ADVERTISEMENT

ಮತದಾನ ಬಹಿಷ್ಕರಿಸಿ ಪ್ರತಿಭಟನೆ

ಹೊಸ ಹೂಲಿಹಳ್ಳಿಯಲ್ಲಿ ಮತಗಟ್ಟೆ ಪ್ರಾರಂಭಿಸಲು ಗ್ರಾಮಸ್ಥರ ಬಿಗಿಪಟ್ಟು

​ಪ್ರಜಾವಾಣಿ ವಾರ್ತೆ
Published 13 ಜನವರಿ 2017, 5:55 IST
Last Updated 13 ಜನವರಿ 2017, 5:55 IST
ಹೊಸ ಹೂಲಿಹಳ್ಳಿ (ರಾಣೆಬೆನ್ನೂರು): ಎ.ಪಿ.ಎಂ.ಸಿ ಚುನಾವಣೆಗಾಗಿ ಹೊಸ ಹೂಲಿಹಳ್ಳಿಯ ಹಿರಿಯ ಪ್ರಾಥಮಿಕ ಸರ್ಕಾರಿ ಶಾಲೆಯಲ್ಲಿ ಮತಗಟ್ಟೆ  ಪ್ರಾರಂಭಿಸಬೇಕೆಂದು ಆಗ್ರಹಿಸಿ ಮತದಾರರು ಗುರುವಾರ ಸಂಜೆ 5 ಗಂಟೆವರೆಗೂ ಮತದಾನ ಬಹಿಷ್ಕರಿಸಿ, ತೀವ್ರ ಪ್ರತಿಭಟನೆ ನಡೆಸಿದರು.
 
‘ನಮ್ಮ ಗ್ರಾಮದಲ್ಲಿ 680ಕ್ಕೂ ಹೆಚ್ಚು ಮತಗಳಿವೆ. ವಯೋವೃದ್ಧರು, ಅಂಗವಿಕಲರು, ಮಹಿಳೆಯರು, ಅನಾರೋಗ್ಯ ಪೀಡಿತರು ಹಳೇ ಹೂಲಿಹಳ್ಳಿ ಮತಗಟ್ಟೆಗೆ 1ಕಿ.ಮೀ ನಡೆದುಕೊಂಡು ಹೋಗಲು ಆಗುವುದಿಲ್ಲ’ ಎಂದು ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಸಿ.ಸಿ. ಪಾಟೀಲ ಹೇಳಿದರು.
 
‘ಕಳೆದ ಬಾರಿ ಹಳೇ ಹೂಲಿಹಳ್ಳಿಯಲ್ಲಿ 3 ಮತಗಟ್ಟೆಗಳನ್ನು ಪ್ರಾರಂಭಿಸಿದ್ದರು. ಈ ಬಗ್ಗೆ ಜಿಲ್ಲಾಧಿಕಾರಿ ಮತ್ತು ಆಗಿನ ತಹಶೀಲ್ದಾರ್‌ ಅವರಿಗೆ ಮನವಿ ಸಲ್ಲಿಸಿ, ನಮ್ಮ ಗ್ರಾಮದಲ್ಲಿಯೇ ಮತಗಟ್ಟೆ ಪ್ರಾರಂಭಿಸಬೇಕೆಂದು ಒತ್ತಾಯಿಸಲಾಗಿತ್ತು. ಆದರೂ ಈ ಬಾರಿ ಚುನಾವಣಾಧಿಕಾರಿಗಳು ಮತ್ತೆ ಹಳೇ ಹೂಲಿಹಳ್ಳಿಯಲ್ಲಿಯೇ 3 ಮತಗಟ್ಟೆಗಳನ್ನು ಪ್ರಾರಂಭಿಸಿದ್ದಾರೆ’ ಎಂದು ಪಾಟೀಲ ಆರೋಪಿಸಿದರು. 
 
‘ಹೊಸ ಹೂಲಿಹಳ್ಳಿಯಲ್ಲಿಯೇ ಮತಗಟ್ಟೆ ಸ್ಥಾಪಿಸಬೇಕೆಂದು ತಹಶೀಲ್ದಾರ್‌ ರಾಮಮೂರ್ತಿ ಅವರಿಗೆ ದೂರವಾಣಿ ಮೂಲಕ ತಿಳಿಸಿದರೂ ಪ್ರಯೋಜನವಾಗಿಲ್ಲ. ಯಾರೂ ಮತದಾನ ಮಾಡದೇ ಬಹಿಷ್ಕಾರ ಮಾಡಿದ್ದೇವೆ’ ಎಂದರು.  
 
ಹೀಗಾಗಿ ಹೊಸ ಹೂಲಿಹಳ್ಳಿಯ ಮತದಾರರ ಪೈಕಿ ಯಾರೂ ಮತದಾನದಲ್ಲಿ ಪಾಲ್ಗೊಳ್ಳಲೇ ಇಲ್ಲ.
 
ಗ್ರಾಮ ಪಂಚಾಯ್ತಿ ಸದಸ್ಯರಾದ ವೇದಮೂರ್ತಿ ಸ್ವಾಮಿ ಹಿರೇಮಠ, ದೇವೆಂದ್ರಪ್ಪ ಬಣಕಾರ, ಹನುಮಂತಪ್ಪ ಪುಟ್ಟಪ್ಪ ಬೆಳವಿಗಿ, ಬಿದ್ದಾಡೆಪ್ಪ ಮತ್ತೂರ, ಕರಿಯಪ್ಪ ಮೂಲಿಮನಿ, ಬಸವರಾಜ ದೊಡ್ಡಮನಿ, ಶ್ರೀಧರ ಕೋಟೆಗೌಡ್ರ, ಈಶ್ವರ, ಪರಮೇಶಪ್ಪ ದೊಡ್ಡಮನಿ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.  
 
ಮುಂದಿನ ಸಲ- ಭರವಸೆ: ಮತಗಟ್ಟೆ ಪ್ರಾರಂಭಿಸಬೇಕೆಂದು ಹೊಸ ಹೂಲಿಹಳ್ಳಿ ಗ್ರಾಮಸ್ಥರು ಬುಧವಾರ ರಾತ್ರಿ 8 ಗಂಟೆಗೆ ದೂರವಾಣಿ ಮೂಲಕ ಏಕಾಏಕಿ ತಿಳಿಸಿದರು. ಈಗ ಏನೂ ಮಾಡಲು ಬರುವುದಿಲ್ಲ. ಇದೊಂದು ಬಾರಿ ಮತದಾನ ಮಾಡಿ, ಮುಂದಿನ ಚುನಾವಣೆಯಲ್ಲಿ ನಿಮ್ಮ ಗ್ರಾಮದಲ್ಲಿಯೇ ಮತಗಟ್ಟೆ ಪ್ರಾರಂಭಿಸಲಾಗುವುದು ಎಂದು ಮನವಿ ಮಾಡಿದ್ದೇನೆ. 
 
ಈ ಬಗ್ಗೆ ಮೊದಲೇ ತಿಳಿಸಿದ್ದರೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಪರ್ಯಾಯ ವ್ಯವಸ್ಥೆ ಮಾಡಬಹುದಿತ್ತು ಎಂದು ರಾಣೆಬೆನ್ನೂರು ತಹಶೀಲ್ದಾರ್‌ ರಾಮಮೂರ್ತಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.