ADVERTISEMENT

ಹಾವೇರಿಗೆ ಈ ಬಾರಿ ಯಾರು ಉಸ್ತುವಾರಿ?

ಆರ್. ಶಂಕರ್, ಬಿ.ಸಿ. ಪಾಟೀಲ್, ಬಸವರಾಜ ಹೊರಟ್ಟಿ ಹೆಸರು ಮುಂಚೂಣಿಯಲ್ಲಿ

ಹರ್ಷವರ್ಧನ ಪಿ.ಆರ್.
Published 26 ಮೇ 2018, 13:18 IST
Last Updated 26 ಮೇ 2018, 13:18 IST

ಹಾವೇರಿ: ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದ ಜೆಡಿಸ್–ಕಾಂಗ್ರೆಸ್ ಮೈತ್ರಿ ಸರ್ಕಾರವು ವಿಶ್ವಾಸಮತ ಗಳಿಸಿದ್ದು, ಇಲ್ಲಿನ ಮುಂದಿನ ಜಿಲ್ಲಾ ಉಸ್ತುವಾರಿ ಸಚಿವರು ಯಾರು? ಎಂಬ ಚರ್ಚೆಗಳು ಗರಿಗೆದರಿವೆ.

ಜಿಲ್ಲಾ ಪ್ರಾತಿನಿಧ್ಯ ಮತ್ತು ಲಿಂಗಾಯತ ಕೋಟಾದಡಿ, ಜಿಲ್ಲೆಯ ಏಕೈಕ ಕಾಂಗ್ರೆಸ್‌ ಶಾಸಕ ಬಿ.ಸಿ. ಪಾಟೀಲ, ಜೆಡಿಎಸ್ –ಕಾಂಗ್ರೆಸ್ ಹೊರತಾಗಿ ಸರ್ಕಾರವನ್ನು ಬೆಂಬಲಿಸಿದ ಕಾರಣಕ್ಕೆ ಕೆಪಿಜೆಪಿಯ ಆರ್. ಶಂಕರ್ ಹೆಸರುಗಳು ಸಚಿವ ಸ್ಥಾನಕ್ಕೆ ಕೇಳಿ ಬರುತ್ತಿವೆ.

ಜಿಲ್ಲೆಯಲ್ಲಿ ಜೆಡಿಎಸ್ ಗೆಲುವು ಸಾಧಿಸಿಲ್ಲ. ಆದರೆ, ಇಲ್ಲಿನ ಶಿಕ್ಷಕರ ಕ್ಷೇತ್ರವನ್ನು ಸತತ ಏಳನೇ ಬಾರಿಗೆ ಪ್ರತಿನಿಧಿಸುತ್ತಿರುವ ವಿಧಾನಪರಿಷತ್ ಸದಸ್ಯ, ಪಕ್ಷದ ಹಿರಿಯ ಮುಖಂಡ ಬಸವರಾಜ ಹೊರಟ್ಟಿ ಹೆಸರೂ ಮುಂಚೂಣಿಯಲ್ಲಿದೆ. ಒಂದು ಬಾರಿ ಉಸ್ತುವಾರಿ ಸಚಿವರಾದ ಅನುಭವ ಅವರಿಗಿದೆ. ಬಿ.ಸಿ.ಪಾಟೀಲ ಮೂರನೇ ಬಾರಿ ಶಾಸಕರಾದರೆ, ಆರ್. ಶಂಕರ್ ಮೊದಲ ಬಾರಿಗೆ ಶಾಸಕರಾಗಿದ್ದಾರೆ.

ADVERTISEMENT

ಉಸ್ತುವಾರಿಗಳು: ಜಿಲ್ಲೆ ರಚನೆಯಾದ (24 ಆಗಸ್ಟ್‌ 1997 ) ಬಳಿಕ 9 ಉಸ್ತುವಾರಿ ಸಚಿವರನ್ನು ಕಂಡಿದೆ. ಈ ಪೈಕಿ ಸಿ.ಎಂ ಉದಾಸಿ, ಕೆ.ಬಿ. ಕೋಳಿವಾಡ, ಬಸವರಾಜ ಹೊರಟ್ಟಿ, ಮನೋಹರ್ ತಹಸೀಲ್ದಾರ್, ರುದ್ರಪ್ಪ ಲಮಾಣಿ ಜಿಲ್ಲೆಯಿಂದ ಆಯ್ಕೆಯಾಗಿದ್ದರೆ, ಮೋಟಮ್ಮ, ಸಗೀರ್‌ ಅಹ್ಮದ್‌, ಪ್ರಕಾಶ್ ಹುಕ್ಕೇರಿ ಹಾಗೂ ಮಹದೇವ ಪ್ರಸಾದ್‌ ಹೊರ ಜಿಲ್ಲೆಯವರು.

ಏಳು–ಬೀಳು: 1997ರ ಆಗಸ್ಟ್ 24ರಂದು ಜಿಲ್ಲೆ ರಚನೆಯಾಗಿದ್ದು, ಸಿ.ಎಂ. ಉದಾಸಿ ಮೊದಲ ಉಸ್ತುವಾರಿ ಸಚಿವರಾದರು. ಅವರು 1999ರ ಚುನಾವಣೆಯಲ್ಲಿ ಸೋಲು ಕಂಡರು. 1999ರಲ್ಲಿ ಅಸ್ತಿತ್ವಕ್ಕೆ ಬಂದ ಎಸ್.ಎಂ. ಕೃಷ್ಣ ಸರ್ಕಾರದ ಆರಂಭದಲ್ಲಿ ಸಗೀರ್ ಅಹ್ಮದ್, ಬಳಿಕ ಮೋಟಮ್ಮ ಉಸ್ತುವಾರಿಯಾಗಿದ್ದರು. ಅದೇ ಸರ್ಕಾರದಲ್ಲಿ ಜಿಲ್ಲೆಯ ಉಸ್ತುವಾರಿಯಾದ ಕೆ.ಬಿ.ಕೋಳಿವಾಡ, 2004ರ ಚುನಾವಣೆಯಲ್ಲಿ ಸೋಲು ಕಂಡರು.

2004ರ ಧರ್ಮಸಿಂಗ್ ಸರ್ಕಾರದಲ್ಲಿ ಉಸ್ತುವಾರಿಯಾಗಿದ್ದ ಬಸವರಾಜ ಹೊರಟ್ಟಿ, ಸತತ ಏಳನೇ ಬಾರಿ ವಿಧಾನ ಪರಿಷತ್ ಪ್ರವೇಶಿಸುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. 2006ರಲ್ಲಿ ಅಸ್ತಿತ್ವಕ್ಕೆ ಬಂದ ಜೆಡಿಎಸ್– ಬಿಜೆಪಿ ಸರ್ಕಾರದಲ್ಲಿ ಉಸ್ತುವಾರಿಯಾಗಿದ್ದ ಸಿ.ಎಂ. ಉದಾಸಿ, 2008ರಲ್ಲಿ ಗೆದ್ದು ಮತ್ತೆ ಉಸ್ತುವಾರಿಯಾಗಿದ್ದಾರೆ. ನಡುವೆ ಏಳು ದಿನಗಳು ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಮತ್ತು ಬಳಿಕ ರಾಷ್ಟ್ರಪತಿ ಆಡಳಿತವಿತ್ತು.

2008ರಿಂದ ಬಿ.ಎಸ್. ಯಡಿಯೂರಪ್ಪ, ಡಿ.ವಿ. ಸದಾನಂದ ಗೌಡ ಮತ್ತು ಜಗದೀಶ್‌ ಶೆಟ್ಟರ್ ಸರ್ಕಾರದಲ್ಲಿ ಉಸ್ತುವಾರಿಯಾಗಿದ್ದ ಅವರು, 2013ರಲ್ಲಿ ಸೋಲು ಕಂಡರು.

2013ರಲ್ಲಿ ಅಸ್ತಿತ್ವಕ್ಕೆ ಬಂದ ಸಿದ್ದರಾಮಯ್ಯ ಸರ್ಕಾರದಲ್ಲಿನ ಮೊದಲ ಉಸ್ತುವಾರಿ ಪ್ರಕಾಶ್ ಹುಕ್ಕೇರಿ ಲೋಕಸಭೆಗೆ ಆಯ್ಕೆಯಾಗಿ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಬಳಿಕ ಮಹದೇವ ಪ್ರಸಾದ್ ಉಸ್ತುವಾರಿಯಾದರು. ಅವರು ಆ ಬಳಿಕ ನಿಧನ ಹೊಂದಿದರು. ಅನಂತರದ ಉಸ್ತುವಾರಿ ಸಚಿವರಾದ ಮನೋಹರ ತಹಸೀಲ್ದಾರ್‌ಗೆ ಮತ್ತೆ ಸ್ಪರ್ಧಿಸಲು ಪಕ್ಷದ ಟಿಕೆಟ್‌ ಸಿಗಲಿಲ್ಲ. ರುದ್ರಪ್ಪ ಲಮಾಣಿ ಚುನಾವಣೆಯಲ್ಲಿ ಸೋಲು ಕಂಡರು.

ಅತಿ ಹೆಚ್ಚು ‘ಉಸ್ತುವಾರಿ’

ಸಿ.ಎಂ. ಉದಾಸಿ ಜಿಲ್ಲೆಯ ಮೊದಲ ಉಸ್ತುವಾರಿ ಸಚಿವರು. ಆಗ ಜೆ.ಎಚ್. ಪಟೇಲ್ ಮುಖ್ಯಮಂತ್ರಿಯಾಗಿದ್ದರು. ಆ ಬಳಿಕ ಎಚ್.ಡಿ.ಕುಮಾರಸ್ವಾಮಿ, ಬಿ.ಎಸ್.ಯಡಿಯೂರಪ್ಪ, ಡಿ.ವಿ. ಸದಾನಂದ ಗೌಡ, ಜಗದೀಶ ಶೆಟ್ಟರ್ ಮುಖ್ಯಮಂತ್ರಿ ಅವಧಿಯಲ್ಲೂ ಉದಾಸಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.