ADVERTISEMENT

ಲೋಪರಹಿತ ಮತದಾರರ ಪಟ್ಟಿ ಸಿದ್ಧಪಡಿಸಿ

​ಪ್ರಜಾವಾಣಿ ವಾರ್ತೆ
Published 7 ಜುಲೈ 2017, 9:25 IST
Last Updated 7 ಜುಲೈ 2017, 9:25 IST

ಹಾವೇರಿ: ‘ಜಿಲ್ಲೆಯಲ್ಲಿನ ಎಲ್ಲ 18ವರ್ಷ ಪೂರೈಸಿದ ಯುವಕ, ಯುವತಿಯನ್ನು ಕಡ್ಡಾಯವಾಗಿ ಮತದಾರರ ಪಟ್ಟಿಗೆ ಸೇರ್ಪಡೆ ಮಾಡಬೇಕು. ಮೃತರ ಹೆಸರು ತೆಗೆದು ಹಾಕಿ ಮತಗಟ್ಟೆವಾರು ಮತದಾರರ ಪಟ್ಟಿಯನ್ನು ಇದೇ  31ರೊಳಗೆ ಪರಿಷ್ಕರಿಸಬೇಕು’ ಎಂದು ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಎಂ.ವಿ. ಸೂಚಿಸಿದರು.

‘ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿ ಪರಿಷ್ಕರಣೆ’ ಕುರಿತು ಜಿಲ್ಲಾಡಳಿತದ ಸಭಾಂಗಣದಲ್ಲಿ ಈಚೆಗೆ ನಡೆದ ಅಧಿ ಕಾರಗಳ ಸಭೆಯಲ್ಲಿ  ಮಾತನಾಡಿದರು. ‘ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ತಕ್ಷಣದಿಂದಲೇ ಮತಗಟ್ಟೆವಾರು ಬೂತ್ ಮಟ್ಟದ ಅಧಿಕಾರಿಗಳನ್ನು ನೇಮಕ ಮಾಡಬೇಕು. ಈಗಾಗಲೇ ರಾಜಕೀಯ ಪಕ್ಷಗಳ ಸಭೆ ನಡೆಸಲಾಗಿದ್ದು, ಪಕ್ಷವಾರು ಬೂತ್ ಮಟ್ಟದ ಏಜೆಂಟರ್‌ಗಳನ್ನು ನೇಮಕ ಮಾಡಬೇಕು’ ಎಂದರು.

‘ವಾಸಿಸುವ ಸ್ಥಳದ ಮತಗಟ್ಟೆಯ ಮತದಾರರ ಪಟ್ಟಿಗೆ ಮಾತ್ರ ಹೆಸರನ್ನು ಸೇರ್ಪಡಿಸಹುದು. ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೆ, ಬಿ.ಎಲ್. ಓ.ಗಳನ್ನು ಸಂಪರ್ಕಿಸಿ ಹೆಸರು ಸೇರ್ಪಡೆ ಹಾಗೂ ವರ್ಗಾಯಿಸಿಕೊಳ್ಳಬೇಕು. ಈ ಕುರಿತು ಮತಗಟ್ಟೆ ಅಧಿಕಾರಿಗಳು ಸೂಕ್ಷ್ಮವಾಗಿ ಪರಿಶೀಲನೆ ನಡೆಸಿ ಕ್ರಮಕೈಗೊಳ್ಳಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು. 

ADVERTISEMENT

‘2018ರ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮತದಾರರ ಪಟ್ಟಿಯಲ್ಲಿ ಯಾವುದೇ ಗೊಂದಲವಿಲ್ಲದಂತೆ, ಪಾರದರ್ಶಕವಾಗಿ ಮತದಾರರ ಪಟ್ಟಿ ಪರಿಷ್ಕರಣೆಯಾಬೇಕು. ಮತದಾರರ ಪಟ್ಟಿಗೆ ಸೇರ್ಪಡೆ ಮಾಡುವ ಕುರಿತು ಜಾಗೃತಿ ಮೂಡಿಸಬೇಕು’ ಎಂದರು.

‘ತಹಶೀಲ್ದಾರ್‌ಗಳು ತಕ್ಷಣವೇ ತಮ್ಮ ವ್ಯಾಪ್ತಿಯ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆ ನಡೆಸಬೇಕು. ಮತದಾರರ ಪಟ್ಟಿ ಪರಿಷ್ಕಣೆ ಬಗ್ಗೆ ಆಂದೋಲನ ರೀತಿಯಲ್ಲಿ ಮಾಹಿತಿ ನೀಡಬೇಕು. ಎಲ್ಲ ಬೂತ್ ಮಟ್ಟದ ಅಧಿಕಾರಿಗಳಿಗೆ ತರಬೇತಿ ನೀಡಬೇಕು’ ಎಂದು ಸೂಚನೆ ನೀಡಿದರು.

‘ಮತದಾರರ ಪಟ್ಟಿ ಸೇರ್ಪಡೆ ಹಾಗೂ ಬದಲಾವಣೆ ಅರ್ಜಿ ನಮೂನೆಗಳಾದ 6, 6ಎ, 8, 8ಎ ಗಳಲ್ಲಿ ಕೆಲವು ಬದಲಾವಣೆಗಳಾಗಿದ್ದು, ಅರ್ಜಿಗಳನ್ನು ಹೊಸ ನಮೂನೆಯಲ್ಲೇ ಸ್ವೀಕರಿಸಬೇಕು. ಜಿಲ್ಲೆಯ ಒಟ್ಟು ಶೇ 23ರಷ್ಟು ಮಹಿಳಾ ಮತದಾರರ ಹೆಸರು ಇಲ್ಲ. ಇದಕ್ಕೆ ಕಾರಣ ಹುಡುಕಿ ಸರಿಪಡಿ ಸಬೇಕು’ ಎಂದು ತಹಶೀಲ್ದಾರ್‌ಗಳಿಗೆ ಸೂಚನೆ ನೀಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಯೋಗೇಶ, ಉಪವಿಭಾಗಾಧಿಕಾರಿ ಗಳಾದ ಬಸವರಾಜ ಸೋಮಣ್ಣನವರ, ಸಿದ್ದು ಹುಲ್ಲೋಳಿ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಪನಿರ್ದೇಶಕ ವಿನೋದ ಹೆಗ್ಗಳಗಿ, ಚುನಾವಣಾ ತಹಶೀಲ್ದಾರ್‌ ಪ್ರಶಾಂತ ನಾಲವಾರ, ತಹಶೀಲ್ದಾರ್‌ಗಳಾದ ಜಗದೀಶ ಮಜ್ಜಗಿ, ಶಿವಶಂಕರ ನಾಯಕ್ ಹಾಗೂ ಶಕುಂತಲಾ ಚೌಗಲಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.