ADVERTISEMENT

ಮುಂದುವರಿದ ಖಾಸಗಿ ವೈದ್ಯರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2017, 10:16 IST
Last Updated 17 ನವೆಂಬರ್ 2017, 10:16 IST

ಹಾವೇರಿ: ಕರ್ನಾಟಕ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣ (ಕೆ.ಪಿ.ಎಂ.ಇ.) ಕಾಯಿದೆ ತಿದ್ದುಪಡಿಗೆ ವಿರೋಧಿಸಿ ನಡೆಯುತ್ತಿರುವ ಖಾಸಗಿ ವೈದ್ಯರ ಪ್ರತಿಭಟನೆ ಗುರುವಾರವೂ ಮುಂದುವರೆದಿತ್ತು. ಹೀಗಾಗಿ ನಗರದ ಎಲ್ಲ ಖಾಸಗಿ ಆಸ್ಪತ್ರೆಗಳು ಬಾಗಿಲು ತೆರೆಯಲಿಲ್ಲ. ಅದರಿಂದ ಜಿಲ್ಲಾ ಆಸ್ಪತ್ರೆಯಲ್ಲಿ ಹೊರ ರೋಗಿಗಳ ದಟ್ಟಣೆ ಹೆಚ್ಚಿತ್ತು. ನಾಲ್ಕನೇ ದಿನವೂ ಪ್ರತಿಭಟನೆ ಮುಂದುವರಿದ ಕಾರಣ, ಹಲವು ಶ್ರೀಮಂತರೂ ಗುರುವಾರ ಜಿಲ್ಲಾ ಆಸ್ಪತ್ರೆಯತ್ತ ಮುಖ ಮಾಡಿದ್ದರು.

‘ನನ್ನ ಮಗಳಿಗೆ ವಿಪರೀತ ಜ್ವರ ಬಂದಿವೆ. ಆದರೆ, ನಾನು ಈ ಮೊದಲು ಖಾಸಗಿ ಆಸ್ಪತ್ರೆಗೆ ತೋರಿಸಿದ್ದೆ. ಆದರೆ, ಈಗ ಖಾಸಗಿ ಆಸ್ಪತ್ರೆ ಬಂದ್‌ ಇರುವ ಕಾರಣಕ್ಕೆ ಸರ್ಕಾರಿ ಆಸ್ಪತ್ರೆಗೆ ಬಂದಿದ್ದೇನೆ. ಇಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗಿದ್ದು, ಚಿಕಿತ್ಸೆ ಪಡೆಯಲು ಗಂಟಗಟ್ಟಲೆ ಕಾಯಬೇಕು’ ಎಂದು ಸ್ಥಳೀಯ ನಿವಾಸಿ ಸುಲೇಮಾನ್‌ ಬೇಗನವರ ಅಳಲು ತೋಡಿಕೊಂಡರು.

ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಹೊರ ರೋಗಿಗಳ ಸಂಖ್ಯೆ ಹೆಚ್ಚಾಗಿದ್ದು, ಹೊರ ರೋಗಿಗಳ ವಿಭಾಗದ ಚೀಟಿ ಮಾಡುವಲ್ಲಿ, ಸ್ಕ್ಯಾನ್‌ ಮಾಡುವಲ್ಲಿ, ಔಷಧ ವಿತರಿಸುವಲ್ಲಿ, ರಕ್ತ ಪರೀಕ್ಷಾ ಕೇಂದ್ರದ ಬಳಿ ಹಾಗೂ ವೈದ್ಯರ ಕೊಠಡಿಯ ಎದುರು ಉದ್ದನೆಯ ಸರದಿ ಸಾಲು ಕಂಡು ಬಂತು.

ADVERTISEMENT

ಹೆಚ್ಚುವರಿ ಸಿಬ್ಬಂದಿ: ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಹೊರ ರೋಗಿಗಳನ್ನು ನಿಯಂತ್ರಿಸುವ ಉದ್ದೇಶದಿಂದ ಗುರುವಾರದಿಂದ, ನರ್ಸಿಂಗ್‌ ಕಾಲೇಜಿನ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳನ್ನು ನೇಮಕ ಮಾಡಲಾಗಿದೆ. ಅಷ್ಟೇ ಅಲ್ಲದೇ, ಹೊರ ರೋಗಿಗಳ ವಿಭಾಗದ ಚೀಟಿ ಮಾಡುವ ಅವಧಿಯನ್ನು ಬೆಳಿಗ್ಗೆ 9.30ರಿಂದ ಸಂಜೆ 5ರ ವರೆಗೆ ವಿಸ್ತರಿಸಲಾಗಿದೆ.

ಸೇವಾವಧಿ ವಿಸ್ತರಣೆ: ‘ಖಾಸಗಿ ವೈದ್ಯರ ಪ್ರತಿಭಟನೆ ಹಾಗೂ ರೋಗಿಗಳ ದಟ್ಟಣೆ ಹಿನ್ನೆಲೆಯಲ್ಲಿ ರಕ್ತ ಪರೀಕ್ಷೆ ಹಾಗೂ ಸ್ಕ್ಯಾನ್‌ ಮಾಡುವ ಅವಧಿಯನ್ನು ಸಂಜೆ 5ರ ವರೆಗೆ ವಿಸ್ತರಿಸಲಾಗಿದೆ. ಒಟ್ಟು 992 ಹೊರ ರೋಗಿಗಳು, 111 ಒಳ ರೋಗಿಗಳಿಗೆ ಗುರುವಾರ ಚಿಕಿತ್ಸೆ ನೀಡಲಾಗಿದೆ. ಒಟ್ಟು 9 ಹೆರಿಗೆಗಳು ಹಾಗೂ ಇತರೆ 5 ರೋಗಿಗಳಿಗೆ ಸಾಮಾನ್ಯ ಶಸ್ತ್ರಚಿಕಿತ್ಸೆ ನಡೆದಿವೆ’ ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ನಾಗರಾಜ ನಾಯಕ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಹೃದಯಾಘಾತದಿಂದ ಮಹಿಳೆ ಸಾವು: ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಗುರುವಾರ ಬೆಳಗಿನ ಜಾವ 5ಕ್ಕೆ ಮಹಿಳೆಯೊಬ್ಬರು ಹೃದಯಾಘಾತದಿಂದ ಅಸುನೀಗಿದ್ದಾರೆ. ಹಾವೇರಿ ತಾಲ್ಲೂಕಿನ ಕನಕಾಪುರ ಗ್ರಾಮದ ಚಂಪಕ್ಕ ವಾಸಪ್ಪ ಮುಗಮೂರು(35) ಮೃತರು.

ಚಂಪಕ್ಕ ಅವರಿಗೆ ಬುಧವಾರ ರಾತ್ರಿ ಎದೆನೋವು ಕಾಣಿಸಿತ್ತು.ಆಗ ಪತಿ ವಾಸಪ್ಪ ಅವರನ್ನು ಹಾವೇರಿಗೆ ಕರೆ ತಂದರು.ಖಾಸಗಿ ಆಸ್ಪತ್ರೆಗಳು ಬಂದ್‌ ಇದ್ದವು. ಹೀಗಾಗಿ ಪರಿಚಿತ ವ್ಯೆದ್ಯರನ್ನು ಕಾಡಿ–ಬೇಡಿ ಪತ್ನಿಗೆ ಚಿಕಿತ್ಸೆ ಕೊಡಿಸಿದ್ದರು. ‘ಅವರು ಆಸಿಡಿಟಿಯಿಂದ ಹೀಗಾಗಿದೆ’ ಎಂದು ಪ್ರಾಥಮಿಕ ಚಿಕಿತ್ಸೆ ನೀಡಿ ಕಳುಹಿಸಿದ್ದರು.

‘ಗುರುವಾರ ಬೆಳಗಿನ ಜಾವ 4ಕ್ಕೆ ಮತ್ತೆ ಎದೆನೋವು ಕಾಣಿಸಿತ್ತು.. ತಕ್ಷಣ ದ್ವಿಚಕ್ರ ವಾಹನದ ಮೂಲಕ ಜಿಲ್ಲಾ ಆಸ್ಪತ್ರೆಗೆ ಕರೆತಂದಿದ್ದಾರೆ. ಜಿಲ್ಲಾ ಆಸ್ಪತ್ರೆಯಲ್ಲಿ ಇಸಿಜಿ ಪರೀಕ್ಷೆ ಮಾಡಿ ಐಸಿಯುಗೆ ದಾಖಲಿಸುವಷ್ಟರಲ್ಲಿ ಅವರು ಮೃತರಾಗಿದ್ದರು’ ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ನಾಗರಾಜ ನಾಯಕ್‌ ಹೇಳಿದರು.

* * 

ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಹೊರ ರೋಗಿಗಳನ್ನು ನಿಯಂತ್ರಿಸಲು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಎಲ್ಲ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಲು ಶ್ರಮಿಸಲಾಗುವುದು
ಡಾ.ನಾಗರಾಜ ನಾಯಕ್‌
ಜಿಲ್ಲಾ ಶಸ್ತ್ರ ಚಿಕಿತ್ಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.