ADVERTISEMENT

ಬಾಕಿ ಪಾವತಿ: ವಾರದೊಳಗೆ ವಿವರ ನೀಡಿ

​ಪ್ರಜಾವಾಣಿ ವಾರ್ತೆ
Published 17 ಮೇ 2017, 7:30 IST
Last Updated 17 ಮೇ 2017, 7:30 IST

ಹಾವೇರಿ: ‘2016–17ನೇ ಹಂಗಾಮಿನಲ್ಲಿ ಕಬ್ಬು ಪೂರೈಸಿದ ಬೆಳೆಗಾರರ ಬಾಕಿ ಪಾವತಿ ಕುರಿತು ವಾರದೊಳಗೆ ಸಂಪೂರ್ಣ ವಿವರ ನೀಡಬೇಕು’ ಎಂದು ಜಿಲ್ಲಾಧಿಕಾರಿ ಡಾ. ವೆಂಕಟೇಶ್‌ ಎಂ.ವಿ. ಸಂಗೂರು ಸಕ್ಕರೆ ಕಾರ್ಖಾನೆಯ ಗುತ್ತಿಗೆದಾರ ಜಿ.ಎಂ. ಶುಗರ್ಸ್‌ ಕಂಪೆನಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಜಿಲ್ಲಾಡಳಿತದ ಭವನದಲ್ಲಿ ಮಂಗಳವಾರ ಕಬ್ಬು ಬೆಳೆಗಾರರು, ಗುತ್ತಿಗೆದಾರ ಜಿ.ಎಂ. ಶುಗರ್ಸ್‌ ಹಾಗೂ ಕಾರ್ಖಾನೆ ಆಡಳಿತ ಮಂಡಳಿಯ ಸಭೆಯಲ್ಲಿ ಅವರು ಈ ಸೂಚನೆ ನೀಡಿದರು.

‘2016–17ನೇ ಹಂಗಾಮಿನ ಆರಂಭದಲ್ಲಿ ಗುತ್ತಿಗೆದಾರರು ರೈತರಿಗೆ ನೀಡಿದ ಭರವಸೆಯನ್ನು ಪಾಲಿಸಬೇಕು. ಅಲ್ಲದೇ, ಸರ್ಕಾರ ನಿಗದಿ ಪಡಿಸಿದ ದರ, ಸಮೀಪದ ಸಕ್ಕರೆ ಕಾರ್ಖಾನೆಗಳು ನೀಡುತ್ತಿರುವ ದರ ಹಾಗೂ ಪೂರಕ ಮಾಹಿತಿಯನ್ನು ಪರಿಶೀಲಿಸಿಕೊಂಡು ವಾರದೊಳಗೆ ಸ್ಪಷ್ಟ ನಿರ್ಧಾರ ತಿಳಿಸಬೇಕು. ಬಳಿಕ ಮುಂದಿನ ಕ್ರಮಕೈಗೊಳ್ಳಲಾಗುವುದು’ ಎಂದರು.

ADVERTISEMENT

ಜಿ.ಎಂ.ಶುಗರ್ಸ್‌ನ ನಿರ್ದೇಶಕ ಎ.ಸಿ.ಬಸವರಾಜ ಮಾತನಾಡಿ, ‘ಕಂಪೆನಿಯ ಅಧ್ಯಕ್ಷ ಜಿ.ಎಂ. ಲಿಂಗರಾಜ್  ವಿದೇಶ ಪ್ರವಾಸದಲ್ಲಿದ್ದಾರೆ. ಅವರ ಜೊತೆ ಚರ್ಚಿಸಿ, ನಿರ್ಧಾರ ತಿಳಿಸುತ್ತೇವೆ’ ಎಂದರು.

‘ಪ್ರತಿ ವರ್ಷ ಕಬ್ಬಿನ ದರ ನಿಗದಿ ಸಂದರ್ಭದಲ್ಲಿ ಜಿ.ಎಂ. ಶುಗರ್ಸ್‌ ಕಂಪೆನಿಯು ರೈತರಿಗೆ ಮೋಸ ಮಾಡುತ್ತಿದೆ’ ಎಂದು ರೈತರು ದೂರಿದರು. ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಮಾತನಾಡಿ, ‘ಈ ಹಿಂದೆಯೂ ಜಿ.ಎಂ. ಶುಗರ್ಸ್‌ ಗೊಂದಲ ಉಂಟು ಮಾಡಿದ್ದರು. ಆಗ ರೈತರು, ಸಮಸ್ಯೆ ಬಗೆಹರಿಸುವಂತೆ ನನ್ನ ಮನೆ ಎದುರು ಪ್ರತಿಭಟನೆ ನಡೆಸಿದ್ದರು.

ಈ ಬಾರಿ ಮತ್ತೆ ಸಮಸ್ಯೆ ಉದ್ಭವಿಸಿದೆ. ಈ ಬಗ್ಗೆ ಜಿ.ಎಂ. ಶುಗರ್ಸ್ ಶೀಘ್ರವೇ ಕ್ರಮ ತೆಗೆದುಕೊಳ್ಳಬೇಕು’ ಎಂದು ಜಿ.ಎಂ. ಶುಗರ್ಸ್‌ನ ನಿರ್ದೇಶಕ ಎ.ಸಿ.ಬಸವರಾಜ್  ಅವರಿಗೆ ಸೂಚಿಸಿದರು.

ಕಬ್ಬು ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದರಾಜ ಕಲಕೋಟಿ ಮಾತನಾಡಿ, ‘ಜಿ.ಎಂ. ಶುಗರ್ಸ್‌ಗೆ ಈಗಾಗಲೇ ಸಾಕಷ್ಟು ಸಮಯ ನೀಡಲಾಗಿದೆ. ಆದರೂ, ನೀಡಿದ ಭರವಸೆ ಈಡೇರಿಸಿಲ್ಲ. ಜಿಲ್ಲಾಡಳಿತ ಮಧ್ಯಸ್ತಿಕೆ ವಹಿಸಿ ರೈತರ ಬಾಕಿ ಹಣ ಕೊಡಿಸಬೇಕು’ ಎಂದು ಕೋರಿದರು.

ಕಾರ್ಖಾನೆ ಆಡಳಿತ ಮಂಡಳಿ ಅಧ್ಯಕ್ಷ ಅಶೋಕರಡ್ಡಿ ಮರಚರಡ್ಡೇರ ಮಾತನಾಡಿ, ‘ಮುಂದಿನ ಕಬ್ಬು ಕಟಾವು ಆರಂಭಕ್ಕೂ ಮೊದಲೇ, ದರ ನಿಗದಿ ಕುರಿತು ಜಿಲ್ಲಾಡಳಿತ ಸಮ್ಮುಖದಲ್ಲಿ ಸಭೆ ನಡೆಸಿ, ಲಿಖಿತ ಪತ್ರ ಪಡೆಯಬೇಕು’ ಎಂದರು.

ಸಂಗೂರ ಸಕ್ಕರೆ ಕಾರ್ಖಾನೆ ವ್ಯಾಪ್ತಿಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ರಾಜಶೇಖರ ಬೆಟಗೇರಿ, ಉಪವಿಭಾಗಾಧಿಕಾರಿ ಬಸವರಾಜ ಸೋಮಣ್ಣನವರ, ಡಿವೈಎಸ್ಪಿ ಡಾ.ಗೋಪಾಲ ಬ್ಯಾಕೋಡ್, ಬಸವಣ್ಣೆಪ್ಪ ಬೆಂಚಿಹಳ್ಳಿ, ಸಿದ್ಧಲಿಂಗಪ್ಪ ಶಂಕ್ರಿಕೊಪ್ಪ, ಬಸವರಾಜ ಹಾದಿಮನಿ, ಸಿಂದಗಿ, ಧರಣೆಪ್ಪ ತಿರಕಣ್ಣನವರ, ರವಿ ಸೊಲಬಣ್ಣನವರ ಉಪಸ್ಥಿರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.