ADVERTISEMENT

ಸದೃಢ ಸಮಾಜ ನಿರ್ಮಾಣ ಹೊಣೆ ಶಿಕ್ಷಕರದ್ದು

​ಪ್ರಜಾವಾಣಿ ವಾರ್ತೆ
Published 15 ಜುಲೈ 2017, 8:53 IST
Last Updated 15 ಜುಲೈ 2017, 8:53 IST

ಅಕ್ಕಿಆಲೂರ: ‘ಇಡೀ ದೇಶ ಶಿಕ್ಷಕ ಸಮೂಹವನ್ನು ಅವಲಂಬಿಸಿದೆ. ಯಾರೂ ಊಹಿಸದಷ್ಟು ಮಹತ್ವದ ಹೊಣೆಗಾರಿಕೆ ಶಿಕ್ಷಕರ ಮೇಲಿದೆ’ ಎಂದು ಮಾಜಿ ಸಚಿವ ಸಿ.ಎಂ.ಉದಾಸಿ ನುಡಿದರು. ಇಲ್ಲಿ ಜ್ಞಾನಭಾರತಿ ಇಂಗ್ಲಿಷ್ ಮಾದ್ಯಮ ಹಿರಿಯ ಪ್ರಾಥಮಿಕ ಶಾಲೆ ಉದ್ಘಾಟಿಸಿ ಅವರು ಮಾತನಾಡಿದರು.

‘ಸದೃಢ ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಮಕ್ಕಳೆನ್ನುವ ಸಸಿಗಳನ್ನು ಚೆನ್ನಾಗಿ ಪೋಷಿಸಬೇಕಿದೆ. ರೋಗ ಬಾರದಂತೆ ಅಗತ್ಯ ಆರೈಕೆ ಮಾಡಬೇಕಿದೆ. ಸಮಾಜಕ್ಕೆ ಬೇಕಿರುವ ಯೋಗ್ಯ ವ್ಯಕ್ತಿಗಳನ್ನು ನೀಡುವ ಗುರುತರ ಜವಾಬ್ದಾರಿಯನ್ನು ಶಿಕ್ಷಕರು ಯಶಸ್ವಿಯಾಗಿ ನಿಭಾಯಿಸಬೇಕಿದೆ’ ಎಂದರು.

ನಿವೃತ್ತ ಪ್ರಾಚಾರ್ಯ ಪ್ರೊ.ಡಿ.ಬಿ.ಮುಗಳಿ ಮಾತನಾಡಿ, ‘ಶಿಕ್ಷಕರಿಗೆ ಲಾಭದ ದೃಷ್ಟಿಕೋನ ಇರಬಾರದು. ಶಿಕ್ಷಕ ಯಾವಾಗ ತನ್ನ ಕರ್ತವ್ಯವನ್ನು ಸಮರ್ಥವಾಗಿ ನಿರ್ವಹಿಸುತ್ತಾನೋ ಅಂದು ಸುಭದ್ರ ರಾಷ್ಟ್ರ ನಿರ್ಮಾಣ ಸಾಧ್ಯವಿದೆ. ಸುಶಿಕ್ಷಿತ ಸಮಾಜ ನಿರ್ಮಿಸುವ ನಿಟ್ಟಿನಲ್ಲಿ ಶಿಕ್ಷಕರಿಗೆ ಕಾಲಕಾಲಕ್ಕೆ ಸಂವಹನ, ಮಾರ್ಗದರ್ಶನ ನೀಡುವ ಅಗತ್ಯವಿದೆ’ ಎಂದು ಅಭಿಪ್ರಾಯಪಟ್ಟರು.

ADVERTISEMENT

ಅಧ್ಯಕ್ಷತೆ ವಹಿಸಿದ್ದ ಎಲ್.ಕೆ.ಶೇಷಗಿರಿ ಮಾತನಾಡಿ, ‘ತಮ್ಮೊಳಗಿನ ಅನನ್ಯ ಶಕ್ತಿಯನ್ನು ಹೊರಹಾಕುವ ಕೌಶಲ ಇಲ್ಲದೆ ಬಹಳಷ್ಟು ಶಿಕ್ಷಕರು ಚಡಪಡಿಸುತ್ತಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಶಿಕ್ಷಕರನ್ನು ಸಮಗ್ರವಾಗಿ ತರಬೇತಿಗೊಳಿಸಬೇಕಿದೆ. ಮಕ್ಕಳ ಭವಿಷ್ಯದ ಬದುಕಿಗೆ ಭದ್ರ ಬುನಾದಿ ಹಾಕಬೇಕಾದರೆ ಶಿಕ್ಷಕನು ಮೊದಲು ತನ್ನನ್ನು ತಾನು ತಿಳಿದುಕೊಳ್ಳಬೇಕಿದೆ’ ಎಂದರು.

ಟಿಎಪಿಸಿಎಂಎಸ್ ಅಧ್ಯಕ್ಷ ಬಸವರಾಜ್ ಸೂರಕೊಂಡರ, ಎಪಿಎಂಸಿ ನಿರ್ದೇಶಕಿ ಸುಜಾತಾ ಪಸಾರದ, ನಿವೃತ್ತ ಉಪನ್ಯಾಸಕ ಎಂ.ವಿ.ತಟ್ಟಿ, ಸಂಸ್ಥೆಯ ನಿರ್ದೇಶಕರಾದ ವಿ.ಪಿ.ಗುರಪ್ಪನವರ, ಕೆ.ವಿ.ಆಲದಕಟ್ಟಿ, ಮುಖ್ಯಶಿಕ್ಷಕ ಎಂ.ಎನ್.ಹಾವೇರಿ, ವಾಣಿ ಸುಗಂಧಿ  ಈ ವೇಳೆ ಭಾಗವಹಿಸಿದ್ದರು. ನಂದಿನಿ ಕೆ.ಬಿ.ಸ್ವಾಗತಿಸಿದರು. ಶಶಿಕಲಾ ಶೀಲವಂತರ, ಕಾವ್ಯಶ್ರೀ ಐ.ಎಚ್. ನಿರೂಪಿಸಿದರು. ಪವಿತ್ರಾ ಎಸ್.ಟಿ. ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.