ್ನು ನದಿಗೆ ಅಳವಡಿಸಿ ನೀರೆತ್ತುತ್ತಿದ್ದು, ಅವು ಸುಮಾರು 1,250 ಎಚ್‌ಪಿಗೂ ಅಧಿಕ ಸಾಮರ್ಥ್ಯ ಹೊಂದಿದೆ. ಕುಡಿಯುವ ನೀರಿಗಿಂತ ಐದು ಪಟ್ಟು ಹೆಚ್ಚು ನೀರು ಕೃಷಿಗೆ ಹೋಗುತ್ತಿದೆ.

ಇದರಿಂದ 3 ತಿಂಗಳಿಗೆ ಬೇಕಾದ ನೀರಿನ ಮಟ್ಟ ಈಗಲೇ ಕುಸಿದಿದೆ. ಇನ್ನೆರಡು ದಿನಗಳಲ್ಲಿ ನಗರದ ನೀರು ಪೂರೈಕೆ ಸ್ಥಗಿತಗೊಳ್ಳುವ ಅಪಾಯವೂ ಇದೆ’ ಎನ್ನುತ್ತಾರೆ ನಗರಸಭೆ ಅಧ್ಯಕ್ಷರಾದ ಪಾರ್ವತೆವ್ವ ಹಲಗಣ್ಣನವರ. ‘ನಗರದ ಕೆರೆಗಳು ಹಾಗೂ ಶೇ 60ಕ್ಕೂ ಹೆಚ್ಚು ಕೊಳವೆಬಾವಿಗಳು ಬತ್ತಿ ಹೋಗಿವೆ. ತುಂಗಭದ್ರಾ ನದಿಯಲ್ಲಿ ಸಂಗ್ರಹಗೊಂಡ ನೀರು ಮಾತ್ರವೇ ಬೇಸಿಗೆಗೆ ಆಧಾರ’ ಎಂದರು.  
 
‘ಭದ್ರಾ ಜಲಾಶಯದಿಂದ ಕೆಂಚಾರ ಗಟ್ಟಿಗೆ 183 ಕಿ.ಮೀ ದೂರವಿದೆ. ಜಲಾಶಯದಿಂದ ಪ್ರತಿನಿತ್ಯ 2 ಸಾವಿರ ಕ್ಯೂಸೆಕ್ ನೀರು ಬಿಟ್ಟರೂ, ಇಲ್ಲಿಗೆ ತಲುಪಲು 15 ದಿನ ಬೇಕು. ಈ ಮಧ್ಯೆ 60 ಸಾವಿರಕ್ಕೂ ಅಧಿಕ ಕೃಷಿ ಪಂಪ್‌ ಗಳಿವೆ. ಬಳ್ಳಾರಿ, ದಾವಣಗೆರೆ, ಶಿವಮೊಗ್ಗ ಹಾಗೂ ಹಾವೇರಿ ಜಿಲ್ಲೆಯ ಪಟ್ಟಣಗಳ ನೀರು ಪೂರೈಕೆ ಜ್ಯಾಕ್‌ವೆಲ್‌ಗಳಿವೆ. ಎಲ್ಲ ಕೃಷಿ ಪಂಪ್‌ಗಳನ್ನು ತೆರವುಗೊಳಿಸದಿ ದ್ದರೆ, ಬೇಸಿಗೆಯಲ್ಲಿ ಹನಿ ನೀರಿಗೂ ತತ್ವಾರ ಗ್ಯಾರಂಟಿ’ ಎನ್ನುತ್ತಾರೆ ನಗರಸಭೆ ಸದಸ್ಯರಾದ ಗಣೇಶ ಬಿಷ್ಟಣ್ಣನವರ ಹಾಗೂ ರತ್ನಾ ಭೀಮಕ್ಕನವರ.

‘ಬಳ್ಳಾರಿ ಜಿಲ್ಲಾಧಿಕಾರಿಗೆ ಪತ್ರ’
ಹಾವೇರಿ:
‘ಕುಡಿಯುವ ಸಲು ವಾದ ನೀರಿನಲ್ಲಿ ಕೃಷಿ ಮಾಡುತ್ತಿರುವು ದನ್ನು ತಡೆಗಟ್ಟುವಂತೆ ಬಳ್ಳಾರಿ ಜಿಲ್ಲಾಧಿಕಾರಿಗೆ ಪತ್ರ ಬರೆಯುತ್ತೇನೆ’ ಎಂದು ಜಿಲ್ಲಾಧಿಕಾರಿ ಡಾ.ವೆಂಕಟೇಶ ಎಂ.ವಿ. ತಿಳಿಸಿದರು.

‘ತುಂಗಭದ್ರಾ ನದಿ ತೀರದಲ್ಲಿ 144ನೇ ಸೆಕ್ಷನ್‌ ಜಾರಿಗೊಳಿಸ ಲಾಗಿದೆ. ನೀರು ಎತ್ತುವುದು ಕಂಡುಬಂದರೆ, ಐಪಿಸಿ ಸೆಕ್ಷನ್ 188 ಅಡಿಯಲ್ಲಿ ದೂರು ದಾಖಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು. ಅಲ್ಲದೇ, ಪಂಪ್‌ಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸುವಂತೆ ಹೆಸ್ಕಾಂಗೆ (ಎರಡೂ ಜಿಲ್ಲೆಗೆ ಒಳಪಟ್ಟಿದೆ) ಸೂಚನೆ ನೀಡಲಾಗಿದೆ’ ಎಂದರು. ‘ಅಧಿಕ ನೀರು ಬೇಡುವ ಬೆಳೆ ಬೇಡ ಎಂದು ರೈತರಿಗೆ ಸೂಚನೆ ನೀಡಲಾಗಿತ್ತು. ಆದರೂ, ನಿಯಮ ಉಲ್ಲಂಘಿಸುತ್ತಿದ್ದು, ಕ್ರಮ ಕೈಗೊಳ್ಳ ಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.