ADVERTISEMENT

ಸಾಮೂಹಿಕ ವಿವಾಹ: ದುಂದುವೆಚ್ಚಕ್ಕೆ ಕಡಿವಾಣ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2017, 7:13 IST
Last Updated 29 ಏಪ್ರಿಲ್ 2017, 7:13 IST

ಶಿಗ್ಗಾವಿ:  ‘ಆರ್ಥಿಕವಾಗಿ ಹಿಂದುಳಿದವರ ಕಲ್ಯಾಣದ ಉದ್ದೇಶದಿಂದ ಹಾಗೂ ದುಂದುವೆಚ್ಚದ ಕಡಿವಾಣಕ್ಕೆ ಸರ್ವ ಧರ್ಮ ಸಾಮೂಹಿಕ ವಿವಾಹ ಸಹಕಾರಿ’ ಎಂದು ವಿರಕ್ತಮಠದ ಸಂಗನಬಸವ ಸ್ವಾಮೀಜಿ ಹೇಳಿದರು.ತಾಲ್ಲೂಕಿನ ಬನ್ನೂರ ಗ್ರಾಮದಲ್ಲಿ ಬಸವ ಜಯಂತಿ ಅಂಗವಾಗಿ ಶುಕ್ರವಾರ ಭರತ ಸೇವಾ ಸಂಸ್ಥೆ ಸಹಯೋಗದಲ್ಲಿ ನಡೆದ 4ನೇ ವರ್ಷದ ಸರ್ವಧರ್ಮ ಸಾಮೂಹಿಕ ವಿವಾಹ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.

ಗಂಜೀಗಟ್ಟಿ ಚರಮೂರ್ತೆಶ್ವರಮಠದ ಶಿವಲಿಂಗೇಶ್ವರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿದರು. ‘ಭಾರತೀಯರಲ್ಲಿ ಧರ್ಮಾಚರಣೆಗೆ ಪ್ರಮುಖ ಆದ್ಯತೆ ನೀಡಲಾಗಿದೆ. ಕೆಲವು ಆಚರಣೆಗಳನ್ನು ವಿವಾಹದ ನಂತರ ನೆರವೇರಿಸಬೇಕ್ಕಾಗಿದೆ. ಹೀಗಾಗಿ ಇತರ ಸಂಸ್ಕಾರಗಳಿಗಿಂತ ವಿವಾಹ ಸಂಸ್ಕಾರ ಹೆಚ್ಚಿನ ಪ್ರಾಮುಖ್ಯತೆ ಪಡೆದಿದೆ. ಬದುಕನ್ನು ಸಾರ್ಥಕಗೊಳಿಸಲು ಇಂತಹ ಸಾಮೂಹಿಕ ವಿವಾಗಳನ್ನು ನೆರವೇರಿಸುವುದು ಅವಶ್ಯ’ ಎಂದು ಅಭಿಪ್ರಾಯಪಟ್ಟರು.

ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಮಾತನಾಡಿ, ‘ಇತರರಿಗೆ ನೆರವಾಗಬೇಕು ಎಂಬ ಮನೋಭಾವ ಮೂಡಿದಾಗ ಇಂತಹ ಮಹತ್ವದ ಕಾರ್ಯಗಳನ್ನು ನೆರವೇರಿಸಲು ಸಾಧ್ಯ ವಿದೆ. ಇದರಿಂದ ಬದುಕಿನ ಮೌಲ್ಯಾಧಾರಗಳು ಹೆಚ್ಚುತ್ತವೆ’ ಎಂದರು.ಶಾಸಕ ಬಸವರಾಜ ಬೊಮ್ಮಾಯಿ, ಮಾಜಿ ಸಂಸದ ಮಂಜುನಾಥ ಕುನ್ನೂರ, ವಿಧಾನ ಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ ಮಾತನಾಡಿದರು.

ADVERTISEMENT

ವಿವಾಹ ಮಹೋತ್ಸವದಲ್ಲಿ 11 ಜೋಡಿಗಳು ನವದಾಂಪತ್ಯಕ್ಕೆ ಕಾಲಿಟ್ಟವು.ಭರತ ಸೇವಾ ಸಂಸ್ಥೆ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಅಧ್ಯಕ್ಷತೆ ವಹಿಸಿದ್ದರು. ಎಪಿಎಂಸಿ ಅಧ್ಯಕ್ಷ ತಿಪ್ಪಣ್ಣ ಸಾತಣ್ಣವರ, ಸದಸ್ಯರಾದ ಪ್ರೇಮಾ ಪಾಟೀಲ, ಹನುಮರಡ್ಡಿ ನಡುವಿನಮನಿ, ಪುರಸಭೆ ಅಧ್ಯಕ್ಷ ಶಿವಪ್ರಸಾದ ಸುರಗೀಮಠ, ಜಿಲ್ಲಾ ಪಂಚಾಯ್ತಿ ಸದಸ್ಯೆ ದೀಪಾ ಅತ್ತಿಗೇರಿ, ತಾಲ್ಲೂಕು ಪಂಚಾಯ್ತಿ ಸದಸ್ಯ ಶ್ರೀಕಾಂತ ಪೂಜಾರ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.