ADVERTISEMENT

ಹಾವೇರಿ: ಬಸ್‌ ತಡೆದು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 8 ಜುಲೈ 2017, 7:04 IST
Last Updated 8 ಜುಲೈ 2017, 7:04 IST

ಹಾವೇರಿ: ‘ಉಚಿತ ಶಿಕ್ಷಣ ಮತ್ತು ಬಸ್ ಪಾಸ್‌’ಗೆ ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌.ಎಫ್‌.ಐ) ಜಿಲ್ಲಾ ಸಮಿತಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಶುಕ್ರವಾರ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಬಳಿಕ ಕೇಂದ್ರೀಯ ಬಸ್ ನಿಲ್ದಾಣದ ಮುಂದೆ ಬಸ್‌ಗಳ ಸಂಚಾರ ತಡೆದು ಪ್ರತಿಭಟಿಸಿದರು.

ನಗರದ ಮುನ್ಸಿಫಲ್ ಮೈದಾನದಿಂದ ಆರಂಭಿಸಿದ ಮೆರವಣಿಗೆಯು ಕೇಂದ್ರೀಯ ಬಸ್ ನಿಲ್ದಾಣಕ್ಕೆ ಬಂತು. ಅಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಎಸ್‌.ಎಫ್‌.ಐ. ಜಿಲ್ಲಾ ಘಟಕದ ಅಧ್ಯಕ್ಷ ಸುಭಾಸ್‌ ಎಂ. ‘ರಾಜ್ಯ ಸರ್ಕಾರವು ವಿದ್ಯಾರ್ಥಿಗಳ ಬೇಡಿಕೆಗೆ ಸ್ಪಂದನೆ ನೀಡುತ್ತಿಲ್ಲ.  

ಶಾಲಾ -ಕಾಲೇಜುಗಳಲ್ಲಿ ಶುಲ್ಕ ಏರಿಕೆ ಮಾಡಲಾಗಿದೆ. ರಾಜ್ಯದಲ್ಲಿ ಬರಗಾಲವಿದ್ದು, ಬಡವರ ಮಕ್ಕಳು ವಿದ್ಯಾಭ್ಯಾಸದಿಂದ ವಂಚಿತರಾಗುವ ಸಾಧ್ಯತೆ ಇದೆ. ಅಲ್ಲದೇ, ವಿದ್ಯಾಭ್ಯಾಸ ಮೂಟಕುಗೊಳಿಸಿ ಕೂಲಿ ಅರಸಿ ಹೋಗುವಂತಾಗಿದೆ.  ರಾಜ್ಯ ಸರ್ಕಾರವು ವಿದ್ಯಾರ್ಥಿಗಳ ಪ್ರವೇಶ ಶುಲ್ಕ ರಿಯಾಯಿತಿ ಹಾಗೂ ಇತರೆ ಸೌಲಭ್ಯಗಳನ್ನು ನೀಡುವ ಬದಲಾಗಿ, ಪ್ರವೇಶಾತಿ ಶುಲ್ಕಗಳ ಏರಿಕೆ ಮಾಡಲು ಹೊರಟಿದೆ’ ಎಂದು ದೂರಿದರು.

ADVERTISEMENT

‘ರಾಜ್ಯ ಸರ್ಕಾರವು ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ಮಾತ್ರ ಉಚಿತ ಬಸ್ ಪಾಸ್‌ ನೀಡುವುದಾಗಿ ಘೋಷಣೆ ಮಾಡಿದ್ದು, ವಿದ್ಯಾರ್ಥಿಗಳ ಮಧ್ಯೆ ಜಾತಿ ವೈಮನಸ್ಸನ್ನು ಬಿತ್ತುತ್ತಿದೆ’ ಎಂದ ಅವರು, ‘ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್‌ ನೀಡಬೇಕು. ಯಾವುದೇ ಕಾರಣಕ್ಕೂ ವಿದ್ಯಾರ್ಥಿ ಸಮುದಾಯದ ಮಧ್ಯೆ ತಾರತಮ್ಯ ಹುಟ್ಟು ಹಾಕಬಾರದು. ಎಲ್ಲ ವಿದ್ಯಾರ್ಥಿಗಳಿಗೆ ಎಲ್ಲ ಸೌಲಭ್ಯ ದೂರಕುವಂತೆ ಮಾಡಬೇಕು.  ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣದ ವರೆಗೂ ಎಲ್ಲ ವಿದ್ಯಾರ್ಥಿಗಳಿಗ ಉಚಿತ ಬಸ್ ಪಾಸ್ ನೀಡಬೇಕು’ ಎಂದರು.

ಎಸ್‌.ಎಫ್‌.ಐ. ರಾಜ್ಯ ಮುಖಂಡ ಹನುಮಂತ ದುರ್ಗದ ಮಾತನಾಡಿ, ‘ರಾಜ್ಯದಲ್ಲಿ ಬಸ್ ಪಾಸ್ ಪ್ರಯಾಣ ದರವು ಇತರೆ ರಾಜ್ಯಗಳಿಗಿಂತ ದುಬಾರಿಯಾಗಿದೆ.  ಬಡ ವಿದ್ಯಾರ್ಥಿಗಳ ಎಲ್ಲ ಶೈಕ್ಷಣಿಕ ಶುಲ್ಕಗಳನ್ನು ಮನ್ನಾ ಮಾಡಬೇಕು. ಬಸ್ ಪಾಸ್ ಪಡೆಯುವ ದೂರದ ಮಿತಿಯನ್ನು 60 ಕಿ.ಮೀ. ಬದಲಾಗಿ 100 ಕಿ.ಮೀ. ಹೆಚ್ಚಿಸಬೇಕು’ ಎಂದು ಆಗ್ರಹಿಸಿದರು.

ಬಸ್‌ ಸಂಚಾರವನ್ನು ತಡೆದ ಸಂದರ್ಭದಲ್ಲಿ ಎಸ್‌.ಎಫ್‌.ಐ. ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ತಾಲ್ಲೂಕು ಘಟಕದ ಅಧ್ಯಕ್ಷ ಬಸನಗೌಡ ಬಿ.ಎನ್., ಎಸ್‌.ಎಫ್‌.ಐ. ಜಿಲ್ಲಾ ಮುಖಂಡರಾದ ಜ್ಯೋತಿ ದೊಡ್ಮನಿ, ಮಲ್ಲಪ್ಪ ನಾಗರೊಳ್ಳಿ, ಗುಡ್ಡಪ್ಪ ಹರಿಜನ, ಪ್ರದೀಪ ಅಕ್ಕಿವಳ್ಳಿ, ವಿನಾಯಕ ಯಲಗಚ್ಚ, ತಮ್ಮಜ್ಜ ಕಾಯಕದ, ಬಸವರಾಜ ಪಾಟೀಲ, ರಮೇಶ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.