ADVERTISEMENT

‘ಸರ್ಕಾರದಿಂದ ಮಲತಾಯಿ ಧೋರಣೆ’

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2017, 6:39 IST
Last Updated 9 ನವೆಂಬರ್ 2017, 6:39 IST

ಹಾನಗಲ್‌: ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಇದೇ 14 ರಂದು ಹಮ್ಮಿಕೊಂಡಿರುವ ಬೆಳಗಾವಿ ಸುವರ್ಣ ವಿಧಾನಸೌಧ ಚಲೋ ಚಳುವಳಿಯ ಪೂರ್ವಭಾವಿ ಸಭೆಯು ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆಯಿತು.

ಸಭೆಯ ನೇತೃತ್ವ ವಹಿಸಿ ಮಾತನಾಡಿದ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಮಣ್ಣ ಕೆಂಚಳ್ಳೇರ, ‘ಉತ್ತರ ಕರ್ನಾಟಕದ ರೈತರ ಬಗ್ಗೆ ಸರ್ಕಾರ ಮಲತಾಯಿ ಧೋರಣೆ ತಳೆದಿದೆ. ಇಲ್ಲಿನ ಪ್ರಮುಖ ಬೆಳೆಗಳಾದ ಹತ್ತಿ, ಗೋವಿನಜೋಳ, ಶೆಂಗಾ, ಸೊಯಾಬಿನ್‌, ಕಬ್ಬಿಗೆ ಸೂಕ್ತ ಬೆಲೆ ಸಿಗದೆ ರೈತರು ಸಂಕಷ್ಟದಲ್ಲಿದ್ದಾರೆ. ಜನಪ್ರತಿನಿಧಿಗಳು ಈ ಕುರಿತು ಚಿಂತನೆ ನಡೆಸದೆ ಚುನಾವಣೆ ಉಮೇದಿಯಲ್ಲಿದ್ದಾರೆ’ ಎಂದು ಆರೋಪಿಸಿದರು.

ದೆಹಲಿ ಪಾರ್ಲಿಮೆಂಟ್‌ ಚಲೋ:  ‘ಸ್ವಾಮಿನಾಥನ್‌ ವರದಿ ಪ್ರಕಾರ ಬೆಳೆದ ಬೆಳೆಯ ಖರ್ಚಿನ ಮೇಲೆ ಶೇ 50 ರಷ್ಟು ಲಾಭ ಸೇರಿಸಿ ಬೆಳೆಗೆ ಬೆಲೆ ನೀಡಲು, ರಾಷ್ಟ್ರೀಕೃತ ಬ್ಯಾಂಕ್‌ ಕೃಷಿ ಸಾಲ ಮನ್ನಾಗೆ ಆಗ್ರಹಿಸಿ ಇದೇ 20 ಮತ್ತು 21 ದೆಹಲಿ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದರು.

ADVERTISEMENT

ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ಅಡಿವೆಪ್ಪ ಆಲದಕಟ್ಟಿ, ತಾಲ್ಲೂಕು ಘಟಕದ ಅಧ್ಯಕ್ಷ ಮರಿಗೌಡ ಪಾಟೀಲ, ಮುಖಂಡರಾದ ಮಾಲತೇಶ ಪರಪ್ಪನವರ, ಮಹ್ಮದ್‌ಗೌಸ್‌ ಪಾಟೀಲ, ಶಾಂತನಗೌಡ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.