ADVERTISEMENT

‘ರೈತರ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸಲಿ’

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2017, 6:45 IST
Last Updated 14 ನವೆಂಬರ್ 2017, 6:45 IST

ಅಕ್ಕಿಆಲೂರ: ‘ರೈತರ ಆತ್ಮಹತ್ಯೆ ನಿಲ್ಲದ ಹೊರತು ದೇಶಕ್ಕೆ ದರಿದ್ರ ತಪ್ಪಿದ್ದಲ್ಲ. ಅತಿವೃಷ್ಟಿ–ಅನಾವೃಷ್ಟಿಯಿಂದ ಪದೇ ಪದೇ ಸಂಕಷ್ಟಕ್ಕೆ ಸಿಲುಕುತ್ತಿರುವ ರೈತ ಸಮುದಾಯದ ನೆರವಿಗೆ ಧಾವಿಸಬೇಕಿರುವ ಸರ್ಕಾರ ಭರವಸೆಗಳ ನೀಡುತ್ತ ಕಾಲಹರಣ ಮಾಡಬಾರದು’ ಎಂದು ಬಾಲೇಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ ಮನವಿ ಮಾಡಿದರು.
ಇಲ್ಲಿಗೆ ಸಮೀಪದ ವರ್ದಿ ಗ್ರಾಮದಲ್ಲಿ ರೈತ ಸಂಘ ಮತ್ತು ಹಸಿರು ಸೇನೆ(ಕೋಡಿಹಳ್ಳಿ ಚಂದ್ರಶೇಖರ ಬಣ) ಗ್ರಾಮ ಘಟಕ ಉದ್ಘಾಟಿಸಿ ಅವರು ಮಾತನಾಡಿದರು.

‘ಸಮಸ್ಯೆಗೆ ಸಿಲುಕಿ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ಬಳಿಕ ಪರಿಹಾರ ವಿತರಿಸಿ ಕೈತೊಳೆದುಕೊಳ್ಳುವ ಬದಲಿಗೆ ಸರ್ಕಾರ ರೈತರ ಆತ್ಮಸ್ಥೈರ್ಯ ಹೆಚ್ಚಿಸುವ ಕೆಲಸ ಮಾಡಬೇಕು’ ಎಂದು ಸಲಹೆ ನೀಡಿದರು.

ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಯಾಸೀರ್‌ಖಾನ ಪಠಾಣ ಮಾತನಾಡಿ, ‘ರೈತರ ಸಮಸ್ಯೆಗೆ ಸ್ಪಂದಿಸುವ ಉದ್ದೇಶದಿಂದ ಪ್ರತಿಯೊಂದು ಗ್ರಾಮಗಳಲ್ಲಿ ರೈತ ಸಂಘ ಮತ್ತು ಹಸಿರು ಸೇನೆಯ ಗ್ರಾಮ ಘಟಕ ಆರಂಭಿಸಲಾಗುತ್ತಿದೆ’ ಎಂದರು.

ADVERTISEMENT

ಕೂಡಲದ ಗುರುನಂಜೇಶ್ವರ ಮಠದ ಗುರು ಮಹೇಶ್ವರ ಸ್ವಾಮೀಜಿ ಸಮ್ಮುಖ, ಉಳವಯ್ಯ ಹಿರೇಮಠ ನೇತೃತ್ವ ವಹಿಸಿದ್ದರು. ಗ್ರಾಮ ಘಟಕದ ಅಧ್ಯಕ್ಷ ಸಿದ್ದರಾಮಗೌಡ ಕರೇಗೌಡ್ರ, ಮಹಾಂತೇಶ ಪೂಜಾರ, ಹನುಮಂತಪ್ಪ ಹುಚ್ಚಣ್ಣನವರ ಈ ವೇಳೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.