ADVERTISEMENT

ಮಾವು,ಚಿಕ್ಕು ತೋಟ ಅಲ್ಪ ಬೆಲೆಗೆ ಹರಾಜು

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2017, 5:46 IST
Last Updated 8 ಸೆಪ್ಟೆಂಬರ್ 2017, 5:46 IST

ಹಾನಗಲ್: ತೋಟಗಾರಿಕೆ ಇಲಾಖೆಗೆ ಒಳಪಟ್ಟ ಮಾವು ಮತ್ತು ಚಿಕ್ಕು(ಸಪೋಟಾ) ತೋಟವು ಒಂದು ವರ್ಷದ ಅವಧಿಗೆ ಅತ್ಯಂತ ಕಡಿಮೆ ಮೊತ್ತಕ್ಕೆ ಹರಾಜು ಆಗಿರುವ ಸಂಗತಿ ಗುರುವಾರ ನಡೆದ ತಾಲ್ಲೂಕು ಪಂಚಾಯ್ತಿಯ ಸಾಮಾನ್ಯ ಸಭೆಯಲ್ಲಿ ಬೆಳಕಿಗೆ ಬಂದಿದೆ.

ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಶಿವಬಸಪ್ಪ ಪೂಜಾರ ಅವರ ಅಧ್ಯಕ್ಷ ತೆಯಲ್ಲಿ ನಡೆದ ಸಭೆಯಲ್ಲಿ ಈ ಕುರಿತು ನೀಡಿದ ಅಂಕಿ–ಅಂಶ ನೆರೆದಿದ್ದವರನ್ನು ಚಕಿತಗೊಳಿಸಿತು.
ತೋಟಗಾರಿಕೆ ಇಲಾಖೆಯ ವರದಿ ಮಂಡಿಸಿದ ಪ್ರಭಾರ ಸಹಾಯಕ ನಿರ್ದೇಶಕ ಆರ್‌.ಎಲ್‌.ಮೇಲಿನಮನಿ, ‘ಇಲ್ಲಿನ ತೋಟಗಾರಿಕೆ ಇಲಾಖೆಯ ಫಾರ್ಮ್‌ ಪ್ರದೇಶದಲ್ಲಿನ 17 ಎಕರೆ ಪ್ರದೇಶದಲ್ಲಿನ 105 ಮಾವಿನ ಗಿಡಗಳ ತೋಟವು ₹19 ಸಾವಿರಕ್ಕೆ ಈ ಸಾಲಿಗೆ ಹರಾಜು ಆಗಿದೆ. ಇದೇ ಪ್ರದೇಶದ ಲ್ಲಿರುವ 70 ಗಿಡಗಳನ್ನು ಹೊಂದಿರುವ ಚಿಕ್ಕು ತೋಟವು ₹22 ಸಾವಿರಕ್ಕೆ ಹರಾಜು ಮಾಡಲಾಗಿದೆ’ ಎಂದರು.

‘ಈ ಅವಾಂತರ ಬಗ್ಗೆ ಇಲಾಖೆ ಯಿಂದ ತನಿಖೆ ನಡೆಸುವಂತೆ ಸೂಚನೆ ನೀಡಲಾಗುವುದು’ ಎಂದು ಸಭೆಗೆ ಸ್ಪಷ್ಟಪಡಿಸಿದ ಶಿವಬಸಪ್ಪ,  ಹವಾಮಾನ ಆಧಾರಿತ ಮಾವಿನ ಬೆಳೆ ವಿಮೆ ಪರಿಹಾರದ ಬಗ್ಗೆ ಮಾಹಿತಿ ಕೇಳಿದರು.

ADVERTISEMENT

‘ರಾಜ್ಯದಲ್ಲಿ ಅಧಿಕವಾಗಿ ತಾಲ್ಲೂಕಿನ 142 ಹೆಕ್ಟರ್‌ ಮಾವು ಬೆಳೆಗೆ ಒಟ್ಟು 826 ರೈತರು ವಿಮೆ ಕಂತು ಕಟ್ಟಿದ್ದಾರೆ. ಪರಿಹಾರ ವಿತರಣಾಯ ಪ್ರಕ್ರಿಯೆಯು ಅಂತಿಮ ಹಂತದಲ್ಲಿದ್ದು, 15 ದಿನಗಳ ಒಳಗೆ ರೈತರ ಖಾತೆಗೆ ನೇರವಾಗಿ ಪರಿಹಾರ ಹಣ ಜಮೆಯಾಗಲಿದೆ’ ಎಂದು ಮೇಲಿನಮನಿ ಉತ್ತರಿಸಿದರು.

ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿಯ ಅಧಿಕಾರಿ ರಾಮು ‘ನಿರುದ್ಯೋಗಿ ಯುವತಿಯರಿಗೆ ಸ್ವಂತ ಉದ್ಯೋಗಕ್ಕಾಗಿ ಉದ್ಯೋಗಿನಿ ಯೋಜನೆ ಅಡಿಯಲ್ಲಿ ಸಾಲ ಸೌಲಭ್ಯ ಮತ್ತು ಬೀದಿ ಬದಿಯ ಮಹಿಳಾ ವ್ಯಾಪಾರಸ್ಥರಿಗೆ ₹10 ಸಾವಿರ ಧನ ಸಹಾಯ ನೀಡಲಾಗುತ್ತಿದೆ’ ಎಂದರು.

ಈ ವೇಳೆ ಮಾತನಾಡಿದ ಸದಸ್ಯ ಸಿದ್ಧನಗೌಡ ಪಾಟೀಲ, ‘ಇಂಥ ಸಾಕಷ್ಟು ಯೋಜನೆಗಳು ಇದ್ದರೂ ಅವುಗಳ ಪ್ರಚಾರವಿಲ್ಲ, ತಮ್ಮಿಷ್ಟದವರಿಗೆ ಸೌಲಭ್ಯ ಒದಗಿಸಿ ಲಾಭ ಮಾಡಿಕೊಳ್ಳುವ ಹವಣಿಕೆ ಇಲಾಖೆ ಅಧಿಕಾರಿಗಳಿಂದ ನಡೆಯುತ್ತಿದೆ’ ಎಂದು ಆರೋಪಿಸಿದರು.

‘ತಾಲ್ಲೂಕಿನ ಅಕ್ಕಿಆಲೂರ ಗ್ರಾಮದ ಹಲವು ವಾರ್ಡ್‌ಗಳಲ್ಲಿ 20 ದಿನಕ್ಕೊಮ್ಮೆ ಕುಡಿವ ನೀರು ಪೂರೈಸಲಾಗುತ್ತಿದೆ. ರೋಸಿಹೋದ ನಿವಾಸಿಗಳ ವಿರೋಧಕ್ಕೆ ಪೊಲೀಸರು ಪ್ರಕರಣ ದಾಖಲಿಸುವ ಬೆದರಿಕೆ ಹಾಕುವ ತಂತ್ರಗಳು ನಡೆಯು ತ್ತಿವೆ’ ಎಂದು ಸದಸ್ಯ ಅಬ್ದುಲ್‌ ಬಷೀರ್‌ಖಾನ್‌ ಪಠಾಣ ಆರೋಪಿಸಿದರು. ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷೆ ಸರಳಾ ಜಾಧವ, ಕಾರ್ಯನಿರ್ವಾಹಕ ಅಧಿಕಾರಿ ರಾಜೀವ್‌ ಕೊಲೇರ,  ಟಾಕನ ಗೌಡ ಪಾಟೀಲ, ಗೌರಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.