ADVERTISEMENT

ಬ್ಯಾಡಗಿ ಬರಪೀಡಿತ: ಘೋಷಣೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 15 ಜುಲೈ 2017, 8:52 IST
Last Updated 15 ಜುಲೈ 2017, 8:52 IST

ಬ್ಯಾಡಗಿ: ‘ಪ್ರಸಕ್ತ ವರ್ಷವೂ ತಾಲ್ಲೂಕಿನಲ್ಲಿ ಮುಂಗಾರು ಕೈಕೊಟ್ಟಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ತಾಲ್ಲೂಕನ್ನು ಬರಗಾಲ ಪೀಡಿತ ಎಂದು ಘೋಷಿಸಬೇಕು’ ಎಂದು ಆಗ್ರಹಿಸಿ ಸ್ಥಳೀಯ ರೈತ ಹೋರಾಟ ಸಮಿತಿಯ ಸದಸ್ಯರು ಶುಕ್ರವಾರ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

‘2015–16ನೇ ಹಾಗೂ 2016–17ನೇ ಸಾಲಿನ ಬೆಳೆ ವಿಮೆ ಪರಿಹಾರದ ಹಣವನ್ನು ಕೂಡಲೇ ರೈತರಿಗೆ ಸಂದಾಯ ಮಾಡಬೇಕು, ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿರುವ ರೈತರ ಬೆಳೆ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು’ ಎಂದು ಆಗ್ರಹಿಸಿದರು.

ಈ ವೇಳೆ ಮಾತನಾಡಿದ ಪುರಸಭೆ ಸದಸ್ಯ ಮುರಿಗೆಪ್ಪ ಶೆಟ್ಟರ, ‘2015–16ನೇ ಸಾಲಿನ ಬೆಳೆವಿಮೆ ಪರಿಹಾರದ ಹಣ 300ಕ್ಕೂ ಹೆಚ್ಚು ರೈತರಿಗೆ ತಲುಪಿಲ್ಲ. ಅದನ್ನು ಕೂಡಲೇ ಸಂದಾಯ ಮಾಡಬೇಕು’ ಎಂದು ಆಗ್ರಹಿಸಿದರು.

ADVERTISEMENT

ರೈತ ಹೋರಾಟ ಸಮಿತಿ ಅಧ್ಯಕ್ಷ ಹನುಮಂತಪ್ಪ ಮಾಗೋಡ ಮಾತನಾಡಿ, ‘ಸಹಕಾರಿ ಸಂಘಗಳ ಸಾಲ ಮನ್ನಾದ ಪ್ರಯೋಜನ ಎಲ್ಲ ರೈತರಿಗೆ ತಲುಪುತ್ತಿಲ್ಲ. ಹೀಗಾಗಿ ರೈತರ ಸಂಪೂರ್ಣ ಸಾಲ ಮನ್ನಾ ಮಾಡುವುದು ಅಗತ್ಯ’ ಎಂದು ಪ್ರತಿಪಾದಿಸಿದರು.

‘ಮೋಡ ಬಿತ್ತನೆಗೆ ಇದೇ ಸೂಕ್ತ ಕಾಲವಾಗಿದ್ದು, ಕೂಡಲೆ ಮೋಡ ಬಿತ್ತನೆಗೆ ರಾಜ್ಯ ಸರ್ಕಾರ ಮುಂದಾ ಗಬೇಕು’ ಎಂದು ಅವರು ಒತ್ತಾಯಿಸಿದರು. ಈ ವೇಳೆ ರೈತ ಮುಖಂಡರಾದ ಈರಪ್ಪ ಸಂಕಣ್ಣನವರ, ಗೋಣೆಪ್ಪ ಸಂಕಣ್ಣನವರ, ಚೇತನ ಕಬ್ಬೂರ, ಬಸವಂತಪ್ಪ ದಾಸರ, ಬಸವರಾಜ ಸಂಕಣ್ಣನವರ, ಚನ್ನಬಸಪ್ಪ ಕಲಕಟ್ಟಿ, ಆರ್.ಬಿ.ಬಣಕಾರ, ಗುಡ್ಡಪ್ಪ ಬಾರ್ಕಿ, ರಾಮಣ್ಣ ಬ್ಯಾಡಗಿ, ಶಿವು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.