ADVERTISEMENT

‘ಶರಣರ ತತ್ವಗಳು ಸರ್ವರ ಆಸ್ತಿ’

ಹಾವೇರಿಯಲ್ಲಿ ಶ್ರೀ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ; ಆಕರ್ಷಕ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 16 ಜನವರಿ 2017, 6:52 IST
Last Updated 16 ಜನವರಿ 2017, 6:52 IST
‘ಶರಣರ ತತ್ವಗಳು ಸರ್ವರ ಆಸ್ತಿ’
‘ಶರಣರ ತತ್ವಗಳು ಸರ್ವರ ಆಸ್ತಿ’   

ಹಾವೇರಿ: ‘ಶರಣರ ತತ್ವಾದರ್ಶಗಳು ಸರ್ವರ ಆಸ್ತಿ. ಅವರನ್ನು ಜಾತಿಗೆ ಸೀಮಿತಗೊಳಿಸಬೇಡಿ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಹೇಳಿದರು.

ನಗರದ ಡಿ.ದೇವರಾಜ ಅರಸು ಭವನದಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯ್ತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಜರುಗಿದ  ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಮಹಾತ್ಮರ ಕಾರ್ಯ ಸ್ಮರಿಸಲು ಸರ್ಕಾರದ ವತಿಯಿಂದ ಜಯಂತಿಗಳನ್ನು ಆಚರಿಸಲಾಗುತ್ತಿದ್ದು, ಅವರ ಆದರ್ಶಗಳನ್ನು ನಾವು ಪಾಲಿಸಬೇಕು. ಬಸವಣ್ಣನವರು 12ನೇ ಶತಮಾನದಲ್ಲಿ ಜಾತ್ಯತೀತ ಸಮಾಜ ನಿರ್ಮಾಣಕ್ಕೆ ಕರೆ ನೀಡಿದರು. ಶಿವಯೋಗಿ ಸಿದ್ಧರಾಮೇಶ್ವರರು ಅವರ ಸಮಕಾಲೀನರು’ ಎಂದರು.

‘₹1.40 ಕೋಟಿ ವೆಚ್ಚದಲ್ಲಿ ಡಾ.ಅಂಬೇಡ್ಕರ್‌ ಭವನ ಅಭಿವೃದ್ಧಿಗೊಳಿಸಲಾಗುತ್ತಿದೆ. ಮುಂದಿನ ಜಯಂತಿಯನ್ನು ಅಲ್ಲಿ ಆಚರಿಸೋಣ’ ಎಂದರು.
ಸಾಹಿತಿ ಎಫ್.ಎಸ್.ಕರೆದುರಗಣ್ಣನವರ ಮಾತನಾಡಿ, ‘ಶಿವಯೋಗಿ ಸಿದ್ಧರಾಮೇಶ್ವರರು ಕೆರೆ, ದೇವಾಲಯ, ಕಾಲುವೆ ನಿರ್ಮಾಣ ಮಾಡುವ ಮೂಲಕ ಕಾಯಕಯೋಗಿಗಳಾಗಿದ್ದರು. ಅವರು 68 ಸಾವಿರ ವಚನಗಳನ್ನು ಬರೆದಿದ್ದಾರೆ, ಮೌಢ್ಯವನ್ನು ಖಂಡಿಸಿದ್ದರು. ಮಹಿಳೆ ಯನ್ನು ದೇವರಿಗೆ ಹೊಲಿಸಿದ್ದರು. ಸಮಾಜದಲ್ಲಿ ಎಲ್ಲರೂ ಹೆಣ್ಣನ್ನು ಗೌರವದಿಂದ ಕಾಣಬೇಕು’ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಯೋಗೇಶ ಮಾತನಾಡಿ, ‘ಬಸವಾದಿ ಶರಣರು ಯಾವ ಜಾತಿಗೂ ಸೀಮಿತರಲ್ಲ,  ಶಿವಯೋಗಿ ಸಿದ್ಧರಾಮೇಶ್ವರರು ಕರ್ಮಯೋಗಿಗಳು, ವಚನಕಾರರಲ್ಲಿ ಭಿನ್ನವಾಗಿ ಕಾಣಿಸಿ ಕೊಂಡವರು. ಸಮಾಜಕ್ಕೆ ಒಳಿತಾಗುವ ಅಭಿವೃದ್ಧಿ ಕೆಲಸ ಮಾಡಿದರು’ ಎಂದರು.

ಜಿ.ಪಂ.ಅಧ್ಯಕ್ಷ ಕೊಟ್ರೇಶಪ್ಪ ಬಸೇ ಗಣ್ಣಿ, ನಗರಸಭೆ ಅಧ್ಯಕ್ಷೆ ಪಾರ್ವತೆಮ್ಮ ಹಲಗಣ್ಣನವರ,  ಜಿಲ್ಲಾ ಪಂಚಾಯ್ತಿ ಉಪಕಾರ್ಯದರ್ಶಿ ಜಿ.ಗೋವಿಂದಸ್ವಾಮಿ, ಉಪ ವಿಭಾಗಾಧಿಕಾರಿ ಬಸವರಾಜ ಸೋಮಣ್ಣನವರ, ತಹಶೀಲ್ದಾರ ಜೆ.ಬಿ. ಮಜ್ಜಗಿ, ನಗರಸಭೆ ಮಾಜಿ ಅಧ್ಯಕ್ಷ ಜಗದೀಶ ಮಲಗೌಡ, ನಗರಸಭೆ ಸದಸ್ಯ ಹನುಮಂತಪ್ಪ ದೇವಗಿರಿ, ಭೋವಿ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ರವಿ ಪೂಜಾರ, ಮತ್ತಿತರರು ಇದ್ದರು. ಇದಕ್ಕೂ ಮೊದಲು ನಡೆದ ಶ್ರೀ ಶಿವಯೋಗಿ ಸಿದ್ಧರಾಮೇಶ್ವರರ ಭಾವಚಿತ್ರ ಮೆರವಣಿಗೆಗೆ ಸಚಿವ ರುದ್ರಪ್ಪ ಲಮಾಣಿ ಚಾಲನೆ ನೀಡಿದರು.

*
ಸಿದ್ಧರಾಮೇಶ್ವರರು ಅನುಭವ ಮಂಟಪದ 3ನೇ ಗುರುಗಳಾಗಿದ್ದರೂ, ಕಾಯಕವನ್ನು ತಪ್ಪದೇ ಕೈಗೊಂಡರು. ಅವರು ಕಾಯಕದ ಮಹತ್ವ ಹೆಚ್ಚಿಸಿದ ಮಹಾತ್ಮ.
-ರುದ್ರಪ್ಪ ಲಮಾಣಿ
ಜಿಲ್ಲಾ ಉಸ್ತುವಾರಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT