ADVERTISEMENT

ಸತತ ಪ್ರಯತ್ನದಿಂದ ಹವ್ಯಾಸವಾಗುವ ಯಶಸ್ಸು

​ಪ್ರಜಾವಾಣಿ ವಾರ್ತೆ
Published 16 ಜುಲೈ 2017, 9:20 IST
Last Updated 16 ಜುಲೈ 2017, 9:20 IST

ಹಾವೇರಿ: ‘ಯಶಸ್ಸು ಮರೀಚಿಕೆಯಂತಿದ್ದರೂ ಸತತ ಪ್ರಯತ್ನ ಹಾಗೂ ಶ್ರದ್ಧೆಯಿಂದ ಕೆಲಸ ಮಾಡಿದರೆ, ಯಶಸ್ಸು ಹವ್ಯಾಸವಾಗಿ ನಮ್ಮ ಜೊತೆಗೆ ಸಾಗುತ್ತದೆ’ ಎಂದು ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ನುಡಿದರು. ನಗರದ ಹುಕ್ಕೇರಿಮಠದಲ್ಲಿ ಕಸಾಪ ತಾಲ್ಲೂಕು ಘಟಕ ಆಶ್ರಯದಲ್ಲಿ ಇತ್ತೀಚೆಗೆ ನಡೆದ ಸ್ವಾತಂತ್ರ್ಯಯೋಧ ಮಲ್ಲಪ್ಪ ದ್ಯಾಮಣ್ಣನವರ ಸ್ಮರಣಾರ್ಥ ‘ದತ್ತಿನಿಧಿ ಉಪನ್ಯಾಸ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಎಲ್ಲ ರಂಗದಲ್ಲಿ ಪ್ರಗತಿ ಸಾಧಿಸುವುದು ನಿಸರ್ಗದ ನಿಯಮ. ಅದನ್ನು ಸಾಧಿಸಲು ಸಾಮಾನ್ಯ ಸೂತ್ರವಿಲ್ಲ, ನಮ್ಮ ಭವಿಷ್ಯ ನಮ್ಮ ಕೈಯಲ್ಲಿಯೇ ಇದೆ. ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಜೀವನದಲ್ಲಿ ಮುಂದೆ ಬರಬೇಕು’ ಎಂದರು. ಕನ್ನಡ ಭಾಷೆಯಲ್ಲಿ ಐಎಎಸ್ ಪರೀಕ್ಷೆ ಬರೆದು ಉತ್ತೀರ್ಣರಾದ ಹುಬ್ಬಳ್ಳಿಯ ಫಕ್ಕೀರೇಶ ಬದಾಮಿ ಮಾತನಾಡಿದರು. ‘ಉತ್ತರ ಕರ್ನಾಟಕದಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ, ಆದರೆ ಸೂಕ್ತ ಮಾರ್ಗದರ್ಶನದ ಅಗತ್ಯವಿದೆ’ ಎಂದರು.

ದತ್ತಿದಾನಿ ಡಾ.ವಿ.ಪಿ.ದ್ಯಾಮಣ್ಣನವರ ಮಾತನಾಡಿ, ‘ಕನ್ನಡದಲ್ಲಿ ವ್ಯಾಸಂಗ ಮಾಡಿ ಉತ್ತಮ ಸಾಧನೆ ಮಾಡಿದವರನ್ನು ಪ್ರೋತ್ಸಾಹಿಸುವುದು ನಮ್ಮ ಕರ್ತವ್ಯ’ ಎಂದರು.
ಇದೇ ವೇಳೆ, ಕೇಂದ್ರೀಯ ಲೋಕಸೇವಾ ಆಯೋಗದ ಪರೀಕ್ಷೆಯನ್ನು ಕನ್ನಡದಲ್ಲಿ ಬರೆದು ಪಾಸ್‌ ಆದ ಫಕ್ಕೀರೇಶ ಬದಾಮಿ ಹಾಗೂ 2017ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು  ಸನ್ಮಾನಿಸಲಾಯಿತು.

ADVERTISEMENT

ಶಿವಲಿಂಗೇಶ್ವರ ಮಹಿಳಾ ಕಾಲೇಜು ಪ್ರಾಚಾರ್ಯರಾದ ಡಾ.ಸವಿತಾ ಹಿರೇಮಠ ದತ್ತಿ ಉಪನ್ಯಾಸ ನೀಡಿದರು. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಬಿ.ಲಿಂಗಯ್ಯ, ವಿಜ್ಞಾನಿ ಎಸ್.ಎಸ್.ದೇಸಾಯಿ, ಜಿಲ್ಲಾ ಪಂಚಾಯ್ತಿ ಸದಸ್ಯ ವಿರೂಪಾಕ್ಷಪ್ಪ ಕಡ್ಲಿ, ಸಾಹಿತಿ ಗಂಗಾಧರ ನಂದಿ, ಡಾ.ವಿ.ಪಿ.ದ್ಯಾಮಣ್ಣನವರ, ಕೆ.ಬಿ.ಭಿಕ್ಷಾವರ್ತಿಮಠ, ಶಿಕ್ಷಕಿ ಆರ್.ಕೆ.ರಾಧಾಬಾಯಿ, ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ  ವೈ.ಬಿ.ಆಲದಕಟ್ಟಿ, ಎಸ್.ಸಿ.ಮರಳಿಹಳ್ಳಿ, ಎಸ್.ಎಂ.ಬಡಿಗೇರ, ಹಾಗೂ ಎಸ್.ಬಿ. ಮಸಲವಾಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.