ADVERTISEMENT

ಶೌಚಾಲಯ ಇಲ್ಲದಿದ್ದರೆ ಸೌಲಭ್ಯ ಕಡಿತ

ಸ್ವಚ್ಛ ಭಾರತ ಮಿಷನ್‌ ಯೋಜನೆಯಡಿ ನಡೆದ ಕಾರ್ಯಾಗಾರದಲ್ಲಿ ಜಿ.ಪಂ. ಸಿಇಒ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 20 ಜುಲೈ 2017, 11:11 IST
Last Updated 20 ಜುಲೈ 2017, 11:11 IST
ಶಿಗ್ಗಾವಿ ಪಟ್ಟಣದ ಗುರುಭವನದಲ್ಲಿ ಬುಧವಾರ ನಡೆದ  ಸ್ವಚ್ಛ ಭಾರತ ಮಿಷನ್‌ ಯೋಜನೆಯಡಿ ವಿವಿಧ ಇಲಾಖೆಗಳ ನೌಕಕರು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತರಿಗೆ ನಡೆದ ತಾಲ್ಲೂಕು ಮಟ್ಟದ ಕಾರ್ಯಾಗಾರವನ್ನು ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಕೋಟ್ರೇಶಪ್ಪ ಬಸೆಗಣ್ಣಿ ಉದ್ಘಾಟಿಸಿದರು
ಶಿಗ್ಗಾವಿ ಪಟ್ಟಣದ ಗುರುಭವನದಲ್ಲಿ ಬುಧವಾರ ನಡೆದ ಸ್ವಚ್ಛ ಭಾರತ ಮಿಷನ್‌ ಯೋಜನೆಯಡಿ ವಿವಿಧ ಇಲಾಖೆಗಳ ನೌಕಕರು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತರಿಗೆ ನಡೆದ ತಾಲ್ಲೂಕು ಮಟ್ಟದ ಕಾರ್ಯಾಗಾರವನ್ನು ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಕೋಟ್ರೇಶಪ್ಪ ಬಸೆಗಣ್ಣಿ ಉದ್ಘಾಟಿಸಿದರು   

ಶಿಗ್ಗಾವಿ: ‘ಶೌಚಾಲಯ ಹೊಂದಿಲ್ಲದವ ರಿಗೆ ಸರ್ಕಾರ ಬಿಡುಗಡೆ ಮಾಡುವ ಪಡಿತರ ಆಹಾರ ಸೌಲಭ್ಯವನ್ನು ನಿಲ್ಲಿಸಲಾಗುವುದು. ಸರ್ಕಾರಿ ನೌಕರರಿಗೆ ಹಿಂಬಡ್ತಿ, ಸೇರಿದಂತೆ ವಿವಿಧ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾ ಪಂಚಾಯ್ತಿ ಸಿಇಒ ಕೆ.ಬಿ. ಅಂಜನಪ್ಪ ಹೇಳಿದರು.

ಪಟ್ಟಣದ ಗುರುಭವನದಲ್ಲಿ ಬುಧವಾರ ನಡೆದ  ಸ್ವಚ್ಛ ಭಾರತ ಮಿಷನ್‌ ಯೋಜನೆಯಡಿ ಗ್ರಾಮ ಪಂಚಾಯ್ತಿ ಪಿಡಿಒ, ಅಧ್ಯಕ್ಷರು, ಶಾಲಾ ಮುಖ್ಯ ಶಿಕ್ಷಕರು,  ಅಂಗನವಾಡಿ, ಆಶಾ ಕಾರ್ಯಕರ್ತರು ಹಾಗೂ ಆರೋಗ್ಯ ಇಲಾಖೆ ಸಹಾಯಕರ ತಾಲ್ಲೂಕು ಮಟ್ಟದ ಕಾರ್ಯಾಗಾರದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸ್ವಾಭಿಮಾನಕ್ಕಾಗಿ ಶೌಚಾಲಯ, ಶೌಚಾಲಯಕ್ಕಾಗಿ ಸಮರ ಎಂಬ ಮಾತಿನಂತೆ ಸರ್ಕಾರ ಪ್ರತಿ ಮನೆಗಳಿಗೆ ಶೌಚಾಲಯ ನಿರ್ಮಾಣಕ್ಕೆ ಮುಂದಾಗಿದೆ. ರಾಜ್ಯದಲ್ಲಿ ಶೇ 67ರಷ್ಟು ಶೌಚಾಲಯಗಳ ನಿರ್ಮಾಣವಾಗಿದೆ. ಉಳಿದ ಶೇ 33ರಷ್ಟು ಶೌಚಾಲಯಗಳನ್ನು ಆಗಸ್ಟ್ 2ರೊಳಗೆ ನಿರ್ಮಿಸುವ ಗುರಿ ಇದೆ. ತಾಲ್ಲೂಕನ್ನು ಬಯಲು ಶೌಚಾಲಯ ಮುಕ್ತಗೊಳಿಸುವ ಘೋಷಣೆ ಮಾಡಬೇಕಾಗಿದೆ’ ಎಂದು ಹೇಳಿದರು.

ADVERTISEMENT

‘ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಅರಿವು ಮೂಡಿಸುವುದಕ್ಕಾಗಿ ಕರಪತ್ರಗಳನ್ನು ಹಂಚಲಾಗುತ್ತಿದೆ. ಶೌಚಾಲಯ ನಿರ್ಮಾಣಕ್ಕಾಗಿ ಹಿಂದೆ ನೀಡುತ್ತಿದ್ದ ₹5 ಸಾವಿರಕ್ಕೆ ಬದಲಾಗಿ ₹15 ಸಾವಿರ ನೀಡಲಾಗುತ್ತಿದೆ. ಸರ್ಕಾರಿ ಸೌಲಭ್ಯ ಪಡೆಯುವ ನೌಕರರು ತಮ್ಮ ತಂದೆ, ತಾಯಿ ವಾಸಿಸುವ ಮೂಲ ಕುಟುಂಬಕ್ಕೆ ಶೌಚಾಲಯ ಕಲ್ಪಿಸಬೇಕು. ಇಲ್ಲವಾದಲ್ಲಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದರು.

ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಕೋಟ್ರೇಶಪ್ಪ ಬಸೆಗಣ್ಣಿ ಮಾತನಾಡಿ, ‘ಎರಡು ವರ್ಷಗಳಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶೌಚಾಲಯಗಳ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿವೆ. ಅದಕ್ಕಾಗಿ ನೋಡಲ್‌ ಅಧಿಕಾರಿಗಳನ್ನು ಸಹ ನೇಮಕ ಮಾಡಲಾಗಿದೆ. ತಾಲ್ಲೂಕಿನಲ್ಲಿ ಕಳೆದ ನಾಲ್ಕು ತಿಂಗಳಲ್ಲಿ  4538 ಶೌಚಾಲಯಗಳ ನಿರ್ಮಾಣವಾಗಿದೆ. ಉಳಿದ 3060 ಶೌಚಾಲಯಗಳ ನಿರ್ಮಾಣಕ್ಕೆ ಪ್ರತಿಯೊಬ್ಬರು ಕೈಜೋಡಿಸಬೇಕು’ ಎಂದರು.

ಸ್ವಚ್ಛ ಭಾರತ ಮಿಷನ್‌ ಯೋಜನೆಯ ನೋಡಲ್‌ ಅಧಿಕಾರಿ, ಗೋವಿಂದಸ್ವಾಮಿ, ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಶಿವನಗೌಡ ಪಾಟೀಲ,ತಾಲ್ಲೂಕು ಪಂಚಾಯ್ತಿ ಸದಸ್ಯ ಶ್ರೀಕಾಂತ ಪೂಜಾರ, ಜಿಲ್ಲಾ ಪಂಚಾಯ್ತಿ ಸದಸ್ಯೆ ಶೋಭಾ ಗಂಜೀಗಟ್ಟಿ, ಜಿಲ್ಲಾ ಸಿಡಿಪಿಒ ಅಧಿಕಾರಿ ಮಾಳಗೇರ, ಜಿಲ್ಲಾ ಸಂಯೋಜನಾಧಿಕಾರಿ ಬಿ. ಗೋವಿಂದರಾಜು ಮಾತನಾಡಿದರು.

ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಪಾರವ್ವ ಆರೇರ್‌ ಅಧ್ಯಕ್ಷತೆ ವಹಿಸಿದ್ದರು, ತಾಲ್ಲೂಕು, ಜಿಲ್ಲಾ ಸದಸ್ಯರು, ಗ್ರಾಮ ಪಂಚಾಯ್ತಿ ಅಧ್ಯಕ್ಷರುಗಳು ಹಾಗೂ ಬಿಇಒ ಎಂ.ಎಚ್. ಪಾಟೀಲ ಇದ್ದರು.

ತಾಲ್ಲೂಕು ಪಂಚಾಯ್ತಿ ಇಒ ಜಿ. ಹನುಮಂತರಾಜು ಸ್ವಾಗತಿಸಿದರು. ಶಿಕ್ಷಕ ನಾಗೇಶ ಬೆಂತ್ತೂರ ನಿರೂಪಿಸಿದರು. ಪ್ರಭಾರ ಸಿಡಿಪಿಒ ರವಿ ಶೆಟ್ಟೆಪ್ಪನವರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.