ADVERTISEMENT

ಬೆಳೆಗೆ ಜೀವ ತುಂಬಿದ ಚರಂಡಿ ನೀರು

ಸತತ ಬರ, ಕೊಳವೆ ಬಾವಿ ನೀರು ತಗ್ಗಿದ್ದರಿಂದ ತತ್ತರಿಸಿದ್ದ ರೈತ ಜಗದೀಶ ಕಂಡುಕೊಂಡ ಉಪಾಯ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2017, 10:08 IST
Last Updated 28 ಫೆಬ್ರುವರಿ 2017, 10:08 IST
ಶಿಗ್ಗಾವಿ ಪಟ್ಟಣದಲ್ಲಿ ಚರಂಡಿ ನೀರನ್ನು ಕಬ್ಬಿನ ಬೆಳೆಗೆ ಹರಿಸಿ ಫಲವತ್ತಾದ ಬೆಳೆ ತೆಗೆಯುವ ಕಾಯಕದಲ್ಲಿ ನಿರತರಾದ ರೈತರು
ಶಿಗ್ಗಾವಿ ಪಟ್ಟಣದಲ್ಲಿ ಚರಂಡಿ ನೀರನ್ನು ಕಬ್ಬಿನ ಬೆಳೆಗೆ ಹರಿಸಿ ಫಲವತ್ತಾದ ಬೆಳೆ ತೆಗೆಯುವ ಕಾಯಕದಲ್ಲಿ ನಿರತರಾದ ರೈತರು   

ಶಿಗ್ಗಾವಿ: ಕಸದಿಂದ ರಸ ತೆಗೆಯಬಹುದು ಎಂಬುದು ಹಲವು ವೇದಿಕೆಯಲ್ಲಿ ಸಾಕಷ್ಟು ಕೇಳಿರಬಹುದು. ಅದನ್ನು ಶಿಗ್ಗಾವಿ ಪಟ್ಟಣದ ರೈತ ಜಗದೀಶ ಬನ್ನಿಕೊಪ್ಪ ಅಕ್ಷರಶಃ ಕಾರ್ಯರೂಪಕ್ಕೆ ತಂದಿದ್ದಾರೆ. ಚರಂಡಿಯಲ್ಲಿ ಹರಿದು ಕೊಳಚೆ ಎನಿಸಿ ಪೋಲಾಗುತ್ತಿದ್ದ ನೀರನ್ನು ಹಿಡಿದು, ಜಮೀನಲ್ಲಿ ಹಸಿರು ಉಕ್ಕಿಸಿದ್ದಾರೆ.

ಕಳೆದ 3 ವರ್ಷದಿಂದ ಸಮರ್ಪಕ ಮಳೆ ಇಲ್ಲದೇ ತಾಲ್ಲೂಕಿನ ಬಹುತೇಕ ರೈತ ಸಮೂಹ ಸಂಕಷ್ಟದಲ್ಲಿದೆ. ಅಂಥದ್ದೇ ಕಷ್ಟದಲ್ಲಿ ಸಿಲುಕಿದ್ದ ಜಗದೀಶ ಹಾಗೂ ಸಹೋದರರು ಪರ್ಯಾಯ ವ್ಯವಸ್ಥೆಯಲ್ಲಿ ಯಶ ಕಂಡಿದ್ದಾರೆ.

ರೈತ ಜಗದೀಶ ಸೇರಿದಂತೆ ಐದು ಜನ ಸಹೋದರರ 7 ಎಕರೆಯಲ್ಲಿ ಕೊಳವೆ ಬಾವಿಗಳು ಕೆಲ ವರ್ಷಗಳ ಹಿಂದೆ ಬತ್ತಿ ಹೋದವು.  ಭೂಮಿಯನ್ನೇ ನಂಬಿ ಜೀವಿಸುತ್ತಿದ್ದ ಅವರು, ಇತರರ ಭೂಮಿ ಲಾವಣಿ ಪಡೆದು ಬೆಳೆ ತೆಗೆಯಲು ನಿರ್ಧರಿಸಿದರು.

ಶಂಕರಗೌಡ್ರ ಪಾಟೀಲ ಎಂಬುವರಿಂದ  8 ಎಕರೆ ನೀರಾವರಿ ಭೂಮಿ ಲಾವಣಿ ಪಡೆದು ಕೃಷಿಯಲ್ಲಿ ತೊಡಗಿದರು. ಆದರೆ, ಅಲ್ಲಿನ ಕೊಳವೆ ಬಾವಿ ನೀರೂ ಕಡಿಮೆಯಾಗುತ್ತ ಬಂತು. ಬೆಳೆಗೆ ನೀರು ಸಾಲದಾಯಿತು. ಆಗ, ಜಮೀನು ಪಕ್ಕದಲ್ಲಿ ಹರಿದು ಪೋಲಾಗುತ್ತಿರುವ ಪಟ್ಟಣದ ಚರಂಡಿ ಕಣ್ಣಿಗೆ ಬಿತ್ತು. ಅದನ್ನೇ ನೀರಿನ ಮೂಲವಾಗಿಸಿಕೊಂಡ ಜಗದೀಶ ಹಾಗೂ ಅವರ ಸಹೋದರ ಶಿವಪ್ಪ, ಕೊಳಚೆ ನೀರಿಗೆ ಪಂಪ್‌ಸೆಟ್‌ ಜೋಡಿಸಿ, ಹನಿ ನಿರಾವರಿ ಮೂಲಕ ಬೆಳೆಗೆ ನೀರು ಹರಿಸಿದರು. ಇದು ಕಳೆದರೆಡು ವರ್ಷದಿಂದ ನಡೆಯುತ್ತಿದ್ದು, ಉತ್ತಮ ಫಲವನ್ನೂ ಕಂಡಿದ್ದಾರೆ.

ಹಲವು ಬೆಳೆ: ಕಬ್ಬಿನ ಜೊತೆಗೆ ಒಂದು ಎಕರೆಯಲ್ಲಿ ಬಾಳೆ, ಅರ್ಧ ಎಕರೆ ಪ್ರದೇಶ ದಲ್ಲಿ ಸೇವಂತಿಯನ್ನೂ ಬೆಳೆಯುತ್ತಿದ್ದಾರೆ.
ಮತ್ತೊಂದೆಡೆ, ಬಿಸಿಲು ಹೆಚ್ಚುತ್ತಿರುವ ಬೆನ್ನಲ್ಲೇ, ಚರಂಡಿ ನೀರೂ ಕಡಿಮೆಯಾಗುತ್ತಿದೆ ಎನ್ನುವುದು ಶಿವಪ್ಪ ಬನ್ನಿಕೊಪ್ಪ ಕಳವಳ.
ಎಂ.ವಿ.ಗಾಡದ

*

ದುಡಿಮೆಯಲ್ಲಿ ದೇವರನ್ನು ಕಾಣಬೇಕು.  ದುಡಿಮೆಯಿಂದ ಆರೋಗ್ಯದ ಜೊತೆಗೆ ಆರ್ಥಿಕ ಪ್ರಬಲತೆ ಸಾಧಿಸಬಹುದು. ಆದರೆ, ಭೂಮಿ ನಂಬಿ ದುಡಿಯಲು ಮುಂದಾಗಬೇಕು
-ಜಗದೀಶ ಬನ್ನಿಕೊಪ್ಪ, ಶಿಗ್ಗಾವಿ ರೈತ

ADVERTISEMENT

* ಚರಂಡಿಯಿಂದ ಹರಿದು ಬರುವ ನೀರನ್ನು ರೈತರು ತಮ್ಮ ಜಮೀನುಗಳಿಗೆ ಹಾಯಿಸಬಹುದು. ಆದರೆ, ಕೊಳಚೆ ನೀರು ಸೊಪ್ಪು, ತರಕಾರಿ ಬೆಳೆಗಳಿಗೆ ಬಳಸಬಾರದು ಎಂಬ ಅರಿವು ಅಗತ್ಯ

-ಡಾ.ಆರ್‌.ನಾಗನಗೌಡ್ರ, ಕೃಷಿ ಇಲಾಖೆ ಅಧಿಕಾರಿ, ಶಿಗ್ಗಾವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.