ADVERTISEMENT

ಹಾಂವಶಿ–ಶಾಕಾರದ ಬಳಿ ಬಾಂದಾರ ಶೀಘ್ರ

ಹೆಗ್ಗೇರಿ ಹೂಳೆತ್ತಲು ₹15 ಕೋಟಿ: ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಪ್ರಕಟಣೆ

​ಪ್ರಜಾವಾಣಿ ವಾರ್ತೆ
Published 5 ಜನವರಿ 2017, 10:27 IST
Last Updated 5 ಜನವರಿ 2017, 10:27 IST

ಹಾವೇರಿ: ‘ತುಂಗಭದ್ರಾ ನದಿಗೆ ಕುಡಿಯುವ ನೀರಿಗಾಗಿ ಹಾಂವಶಿ–ಶಾಕಾರ ಹಾಗೂ ಮುದೇನೂರು ಬಳಿ ಬಾಂದಾರು (ಬ್ರಿಡ್ಜ್ ಕಂ ಬ್ಯಾರೇಜ್) ನಿರ್ಮಿಸಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ರುದ್ರಪ್ಪ ಲಮಾಣಿ ಹೇಳಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹಾವೇರಿ, ಹಾವನೂರು, ಗುತ್ತಲ ಮತ್ತು ಸುತ್ತಲ ಗ್ರಾಮಗಳಿಗೆ ಕುಡಿಯುವ ನೀರಿನ ಶಾಶ್ವತ ಯೋಜನೆ ಕಲ್ಪಿಸುವ ನಿಟ್ಟಿನಲ್ಲಿ ತುಂಗ ಭದ್ರಾ ನದಿಗೆ ಹಾಂವಶಿ–ಶಾಕಾರದಲ್ಲಿ ಬಾಂದಾರು ನಿರ್ಮಿಸಲಾಗುವುದು ಎಂದು ಹೇಳಿದರು.

ನದಿ ತೀರದ ಇನ್ನೊಂದು ದಡದಲ್ಲಿರುವ (ಬಳ್ಳಾರಿ ಜಿಲ್ಲಾ ವ್ಯಾಪ್ತಿ ಅಂಚಿನಲ್ಲಿ) ಹಾವಂಶಿ–ಶಾಕಾರ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಅಲ್ಲದೇ, ರಾಣೆಬೆನ್ನೂರು, ಬ್ಯಾಡಗಿ ಮತ್ತಿತರ ಪಟ್ಟಣಗಳಿಗೆ ನೀರು ಪೂರೈಸಲು ಮುದೇನೂರು ಬಳಿ ಬಾಂದಾರು ನಿರ್ಮಾಣಕ್ಕೆ ವಿಧಾನ ಸಭಾಧ್ಯಕ್ಷ ಕೆ.ಬಿ. ಕೋಳಿವಾಡ ಹಾಗೂ ಶಾಸಕ ಬಸವರಾಜ ಶಿವಣ್ಣನವರ ಮುತುವರ್ಜಿ ವಹಿಸಿದ್ದಾರೆ’ ಎಂದರು.

ಹೆಗ್ಗೇರಿ ಹೂಳು: ‘ಹಾವೇರಿಯ ಹೆಗ್ಗೇರಿ ಕೆರೆಯ ಹೂಳು ತೆಗೆಯುವ ಕುರಿತು ಕ್ರಿಯಾ ಯೋಜನೆ ರೂಪಿಸಲಾಗಿದೆ. ಜಲಸಂಪನ್ಮೂಲ ಇಲಾಖೆ ಮೂಲಕ ಸುಮಾರು ₹15 ಕೋಟಿ ವೆಚ್ಚದಲ್ಲಿ ಹೂಳೆತ್ತಲಾಗುವುದು. ಇನ್ನೊಂದೆಡೆ ತುಂಗಾ ಮೇಲ್ದಂಡೆ ಯೋಜನೆ ಕಾಮ ಗಾರಿಯು ಪ್ರಗತಿಯಲ್ಲಿದ್ದು, ಡಿಸೆಂಬರ್ ಅಂತ್ಯದೊಳಗೆ ಹೆಗ್ಗೇರಿ ಕೆರೆ ತುಂಬಿಸಲಾಗುವುದು. ಕುಡಿಯವ ನೀರಿನ ಜೊತೆ ದೋಣಿ ವಿಹಾರ, ಗಾಜಿನ ಮನೆ, ಪಕ್ಷಿ ವಿಹಾರಕ್ಕೆ ಕೆರೆಯ ಮಧ್ಯೆ ನಡುಗಡ್ಡೆ ನಿರ್ಮಾಣ ಮತ್ತಿತರ ಅಭಿವೃದ್ಧಿ ಗಳ ಮೂಲಕ ಪ್ರವಾಸೋದ್ಯಮ ತಾಣವಾಗಿ ಹೆಗ್ಗೇರಿ ಕೆರೆಯನ್ನು ರೂಪಿಸಲಾಗುವುದು’ ಎಂದರು.

ಅಪರಾಧ: ‘ಒಬ್ಬ ಜನಪ್ರತಿನಿಧಿಯಾಗಿ ತನ್ನ ಬುದ್ಧಿಯನ್ನು ಕೈಗೆ ನೀಡುವುದು ಹಾಗೂ ಬೇಕಾಬಿಟ್ಟಿ ಹೇಳಿಕೆ ನೀಡು ವುದು  ಅನುಚಿತ ವರ್ತನೆಯಾಗಿದೆ. ಒಂದೆಡೆ ವೈದ್ಯರ ಕೊರತೆ ಸಾಕಷ್ಟಿದೆ. ಈ ನಡುವೆ ಅವರ ಕರ್ತವ್ಯಕ್ಕೆ ಅಡ್ಡಿಪಡಿಸುವುದು ಅಪರಾಧ’ ಎಂದು ಸಂಸದ ಅನಂತಕುಮಾರ ಹೆಗಡೆ ವೈದ್ಯರನ್ನು ಥಳಿಸಿರುವ ಪ್ರಕರಣದ ಕುರಿತು ಅವರು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT