ADVERTISEMENT

ರಾಣೆಬೆನ್ನೂರು ಸರ್ಕಾರಿ ಆಸ್ಪತ್ರೆಗೆ ಜಿಲ್ಲಾಧಿಕಾರಿ ಭೇಟಿ

​ಪ್ರಜಾವಾಣಿ ವಾರ್ತೆ
Published 20 ಮೇ 2017, 5:17 IST
Last Updated 20 ಮೇ 2017, 5:17 IST

ರಾಣೆಬೆನ್ನೂರು: ‘ಸಾವಿರಾರು ಬಡ ಮಹಿಳೆಯರ ಗರ್ಭಕೋಶಕ್ಕೆ ಕತ್ತರಿ ಹಾಕಿ ಅಮಾನುತ್ತುಗೊಂಡ ಸಾರ್ವಜನಿಕ ಆಸ್ಪ ತ್ರೆಯ ವೈದ್ಯ ಡಾ.ಪಿ. ಶಾಂತ ಅವರ ವೈದ್ಯಕೀಯ ಪ್ರಮಾಣ ಪತ್ರ ರದ್ದುಗೊಳಿಸುವಂತೆ ಕರ್ನಾಟಕ ವೈದ್ಯಕೀಯ ಮಂಡಳಿಗೆ ಪತ್ರ ಬರೆಯಲಾಗಿದೆ’ ಎಂದು ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಎಂ.ವಿ ಹೇಳಿದರು.

ಇಲ್ಲಿನ ಹಲಗೇರಿ ರಸ್ತೆಯ ಮೂಲ ಸೌಲಭ್ಯಗಳು, ವೈದ್ಯರು ಮತ್ತು ಸಿಬ್ಬಂದಿ ಕೊರತೆ ಇದೆ ಎಂಬ ಸಾರ್ವಜನಿಕರಿಂದ ದೂರಿನ ಹಿನ್ನೆಲೆಯಲ್ಲಿ ಗುರುವಾರ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

‘ಸಾರ್ವಜನಿಕ ಆಸ್ಪತ್ರೆ ಶಿಥಿಲಗೊಂಡಿದ್ದು, ನವೀಕರಣ ಮಾಡಲು ₹ 9 ಕೋಟಿ ಪ್ರಸ್ತಾವವನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಹಣ ಬಿಡುಗಡೆಯಾದ ಕೂಡಲೇ ಕಾಮಗಾರಿ ಪ್ರಾರಂಭಗೊಳ್ಳಲಿದೆ’ ಎಂದರು.

ADVERTISEMENT

‘ಆಸ್ಪತ್ರೆ ಆವರಣದಲ್ಲಿರುವ ಮಳೆ ಮಾಪನ ಕೇಂದ್ರವನ್ನು ಕೃಷಿ ಇಲಾಖೆಗೆ ಸ್ಥಳಾಂತರಿಸಿ, ಆ ಜಾಗದಲ್ಲಿ ಹೊಸದಾಗಿ ಹಣ್ಣಿನ ಅಂಗಡಿ, ಹಾಲು, ಕ್ಯಾಂಟೀನ್ ಕಟ್ಟಲಾಗುವುದು’ ಎಂದು ಮಾಹಿತಿ ನೀಡಿದರು.

‘ಎಲ್ಲ ಔಷಧಗಳು ಆಸ್ಪತ್ರೆಯಲ್ಲಿಯೇ ಸಿಗುವಂತೆ ಕ್ರಮ ವಹಿಸಲಾಗುವುದು. ವೈದ್ಯರು ರೋಗಿಗಳಿಗೆ ಹೊರಗಡೆ ಔಷಧ ತರುವಂತೆ ಚೀಟಿ ಬರೆದುಕೊಡಬಾರದು. ಪ್ರತಿ ದಿನ ನಗರಸಭೆಯಿಂದ ನೀರು ಬಿಡುವಂತೆ ನಗರಸಭೆ ಪೌರಾಯುಕ್ತರಿಗೆ ಸೂಚಿಸಲಾಗುವುದು’ ಎಂದು ತಿಳಿಸಿದರು.

‘ಕುಡಿಯುವ ನೀರು, ರಕ್ತನಿಧಿ ಕೇಂದ್ರ, ತೀವ್ರ ನಿಗಾ ವಾರ್ಡ್‌, ಶಸ್ತ್ರಚಿಕಿತ್ಸಾ ಕೊಠಡಿ, ಪ್ರಯೋಗಾಲಯ, ಎಕ್ಸರೇ ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸಲಾಗುವುದು. ವೈದ್ಯರ ನೇಮಕ, ಗ್ರುಪ್‌ ‘ಡಿ’ ಹುದ್ದೆಗಳನ್ನು ತುಂಬಲು ಸರ್ಕಾರಕ್ಕೆ ಪತ್ರ ಬರೆಯಲಾಗುವುದು. ಆಸ್ಪತ್ರೆಯ ಸಿಬ್ಬಂದಿಗೆ ಪ್ರತಿ ತಿಂಗಳು 5ನೇ ತಾರೀಖಿನೊಳಗೆ ವೇತನ ಜಮಾ ಆಗುವಂತೆ ನೋಡಿಕೊಳ್ಳಲಾಗುವುದು’ ಸಿಬ್ಬಂದಿಗೆ ಅವರು ಭರವಸೆ ನೀಡಿದರು.

ನಂತರ ಸಾರ್ವಜನಿಕ ಆಸ್ಪತ್ರೆ, ಹೆರಿಗೆ ಆಸ್ಪತ್ರೆ ಮತ್ತು ತಾಲ್ಲೂಕಿನ 19 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮತ್ತು ಸಿಬ್ಬಂದಿಗಳ ಸಭೆ ನಡೆಸಿದರು.ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಎಸ್‌.ಎಸ್‌.ಗಡಾದ, ಡಾ.ಚಂಪಾ ಮಾವಿನತೋಪ, ಡಾ.ದಾಮೋದರ, ಡಾ. ರಾಜೇಶ್ವರಿ ಕದರಮಂಡಲಗಿ, ಡಾ.ಪ್ರತಿಭಾ ನಾಯಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.