ADVERTISEMENT

ಮೊದಲಾರ್ಧ ಬರ, ಈಗ ಚುನಾವಣಾ ಜ್ವರ

ವರ್ಷಾಂತ್ಯಕ್ಕೆ ಜಿಲ್ಲೆಯಲ್ಲಿ ಕಾವೇರಿದ ಚುನಾವಣೆ ಪ್ರಚಾರ: ಯಶಸ್ವಿಯಾಗಿ ನಡೆದ ಜಿಲ್ಲಾ ಉತ್ಸವ ‘ಸಂಸ್ಕೃತಿ ದರ್ಪಣ’

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2017, 10:49 IST
Last Updated 31 ಡಿಸೆಂಬರ್ 2017, 10:49 IST

ಹಾವೇರಿ: ಜಿಲ್ಲೆಯಾಗಿ ಹಾವೇರಿಗೆ ಈ ವರ್ಷ (ಆಗಸ್ಟ್ 24) 20ನೇ ವಸಂತ. ಈ ಬಾರಿ ಬರದ ಬೇಗೆಯೊಂದಿಗೆ ವರ್ಷ ಆರಂಭಗೊಂಡರೆ, ಅಂತ್ಯದಲ್ಲಿ ಚುನಾವಣಾ ಜ್ವರ ಕಾವೇರುತ್ತಿದೆ. ಬಗರ್ ಹುಕುಂ, ಅರಣ್ಯ ಭೂಮಿ ಒತ್ತುವರಿ, ಬೆಲೆ ಕುಸಿತ, ಬೆಳೆ ನಾಶ, ಪರಿಹಾರ ವಿಳಂಬದ ಕಾರಣ ರೈತರಿಗೂ ಬವಣೆಗಳು ತಪ್ಪಿಲ್ಲ. ಆದರೆ, ನರೇಗಾಕ್ಕೆ ಪ್ರೋತ್ಸಾಹ, ಕೆರೆ ತುಂಬಿಸುವ ಯೋಜನೆ, ಸತತ ಪರಿಶೀಲನಾ ಸಭೆಗಳು ಸ್ವಲ್ಪ ನಿಟ್ಟುಸಿರು ನೀಡಿದವು.

ಜಿಲ್ಲಾ ಉತ್ಸವ, ಎರಡು ಜಿಲ್ಲಾ ಸಾಹಿತ್ಯ ಸಮ್ಮೇಳನಗಳು, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮಳನದ ಅಧ್ಯಕ್ಷತೆ ಮತ್ತಿತರ ಕಾರ್ಯಕ್ರಮ ಸಾಂಸ್ಕೃತಿಕ ರಂಗು ನೀಡಿತು. ‘ಲಿಂಗಾಯತ ಹಾಗೂ ವೀರಶೈವ’ ಧರ್ಮದ ಹೋರಾಟಕ್ಕೆ ಜಿಲ್ಲೆಯೂ ಸಾಕ್ಷಿಯಾಯಿತು. ಸಸಿ ನೆಡುವ ಹಾಗೂ ಶೌಚಾಲಯದ ಜಾಗೃತಿ ಚಿಗುರೊಡೆಯಿತು. ‘ಜೀವಜಲ’ದ ಮಹತ್ವ ಅರಿವಿಗೆ ಬಂತು.

ಇತ್ತ ಪೊಲೀಸ್ ಇಲಾಖೆಯು ಮೂವರು ಎಸ್ಪಿಗಳನ್ನು (ಬಿ.ರಮೇಶ, ವಂಶಿಕೃಷ್ಣ, ಕೆ. ಪರಶುರಾಂ) ಕಂಡಿತು. ಡಿ.ಜೆ. ನಿಷೇಧಿಸಿದ ಜಿಲ್ಲಾಡಳಿತ ಹಾಗೂ ಪೊಲೀಸರ ಕ್ರಮಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಯಿತು. ಮರಳು ಮಾಫಿಯಾ ಸರ್ಕಾರಕ್ಕೇ ಕೆಟ್ಟ ಹೆಸರು ತಂದಿತು. ಜಿಲ್ಲಾ ಕೇಂದ್ರದ ಅಭಿವೃದ್ಧಿ ಕನಸು ನನಸಾಗುವ ಭರವಸೆಯೊಂದು ವರ್ಷಾಂತ್ಯದಲ್ಲಿ ಮೂಡಿತು. ನೋಟು ರದ್ಧತಿ ಹಾಗೂ ಜಿಎಸ್‌ಟಿ ಪರಿಣಾಮಗಳು ಮಾರುಕಟ್ಟೆಯನ್ನು ವರ್ಷ ಪೂರ್ತಿ ಕಾಡಿತು.

ADVERTISEMENT

ಜನವರಿ:

ಜನವರಿ ಮೊದಲ ದಿನವೇ ರಾಣೆಬೆನ್ನೂರಿನ ಮಾಗೋಡು ರಸ್ತೆಯಲ್ಲಿನ ಸಾರಿಗೆ ಸಂಸ್ಥೆಯ ಡಿಪೊದಲ್ಲಿ ಭದ್ರತಾ ಸಿಬ್ಬಂದಿ ಲಿಂಗರಾಜ (ಯಾನೆ ನಿಂಗರಾಜ) ಅವರು ತಮ್ಮ ಚಿಕ್ಕಪ್ಪ ಚನ್ನಪ್ಪ ಬಸವಣೆಪ್ಪ ಬೆಳಗುತ್ತಿ (40) ಅವರನ್ನು ಕೊಲೆ ಮಾಡಿ, ಬಸ್‌ನಲ್ಲಿಟ್ಟು ಬೆಂಕಿ ಹಚ್ಚಿ ಪರಾರಿಯಾದ ಘಟನೆ ನಡೆಯಿತು. ಈ ಪ್ರಕರಣವು ವರ್ಷಪೂರ್ತಿ ತಿರುವು ಪಡೆದುಕೊಂಡಿತು.

ಜಾತ್ರೆಗಳ ಆರಂಭ ಎನ್ನುವ ಹುಕ್ಕೇರಿಮಠದ ಜಾತ್ರೆ ಈ ವರ್ಷ ಎರಡು ಬಾರಿ (ಜನವರಿ ಮತ್ತು ಡಿಸೆಂಬರ್‌) ನಡೆಯಿತು. ಜಿಲ್ಲೆಯ ಏಳು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಚುನಾವಣೆಯಲ್ಲಿ ಬಿಜೆಪಿ ಮೇಲುಗೈ ಸಾಧಿಸಿತು.

ಜ.19ರಂದು ಶಿಗ್ಗಾವಿಯಲ್ಲಿ ಮಹೇಶ ಜೋಶಿ ಅಧ್ಯಕ್ಷತೆಯಲ್ಲಿ ಜಿಲ್ಲಾ 9ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಿತು. 2015–16ನೇ ಸಾಲಿನ ಬೆಳೆ ವಿಮೆ ಪರಿಹಾರದಲ್ಲಿ ವಂಚನೆ ಎಂಬಿತ್ಯಾದಿ ಸಮಸ್ಯೆಗಳ ವಿರುದ್ಧ ರೈತರ ಪ್ರತಿಭಟನೆಗಳೂ ವರ್ಷದ ಮೊದಲ ತಿಂಗಳೇ ಆರಂಭಗೊಂಡಿತು

ಫೆಬ್ರುವರಿ:

ಸರ್ಕಾರದ ನಿರ್ಲಕ್ಷ್ಯಕ್ಕೆ ತುತ್ತಾದ ಪ್ರತಿಷ್ಠಿತ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಸ್ಥಾನಕ್ಕೆ ಡಾ. ಕೆ.ಚಿನ್ನಪ್ಪ ಗೌಡ ಫೆ.9ರಂದು ರಾಜೀನಾಮೆ ನೀಡಿದರು.

ಫೆ. 12ರಂದು ‘ಹಿಂಗಾರು ಬರ ಅಧ್ಯಯನದ ಅಂತರ್‌ ಸಚಿವಾಲಯಗಳ ಕೇಂದ್ರ ತಂಡ’ ಜಿಲ್ಲೆಗೆ ಭೇಟಿ ನೀಡಿ ಪರಿಶೀಲಿಸಿತು.

ಫೆ 15ರಂದು ನಡೆದ ‘ಭಾರತ ಭಾಗ್ಯ ವಿಧಾತ’ ಕಾರ್ಯಕ್ರಮ ಗಮನ ಸೆಳೆಯಿತು. ಫೆ.19ರಂದು ರಾಣೆಬೆನ್ನೂರಿನಲ್ಲಿ ‘ಉಣ್ಣೆ ನೂಲು ಮತ್ತು ಬ್ಲ್ಯಾಂಕೆಟ್ ತಯಾರಿಕ ಘಟಕ ಮತ್ತು ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರವನ್ನು ಸಿ.ಎಂ. ಸಿದ್ದರಾಮಯ್ಯ ಉದ್ಘಾಟಿಸಿದರು. ಬ್ಯಾಡಗಿಯಲ್ಲಿ ಹಲವು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು.

ಮಾರ್ಚ್‌:

ರಾಜ್ಯ ಸರ್ಕಾರದ ನವ ದೆಹಲಿಯ ಹೆಚ್ಚುವರಿ ವಿಶೇಷ ಪ್ರತಿನಿಧಿಯಾಗಿ ಸಲೀಂ ಅಹ್ಮದ್‌ ನೇಮಕಗೊಂಡರು. ಜಿಲ್ಲೆಯಲ್ಲಿ ಜಾರಿಗೊಂಡ ಪೊಲೀಸ್ ಸುಧಾರಿತ ಗಸ್ತು ವ್ಯವಸ್ಥೆ ಯಶಸ್ಸು ಕಂಡಿತು. ಬಳಿಕ ರಾಜ್ಯದಲ್ಲೇ ಜಾರಿಗೆ ಬಂತು. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಮೋಹನಶಾಂತನಗೌಡರ್ ನೇಮಕದಿಂದ ಜಿಲ್ಲೆ ಸಂಭ್ರಮಿಸಿತು.

ಜಿಲ್ಲಾ ಉತ್ಸವ ‘ಸಂಸ್ಕೃತಿ ದರ್ಪಣ’ ಯಶಸ್ವಿಯಾಗಿ ನಡೆಯಿತು. ಹೆಗ್ಗೇರಿ ಕೆರೆ ಹಾಗೂ ಜಿಲ್ಲೆಯ ಹಲವು ಕೆರೆಗಳ ಹೂಳೆತ್ತುವ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು. ಹುಕ್ಕೇರಿಮಠದ ಲಿಂ. ಶಿವಲಿಂಗ ಸ್ವಾಮೀಜಿ ಜನ್ಮ ಶತಮಾನೋತ್ಸವ ಕಾರ್ಯಕ್ರಮ ನಡೆಯಿತು.

ಕೇಂದ್ರ ಜಾರಿ ನಿರ್ದೇಶನಾಲಯ ಹಾಗೂ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳ ತಂಡವೊಂದು ನಗರದ ವಿವಿಧೆಡೆ ದಾಳಿ ನಡೆಸಿ ಹಲವರನ್ನು ವಿಚಾರಣೆಗ ಒಳಪಡಿಸಿತು. ಯಾವುದೇ ಮಹತ್ತರ ಅಂಶಗಳು ಹೊರಬೀಳಲಿಲ್ಲ.

ಮಹಿಳೆಯರ ಗರ್ಭಕೋಶಗಳನ್ನು ತೆಗೆದು ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವೈದ್ಯ ಡಾ. ಪಿ. ಶಾಂತ ವಿರುದ್ಧ ಕ್ರಮಕ್ಕೆ ಸರ್ಕಾರ ಸೂಚಿಸಿತು.

ಏಪ್ರಿಲ್ :

ಏ.2ರಂದು ಶಿಗ್ಗಾವಿ ತಾಲ್ಲೂಕಿನ ನೀರಲಗಿ ಬಳಿ ಬಸ್‌ ಉರುಳಿ ಇಬ್ಬರು ಹಾಗೂ ಕಾರೊಂದು ಉರುಳಿ ಬಿದ್ದು ದಂಪತಿ ಮೃತಪಟ್ಟರು. ಇಂತಹ ಕೆಲವು ಅವಘಡಗಳು ನಡೆದವು.

ಸಚಿವರು, ಶಾಸಕರುಗಳು ಸೇರಿದಂತೆ ಜಿಲ್ಲಾಧಿಕಾರಿ ಡಾ. ವೆಂಕಟೇಶ್‌ ಎಂ.ವಿ, ಸಿಇಒ ಕೆ.ಬಿ. ಅಂಜನಪ್ಪ ಹಾಗೂ ಅಧಿಕಾರಿಗಳು ಪಿಕಾಸಿ ಹಿಡಿದು ಕೂಲಿಕಾರರಿಗೆ ಬೆಂಬಲ ನೀಡಿದರು. ಹಾವೇರಿ ಎಪಿಎಂಸಿ ಅಧ್ಯಕ್ಷರ ಮೇಲೆ ಹಲ್ಲೆ ನಡೆದು, ಪರಸ್ಪರ ದೂರು ದಾಖಲಾದವು.

ಮೇ :

ಮೇ 11ರಂದು ಸಚಿವ ಆರ್. ವಿ. ದೇಶಪಾಂಡೆ ನೇತೃತ್ವದ ಸಚಿವ ಸಂಪುಟ ಉಪ ಸಮಿತಿಯ ಬರ ಪರಿಶೀಲನಾ ಸಭೆ ನಡೆಸಿತು. ಹಾವೇರಿಯ ವಿದ್ಯಾನಗರದ ನಿವಾಸಿ, ಲಯನ್ಸ್‌ ಆಂಗ್ಲ ಮಾಧ್ಯಮ ಶಾಲೆಯ ಪೃಥ್ವಿ ಆರ್. ಮಾಂಡ್ರೆ ಎಸ್ಸೆಸ್ಸೆಲ್ಸಿಯಲ್ಲಿ ಜಿಲ್ಲೆಗೆ ಸಾರ್ವಕಾಲಿಕ ಅಧಿಕ ಅಂಕ ಪಡೆದರು. ಜಿಲ್ಲೆಯ ಮಾವಿನ ಹಣ್ಣಿಗೆ ‘ವರದಾ ಗೋಲ್ಡ್‌’ ಬ್ರಾಂಡಿಂಗ್ ನೀಡಲಾಯಿತು.

ಮೇ 24ರಂದು ಬಿಜೆಪಿ ನಡಿಗೆ ದಲಿತರ ಕಡೆಗೆ ಮೂಲಕ ಬಿ.ಎಸ್. ಯಡಿಯೂರಪ್ಪ ಜಿಲ್ಲೆಯಲ್ಲಿ ಪ್ರವಾಸ ಮಾಡಿದರು.

ಜೂನ್ :

ಜೂ. 9ರಂದು ಖರೀದಿ ಕೇಂದ್ರ ತೆರೆಯಬೇಕು ಎಂದು ಆಗ್ರಹಿಸಿ ರೈತನೊಬ್ಬ ವಿಷ ಸೇವಿಸಲು ಯತ್ನಿಸಿದನು. ಜೂನ್ 12ರಂದು ಬಗರ್‌ ಹುಕುಂ ಹಾಗೂ ಅರಣ್ಯ ಭೂಮಿ ಹಕ್ಕುಪತ್ರಕ್ಕೆ ಆಗ್ರಹಿಸಿ ರೈತರು ಬೆತ್ತಲಾದ, ವಿಷ ಸೇವಿಸಿದ ಪ್ರತಿಭಟನೆಗಳು ನಡೆದವು. ಜೂನ್‌ 19ರಂದು ನಡೆದ ‘ಸಬ್‌ ಕಾ ಸಾಥ್ ಸಬ್‌ ಕಾ ವಿಕಾಸ್‌’ ಕಾರ್ಯಕ್ರಮಕ್ಕೆ ಗುಜರಾತ್ ಮುಖ್ಯಮಂತ್ರಿ ವಿಜಯ್‌ ರೂಪಾನಿ ಬಂದರು.

ಜುಲೈ:

ಜು.9 ರಂದು ಅಗಡಿಯ ಅಕ್ಕಿಮಠದಿಂದ 2 ನಿಮಿಷದಲ್ಲಿ 40 ಗ್ರಾಮಗಳಲ್ಲಿ 12 ಸಾವಿರ ಸಸಿ ನೆಡುವ ಪರಿಸರ ಜಾತ್ರೆ ನಡೆಯಿತು. ಸಾಲು ಮರ ತಿಮ್ಮಕ್ಕ, ಚಿತ್ರನಟ ಚೇತನ್‌ ಸಾಕ್ಷಿಯಾದರು.

ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಅಜ್ಜಂಪೀರ್ ಖಾದ್ರಿ ಆಯ್ಕೆಯಾದರು. ಎಐಸಿಸಿ ಉಸ್ತುವಾರಿ ವೇಣುಗೋಪಾಲ್ ಜಿಲ್ಲೆಗೆ ಭೇಟಿ ನೀಡಿದರು.

ಜುಲೈ 27ರಂದು ಸಿ.ಎಂ ಸಿದ್ದರಾಮಯ್ಯ ಅವರು ತೋಟಗಾರಿಕೆ ಎಂಜಿನಿಯರಿಂಗ್‌ ಮತ್ತು ಆಹಾರ ತಂತ್ರಜ್ಞಾನ ಮಹಾವಿದ್ಯಾಲಯದ ಶೈಕ್ಷಣಿಕ ಸಮುಚ್ಛಯದ ಶಂಕುಸ್ಥಾಪನೆ ನೆರವೇರಿಸಿದರು. ಕಾಗಿನೆಲೆಯಲ್ಲಿ ಕೆರೆ ತುಂಬಿಸುವ ಯೋಜನೆ, ಕಾರಂಜಿ, ಉದ್ಯಾನ, ಆಯುರ್ವೇದ ಸಮುಚ್ಛಯ ಗಮನಸೆಳೆದವು.

ಆಗಸ್ಟ್:

ವೀರಶೈವ ಮತ್ತುಲಿಂಗಾಯತ ಪ್ರತ್ಯೇಕ ಧರ್ಮದ ಪರ–ವಿರೋಧ ಪ್ರತಿಭಟನೆಗಳಿಗೆ ಹಾವೇರಿ ನೆಲವೂ ಸಾಕ್ಷಿಯಾಯಿತು. ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಸಮಾವೇಶವೂ ನಡೆಯಿತು. ಆ.3ರಂದು ಕಳ್ಳಿಹಾಳದ ರೈತರನ್ನು ವಶಕ್ಕೆ ಪಡೆದ ಪೊಲೀಸರು, ಯುಟಿಪಿ ಕಾಮಗಾರಿ ವೇಗಗೊಳಿಸಿದರು. ಕ್ಷೌರಿಕರ ನಡಿಗೆ ದಲಿತರ ಕೇರಿಯ ಕಡೆಗೆ ಎಂಬ ಸಾಮರಸ್ಯದ ಕಾರ್ಯಕ್ರಮ ಕರ್ಜಗಿಯಲ್ಲಿ ನಡೆಯಿತು.

ಆಗಸ್ಟ್ 11ರಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ಸಂಸ್ಥಾಪನಾ ದಿನಾಚರಣೆಯಲ್ಲಿ 19 ಕೃತಿಗಳು ಏಕಕಾಲಕ್ಕೆ ಲೋಕಾಪರ್ಣೆಗೊಂಡವು. ಆಗಸ್ಟ್‌ 29ರಂದು ಕಾಂಗ್ರೆಸ್‌ ಬೂತ್‌ ಸಮಿತಿ ಸದಸ್ಯರು ಹಾಗೂ ಕಾರ್ಯಕರ್ತರ ಸಭೆಗೆ ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್‌ ಬಂದರು.

ಸೆಪ್ಟೆಂಬರ್:

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಹಕಾರದಲ್ಲಿ ಅಭಿವೃದ್ಧಿ ಪಡಿಸಿದ ಗಣಜೂರು ಕೆರೆಯನ್ನು ಡಾ.ವೀರೇಂದ್ರ ಹೆಗ್ಗಡೆ ಹಸ್ತಾಂತರ ಮಾಡಿದರು. ಇದೇ ತಿಂಗಳ ಅಂತ್ಯದಲ್ಲಿ ‘ಮನೆ ಮನೆಗೆ ಕಾಂಗ್ರೆಸ್’ ಕಾರ್ಯಕ್ರಮ ನಡೆಯಿತು.

ಸಂಗೂರು ಸಕ್ಕರೆ ಕಾರ್ಖಾನೆಯು ಕಬ್ಬಿಗೆ ಸೂಕ್ತ ಬೆಲೆ ನೀಡುತ್ತಿಲ್ಲ ಎಂದು ರೈತರು ಪ್ರತಿಭಟನೆಗಳು ನಡೆದವು. ಕಾರ್ಖಾನೆ ಆವರಣದಲ್ಲಿ ಫಕ್ಕೀರಪ್ಪ ತಾವರೆ ಪ್ರತಿಮೆ ಅನಾವರಣವೂ ಆಯಿತು. ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಗೌರವ ಜಿಲ್ಲೆಯ ಚಂಪಾ ಅವರಿಗೆ ಒಲಿದು ಬಂತು. ಕೆಲವು ದಿನಗಳು ಸುರಿದ ಮಳೆ ಭರವಸೆ ಮೂಡಿಸಿತ್ತು.ಆದರೆ, ಬಳಿಕ ಮರೆಯಾಯಿತು.

ಅಕ್ಟೋಬರ್:

ಅಕ್ಟೋಬರ್ 26ರಂದು ನವ ಕರ್ನಾಟಕ (ವಿಷನ್)–2025 ಅಂಗವಾಗಿ ‘ಹಾವೇರಿ ವಿಷನ್ 2025 ಕಾರ್ಯಾಗಾರ ನಡೆಯಿತು. ಮೊಬೈಲ್ ಆ್ಯಪ್‌ ಆಧರಿಸಿದ ಮುಂಗಾರು ಬೆಳೆ ಸಮೀಕ್ಷೆಯಲ್ಲಿ ಜಿಲ್ಲೆ ಮುಂಚೂಣಿಯಲ್ಲಿ ನಿಂತಿತು.

ನವೆಂಬರ್ :

ಖಾಸಗಿ ಆಸ್ಪತ್ರೆಗಳ ವೈದ್ಯರ ಪ್ರತಿಭಟನೆ ಬಿಸಿ ಜನತೆಗೆ ತಟ್ಟಿತು. ರಾಣೆಬೆನ್ನೂರು ಹಾಗೂ ಹಾನಗಲ್‌, ಹಿರೇಕೆರೂರು, ಶಿಗ್ಗಾವಿಯಲ್ಲಿ ಸಿ.ಎಂ. ಕಾರ್ಯಕ್ರಮಗಳು ನಡೆದವು. ಜಿಲ್ಲಾ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಸತೀಶ ಕುಲಕರ್ಣಿ ಆಯ್ಕೆಯಾದರು. ಶಾಸಕ ಕೆ.ಎಸ್. ಪುಟ್ಟಣ್ಣಯ್ಯ ಅವರಿಗೆ ಡಾ. ಶಿಮುಶ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಡಿಸೆಂಬರ್‌:

ಅಕ್ಕಿಆಲೂರಿನಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನ, ರಾಣೆಬೆನ್ನೂರಿನಲ್ಲಿ ಅಂಧರ ಕ್ರಿಕೆಟ್ ಹಾಗೂ ಈಜು ನಡೆಯಿತು.

ಮುಖ್ಯಮಂತ್ರಿ ಹಾವೇರಿಯಲ್ಲಿ ವಾಸ್ತವ್ಯ ಹೂಡಿದರು. ಬಿಜೆಪಿಯ ಪರಿವರ್ತನಾ ಯಾತ್ರೆಗೆ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಬಂದರು. ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಸತತ ಮೂರು ದಿನ ಬಿಜೆಪಿಯ ಪರಿವರ್ತನಾ ಯಾತ್ರೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.