ADVERTISEMENT

ಮಹದಾಯಿ ಇತ್ಯರ್ಥಕ್ಕೆ ಕಾಂಗ್ರೆಸ್‌ ಅಡ್ಡಿ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2017, 9:31 IST
Last Updated 24 ಡಿಸೆಂಬರ್ 2017, 9:31 IST
ಶಿಗ್ಗಾವಿಯ ಸಂತೆ ಮೈದಾನದಲ್ಲಿ ಶನಿವಾರ ನಡೆದ ಬಿಜೆಪಿ ಪರಿವರ್ತನಾ ಯಾತ್ರೆ ಸಮಾವೇಶವನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಉದ್ಘಾಟಿಸಿದರು
ಶಿಗ್ಗಾವಿಯ ಸಂತೆ ಮೈದಾನದಲ್ಲಿ ಶನಿವಾರ ನಡೆದ ಬಿಜೆಪಿ ಪರಿವರ್ತನಾ ಯಾತ್ರೆ ಸಮಾವೇಶವನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಉದ್ಘಾಟಿಸಿದರು   

ಶಿಗ್ಗಾವಿ: ‘ಮಹದಾಯಿ ವಿವಾದ ಬಗೆಹರಿಸಿಕೊಳ್ಳಲು ಗೋವಾ ಮುಖ್ಯಮಂತ್ರಿ ಮನೋಹರ ಪರಿಕ್ಕರ್ ಸಮ್ಮತಿ ನೀಡಿದ್ದಾರೆ. ಆದರೆ ರಾಜ್ಯ ಕಾಂಗ್ರೆಸಿಗರು, ಗೋವಾ ಕಾಂಗ್ರೆಸಿಗರ ಮೂಲಕ ವಿರೋಧಿಸುತ್ತಿದ್ದಾರೆ. ಹೀಗಾಗಿ ರಾಜ್ಯದ ಜನತೆಗೆ ಅನ್ಯಾಯವಾಗುತ್ತಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಕಾಂಗ್ರೆಸ್‌ ಮುಖಂಡರ ವಿರುದ್ಧ ಹರಿಹಾಯ್ದರು.

ಪಟ್ಟಣದ ಸಂತೆ ಮೈದಾನದಲ್ಲಿ ಶನಿವಾರ ನಡೆದ ಬಿಜೆಪಿ ನವ ಕರ್ನಾಟಕದ ನಿರ್ಮಾಣಕ್ಕಾಗಿ ಪರಿವರ್ತನಾ ಯಾತ್ರೆ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಮಹದಾಯಿ ಯೋಜನೆ ಇತ್ಯರ್ಥಕ್ಕಾಗಿ ಪತ್ರ ಬರೆದಿದ್ದು, ಅದಕ್ಕೆ ಗೋವಾ ಮುಖ್ಯಮಂತ್ರಿಗಳು ಸಹ ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಈ ವಿವಾದವನ್ನು ಸದ್ಯದಲ್ಲಿ ಬಗೆಹರಿಯಲಿದೆ’ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ADVERTISEMENT

‘ಕರ್ನಾಟಕ ಭ್ರಷ್ಟಾಚಾರದಲ್ಲಿ ನಂಬರ್ ಒನ್‌ ಆಗಿದ್ದು, ಅತ್ಯಾಚಾರದಲ್ಲಿ ಎರಡನೇ ಸ್ಥಾನ ಪಡೆದಿದೆ. ಸಿಲಿಕಾನ್‌ ಸಿಟಿ ಇಂದು ಕ್ರೈಮ್ ಸಿಟಿಯಾಗಿದೆ. ರಾಜ್ಯದಲ್ಲಿ ಆಡಳಿತ ಸಂಪೂರ್ಣ ಕುಸಿದಿದ್ದು, ಕಾನೂನು ಸುವ್ಯವಸ್ಥೆ ಹದಗೆಟ್ಟು ಹೋಗಿದೆ. ಹಣ ಕೊಟ್ಟು ಜನರನ್ನು ಸೇರಿಸಿ ಸರ್ಕಾರದ ಹಣದಲ್ಲಿ ಕಾಂಗ್ರೆಸ್‌ ಸಮಾವೇಶಗಳು ನಡೆಯುತ್ತಿವೆ. ಸರ್ಕಾರದ ಹಣ ಸಂಪೂರ್ಣ ಲೂಟಿಯಾಗುತ್ತಿದೆ’ ಎಂದು ದೂರಿದರು.

‘ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಅನ್ನಭಾಗ್ಯ ಯೋಜನೆಯನ್ನು ರಾಜ್ಯ ಕಾಂಗ್ರರಸ್‌ ಸರ್ಕಾರ ತಮ್ಮ ಯೋಜನೆ ಎಂದು ಪ್ರಚಾರ ಪಡೆಯುತ್ತಿದೆ. ಅಲ್ಲದೆ ಕೇಂದ್ರದಿಂದ ಬಂದಿರುವ ಅಕ್ಕಿ ರಾಜ್ಯದ ಜನತೆಗೆ ಸರಿಯಾಗಿ ವಿತರಿಸುತ್ತಿಲ್ಲ. ಕಾಳಸಂತೆಯಲ್ಲಿ ಅಕ್ಕಿ ಮಾರಾಟ ನಡೆದಿದೆ. ಸುಮಾರು 30ಸಾವಿರ ಕ್ವಿಂಟಲ್‌ ಅಕ್ಕಿ ಗೋದಾಮಿಯಲ್ಲಿ ಕೊಳೆಯತ್ತಿದೆ. ಸಾವಿರಾರು ಬಡಜನತೆ ಪಡಿತರ ಕಾರ್ಡ್‌ ರದ್ದಾಗಿವೆ’ ಎಂದು ಆರೋಪಿಸಿದರು.

ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್ ಮಾತನಾಡಿ, ‘ಕಾಂಗ್ರೆಸ್‌ ಸರ್ಕಾರ ಸರ್ವ ಭಾಗ್ಯಗಳಲ್ಲಿ ಅಡಿಗಲ್ಲು ಭಾಗ್ಯ ನೀಡುತ್ತಿದೆ. ಎಲ್ಲಿ ನೋಡಿರೂ ಅಡಿಗಲ್ಲು ನೆಡಲಾಗುತ್ತಿದೆ. ವಿನಃ ಅಭಿವೃದ್ಧಿ ಕಾರ್ಯಗಳಾಗಿಲ್ಲ. ಅವರು ರಾಜ್ಯದ ಜನತೆಗೆ ಮೋಸ ಮಾಡುತ್ತಿದ್ದಾರೆ. ಅಧಿಕಾರ ದುರ್ಬಳಿಕೆ, ಹಣ ದುರುಪಯೋಗವಾಗುತ್ತಿದೆ’ ಎಂದು ದೂರಿದರು.

ಶಾಸಕ ಬಸವರಾಜ ಬಸವರಾಜ ಬೊಮ್ಮಾಯಿ ಮಾತನಾಡಿ, ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಡೆಸುವ ಸಮಾವೇಶ ಸರ್ಕಾರದ ರಾಜ್ಯಶಕ್ತಿಯಾಗಿದೆ. ಆದರೆ ಬಿಜೆಪಿ ನಡೆಸುವ ಪರಿವರ್ತನಾ ಯಾತ್ರೆ ಸಮಾವೇಶ ಜನಶಕ್ತಿ ಸಮಾವೇಶವಾಗಿದೆ’ ಎಂದರು.

‘ಶಿಗ್ಗಾವಿ ಸವಣೂರ ಕ್ಷೇತ್ರದಲ್ಲಿ ಸುಮಾರು 26ಸಾವಿರ ಎಕರೆ ಭೂಮಿ ನೀರಾವರಿ, ಜಾನಪದ ವಿಶ್ವವಿದ್ಯಾಲಯ, ಬಾಡ ಕನಕದಾಸರ ಅರಮನೆ ಕಾಮಗಾರಿಗೆ ₹ 17ಕೋಟಿ ಬಿಡುಗಡೆ, ಪಶುಸಂಗೋಪನಾ ಕಾಲೇಜಿನ ಕಟ್ಟಡಕ್ಕೆ ಹಣ ಬಿಡುಗಡೆ, ಕಾಗಿನೆಲೆ, ಶಿಶುವಿನಹಾಳ ಶರೀಫ ಕ್ಷೇತ್ರ ಅಭಿವೃದ್ಧಿ, 2ನೂರ ಕೆರೆ ಅಭಿವೃದ್ಧಿ, ಎಪಿಎಂಸಿ ಅಭಿವೃದ್ಧಿ, ₹ 10ಕೋಟಿ ವೆಚ್ಚದಲ್ಲಿ ವಾಜಪೇಯಿ ವಸತಿ ಶಾಲೆ ಕಟ್ಟಡ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಹಿಂದೆ ಬಿಜೆಪಿ ಸರ್ಕಾರ ಜಾರಿಗೆ ತಂದಿದೆ ಎಂದ ಅವರು, ಕೆಲಸಕ್ಕೆ ಗುದ್ದಲಿ ಪೂಜೆ ನೆರವೇರಿಸುತ್ತೇವೆ. ಆದರೆ ಕಾಂಗ್ರೆಸ್‌ಗರು ಲಂಚಕ್ಕಾಗಿ ಗುದ್ದಲಿ ಹೊಡೆತ ನಡೆಸಿದ್ದಾರೆ. ನಮಗೆ ನೀಡುವ ಅನುದಾನ ಭೀಕ್ಷೆಯಲ್ಲ. ನಮ್ಮ ಪಾಲಿನ ಹಣ ನಮ್ಮಗೆ ನೀಡಲು ತಾರತಮ್ಯತೆ ಮಾಡುವುದು, ನಮ್ಮ ಹಣ ಎಂದು ಹೇಳುವುದು ಸರಿಯಲ್ಲ’ ಎಂದು ಸರ್ಕಾರ ವಿರುದ್ಧ ಹರಿಹಾಯ್ದರು.

ಮಾಜಿ ಸಚಿವ ಗೋವಿಂದ ಕಾರಜೋಳ, ಸಿ.ಟಿ.ರವಿ, ಕೆ.ಎಸ್‌.ಈಶ್ವರಪ್ಪ, ಸಂಸದ ಪ್ರಹ್ಲಾದ ಜೋಶಿ ಮಾತನಾಡಿದರು. ಮಾಚಿ ಸಚಿವ ಸಿ.ಎಂ.ಉದಾಶಿ, ಸಂಸದ ಶಿವಕುಮಾರ ಉದಾಸಿ ಮತ್ತಿತರರು ಇದ್ದರು. ವಿಧಾನ ಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ ಸ್ವಾಗತಿಸಿದರು. ಜಿಲ್ಲಾ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಶಿವಾನಂದ ಮ್ಯಾಗೇರಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.