ADVERTISEMENT

ಮುಖ್ಯರಸ್ತೆಗೆ ಭೂಸ್ವಾಧೀನ ಸನ್ನಿಹಿತ?

ಪ್ರಮೀಳಾ ಹುನಗುಂದ
Published 29 ಆಗಸ್ಟ್ 2017, 5:54 IST
Last Updated 29 ಆಗಸ್ಟ್ 2017, 5:54 IST
ಬ್ಯಾಡಗಿಯ ಮುಖ್ಯರಸ್ತೆಯ ಮೂಲಕ ಹಾಯ್ದು ಹೋಗಿರುವ ಸೊರಬ–ಗಜೇಂದ್ರಗಡ ರಾಜ್ಯ ಹೆದ್ದಾರಿಯ ಎರಡು ಬದಿಗೂ ಚಂರಂಡಿ ತೆರವುಗೊಳಿಸಿದ್ದರಿಂದ ರಸ್ತೆಯ ಬದಿಗೆ ನೀರು ನಿಂತಿರುವುದು
ಬ್ಯಾಡಗಿಯ ಮುಖ್ಯರಸ್ತೆಯ ಮೂಲಕ ಹಾಯ್ದು ಹೋಗಿರುವ ಸೊರಬ–ಗಜೇಂದ್ರಗಡ ರಾಜ್ಯ ಹೆದ್ದಾರಿಯ ಎರಡು ಬದಿಗೂ ಚಂರಂಡಿ ತೆರವುಗೊಳಿಸಿದ್ದರಿಂದ ರಸ್ತೆಯ ಬದಿಗೆ ನೀರು ನಿಂತಿರುವುದು   

ಬ್ಯಾಡಗಿ: ಕಳೆದ 15 ತಿಂಗಳಿಂದ ನನೆಗುದಿಗೆ ಬಿದ್ದಿರುವ ಇಲ್ಲಿಯ ಮುಖ್ಯರಸ್ತೆಯ ಮೂಲಕ ಹಾಯ್ದು ಹೋಗಿರುವ ಸೊರಬ–ಗಜೇಂದ್ರಗಡ ರಾಜ್ಯ ಹೆದ್ದಾರಿ ವಿಸ್ತರಣೆ ಕೆಲಸಕ್ಕೆ ಬೇಕಾದ ಜಾಗದ ಭೂಸ್ವಾಧೀನ ಪ್ರಕ್ರಿಯೆ ಸನ್ನಿಹಿತವಾಗಿದೆ.

‘ಹೆದ್ದಾರಿ ವಿಸ್ತರಣಾ ಕಾಮಗಾರಿಗೆ ಬೇಕಾದ ಜಾಗದ ಭೂಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿದಂತೆ ಅಂದಾಜು ₹11.08ಕೋಟಿ ವೆಚ್ಚದ ಕಡತವನ್ನು ಸರ್ಕಾರದ ಅನುಮೋದನೆಗೆ ಕಳುಹಿಸಲಾಗಿದೆ’ ಎಂದು ತಹಶೀಲ್ದಾರ್ ಶಿವಶಂಕರ ನಾಯಕ ಹೇಳಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು, ‘ಸರ್ಕಾರದ ಆದೇಶ ಪಡೆದ ಬಳಿ ನೋಟಿಸ್‌ ನೀಡಿ, ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಲಾಗುವುದು’ ಎಂದರು.
ಹೆದ್ದಾರಿ ವಿಸ್ತರಣೆಗಾಗಿ ಮುಖ್ಯ ರಸ್ತೆಯಲ್ಲಿ ಚರಂಡಿ ತನಕದ ಸರ್ಕಾರಿ ಜಾಗವನ್ನು ಮಾತ್ರ ತೆರವುಗೊಳಿಸಲಾಗಿತ್ತು.

ADVERTISEMENT

ಉಳಿದ ಜಾಗ ಮಾಲ್ಕಿ ಹದ್ದಿನಲ್ಲಿ ಬರುವುದರಿಂದ ಅಲ್ಲಿಯ ಕಟ್ಟಡ ಮಾಲೀಕರು ರಸ್ತೆ ವಿಸ್ತರಣೆಗೆ ಬೇಕಾದ ಜಾಗ ಕೊಡಲು ನೀಡಲು ನಿರಾಕರಿಸಿದ್ದರು. ಹೀಗಾಗಿ ಹಲವಾರು ಬಾರಿ ಸಭೆಗಳನ್ನು ನಡೆಸಿ ಅವರ ಮನವೊಲಿಸಲು ಯತ್ನಿಸಲಾಗಿತ್ತು. ಆದರೂ, ಕಟ್ಟಡ ಮಾಲಿಕರು ಅದಕ್ಕೆ ಸಮ್ಮತಿ ನೀಡಿರಲಿಲ್ಲ ಎಂದು ತಿಳಿಸಿದರು.

‘ಈ ಸಂಬಂಧ ಹಲವರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಈ ಹಿನ್ನೆಲೆಯಲ್ಲಿ ಭೂಸ್ವಾಧೀನ ಪ್ರಕ್ರಿಯೆಗೆ ಸುಮಾರು 15 ತಿಂಗಳು ವಿಳಂಭವಾಯಿತು. ಅಲ್ಲಿಯ ವ್ಯಾಪಾರಸ್ಥರಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗಬಾರದು ಎನ್ನುವ ಉದ್ದೇಶದಿಂದ ತಾತ್ಕಾಲಿಕವಾಗಿ ಚರಂಡಿಗಳನ್ನು ನಿರ್ಮಿಸಿ ನೀರು ಹರಿಯುವಂತೆ ವ್ಯವಸ್ಥೆ ಮಾಡಲಾಗಿದೆ’ ಎಂದು ಶಿವಶಂಕರ ಅವರು ವಿವರಿಸಿದರು.

ಸಾರ್ವಜನಿಕರ ತರಾಟೆ: ಮತ್ತೊಂದೆಡೆ, ‘ರಸ್ತೆ ವಿಸ್ತರಣೆ ಕಾಮಗಾರಿಗಾಗಿ ಮುಖ್ಯರಸ್ತೆಯ ಎರಡೂ ಬದಿಗೂ ಚರಂಡಿಗಳನ್ನು ತೆರವುಗೊಳಿಸಿ ವರ್ಷವೇ ಕಳೆಯಿತು. ಅತ್ತ ಕಾಮಗಾರಿಯೂ ಆರಂಭಗೊಂಡಿಲ್ಲ. ಇತ್ತ, ಮಳೆ ನೀರು, ಚರಂಡಿ ನೀರು ಮುಂದೆ ಸಾಗದ ರಸ್ತೆ ಆವರಿಸುತ್ತಿದೆ. ಇದರಿಂದ ಸುತ್ತಲಿನ ಪರಿಸರ ಕೆಡುತ್ತಿದೆ’ ಮುಖ್ಯ ರಸ್ತೆಯ ಕಟ್ಟಡ ಮಾಲೀಕ ಚೇತನ ಕಬ್ಬೂರ ಆರೋಪಿಸಿದರು.

‘ಕಳೆದ ವಾರ ಸುರಿದ ಮಳೆಯಿಂದ ಮುಖ್ಯ ರಸ್ತೆಯ ನೀರು ಕೆಲವು ಅಂಗಡಿಗಳಿಗೆ ನೀರು ನುಗ್ಗಿದೆ. ಮುಖ್ಯ ರಸ್ತೆಯಲ್ಲಿ ಸಾಕಷ್ಟು ಹಳೆಯ ಕಟ್ಟಡಗಳಿದ್ದು, ಯಾವಾಗ ಬೀಳುತ್ತವೆ ಎನ್ನುವ ಆತಂಕ ಕಾಡುತ್ತಿದೆ. ಚರಂಡಿ ನೀರು ಅಂಗಡಿಗಳಿಗೆ ನುಗ್ಗಿದ್ದರಿಂದ ಈಗ ಎತ್ತರಕ್ಕೆ ಮಣ್ಣು ಹಾಕಿಸಿಕೊಳ್ಳಲಾಗಿದೆ. ಮುಖ್ಯ ರಸ್ತೆ ಹಾಳು ಕೊಂಪೆಯಾಗಿ ಕಾಣುತ್ತಿದೆ. ಹೀಗಾಗಿ ವರ್ಷದಿಂದ ವ್ಯಾಪಾರ ಕುಂಠಿತ ಗೊಂಡಿದೆ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

‘ಕಾರ್ಪೋರೇಶನ್‌ ಬ್ಯಾಂಕ್‌ ಎದುರಿನ ಆರೇರ ಓಣಿಯಿಂದ ಶೌಚಾಲಯದ ನೀರು ಮುಖ್ಯ ರಸ್ತೆಗೆ ಹರಿದು ಬರುತ್ತಿದ್ದು, ಕಳೆದ 15 ದಿನಗಳಿಂದ ಪುರಸಭೆ ಸ್ವಚ್ಛತೆಗೆ ಕ್ರಮ ಕೈಕೊಂಡಿಲ್ಲ. ಸೊಳ್ಳೆಗಳು ಹೆಚ್ಚುತ್ತಿದ್ದು ಡೆಂಗಿಯ ಭೀತಿ ಎದುರಿಸುವಂತಾಗಿದೆ’ ಎಂದು ಸ್ಥಳೀಯರಾದ ಕುಬಸದ ಅವರು ಆತಂಕ ವ್ಯಕ್ತಪಡಿಸಿದರು.

‘ನಮ್ಮ ಅಂಗಡಿಯ ಮುಂದೆ ಚರಂಡಿ ನಿರ್ಮಿಸುವಂತೆ ಮನವಿ ಮಾಡಿಕೊಳ್ಳಲಾಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ನರಕಯಾತನೆ ಅನುಭವಿಸುವಂತಾಗಿದೆ’ ಎಂದು ಅವರು ಹಿಡಿಶಾಪ ಹಾಕಿದರು.

ಚರಂಡಿ ವ್ಯವಸ್ಥೆಯ ಕುರಿತು ಪ್ರತಿಕ್ರಿಯಿಸಿದ ತಹಶೀಲ್ದಾರ್ ಶಿವಶಂಕರ, ‘ಒಂದೇ ದಿನ ಹೆಚ್ಚು ಮಳೆ ಸುರಿದ ಕಾರಣ ಚರಂಡಿ ನೀರು ಹರಿಯಲು ಸಾಧ್ಯವಾಗಿಲ್ಲ. ತಕ್ಷಣ ಪುರಸಭೆ ವತಿಯಿಂದ ನೀರು ಹರಿಯಲು ವ್ಯವಸ್ಥೆ ಮಾಡಲಾಗಿದೆ’ ಎಂದು ಹೇಳಿದ್ದಾರೆ.

* * 

ಮುಖ್ಯ ರಸ್ತೆ ವಿಸ್ತರಿಸಿ ಶೀಘ್ರವೇ ದ್ವಿಮುಖ ರಸ್ತೆಯನ್ನಾಗಿ ಪರಿವರ್ತಿಸಬೇಕು. ಭೂಸ್ವಾಧೀನ ಪ್ರಕ್ರಿಯೆ ತ್ವರಿತವಾಗಿ ನಡೆಸಬೇಕು. ಇಲ್ಲದಿದ್ದರೆ ಹೋರಾಟ ಮಾಡುತ್ತೇವೆ
ಸುರೇಶ ಚಲವಾದಿ
ರಸ್ತೆ ವಿಸ್ತರಣೆ ಹೋರಾಟ ಸಮಿತಿ ಅಧ್ಯಕ್ಷ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.