ADVERTISEMENT

ಹಾವೇರಿ ಮಾವು ಇನ್ನು ‘ವರದಾ ಗೋಲ್ಡ್‌’

​ಪ್ರಜಾವಾಣಿ ವಾರ್ತೆ
Published 16 ಮೇ 2017, 6:16 IST
Last Updated 16 ಮೇ 2017, 6:16 IST

ಹಾವೇರಿ: ಜಿಲ್ಲೆಯಲ್ಲಿ ಬೆಳೆಯುವ ಮಾವಿನ ಹಣ್ಣು ಹಾಗೂ ಮಾವಿನ ಉತ್ಪನ್ನಗಳು ಇನ್ನು ಮುಂದೆ ‘ವರದಾ ಗೋಲ್ಡ್‌’ ಹೆಸರಿನಲ್ಲಿ ಮಾರುಕಟ್ಟೆ ಪ್ರವೇಶಿಸಲಿವೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಮಾವಿನ ಬೆಳೆ ಉತ್ತೇಜಿಸುವ ಹಾಗೂ ಮಾವಿನ ಮೌಲ್ಯವರ್ಧಿಸುವ ಸಲುವಾಗಿ ಮೇ 16ರಿಂದ ನಗರದಲ್ಲಿನ ತೋಟಗಾರಿಕಾ ಇಲಾಖೆಯ ಆವರಣದಲ್ಲಿ ‘ಮಾವು ಪ್ರದರ್ಶನ ಮತ್ತು ಮಾರಾಟ ಮೇಳ’ ನಡೆಯಲಿದೆ.

ಮಾವು ಮೇಳದಲ್ಲಿ 20 ಮಳಿಗೆಗಳ ವ್ಯವಸ್ಥೆ ಮಾಡಲಾಗಿದ್ದು, ಧಾರವಾಡ ಹಾಗೂ ಜಿಲ್ಲೆಯ ವಿವಿಧ ತಾಲ್ಲೂಕಿನ ಮಾವು ಬೆಳೆಗಾರರು ಪಾಲ್ಗೊಳ್ಳಲಿದ್ದಾರೆ. ಮೇಳದಲ್ಲಿ ನೈಸರ್ಗಿಕವಾದ (ಕಾರ್ಬನ್‌ ಬಳಸದ) ಮಾವಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.

‘ಮೇಳದಲ್ಲಿ ಆಪೋಸ್‌, ಕಲ್ಮಿ, ಬೇನಾಶಾನ್, ತೋತಾಪುರಿ, ಮಂಟಪ್ಪ, ಮಲಗೋವಾ ಸೇರಿದಂತೆ ಸುಮಾರು 200 ಮಾವಿನ ತಳಿಗಳು ಪ್ರದರ್ಶನ ಕಾಣಲಿವೆ. ಮಾವಿನ ಸಸಿಗಳನ್ನು ನಾಟಿ ಮಾಡುವುದು, ಬೆಳೆಸುವುದು, ಕೊಯ್ಲು ಮಾಡುವುದು ಹಾಗೂ ಕೊಯ್ಲು ನಂತರ ಮಾವಿನ  ಸಂರಕ್ಷಣೆ ಮಾಡಿ ಮಾರುಕಟ್ಟೆ ಸಾಗಿಸುವ ಬಗ್ಗೆ ರೈತರಿಗೆ ಮಾಹಿತಿ ನೀಡಲಾಗುವುದು’ ಎಂದು ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ಎಸ್‌.ಪಿ.ಭೋಗಿ ತಿಳಿಸಿದರು.

ADVERTISEMENT

ರೈತರಲ್ಲಿ ಸಂತಸ:  ‘ಸುಮಾರು 20 ವರ್ಷಗಳಿಂದ 12 ಎಕರೆಯಲ್ಲಿ ಮಾವು ಬೆಳೆಯುತ್ತಿದ್ದೇನೆ. ಕಳೆದ ಎರಡು ವರ್ಷ ಬರದ ಪರಿಣಾಮ ಮಾವಿನ ಫಸಲು ಕಡಿಮೆ ಬಂದು, ಲಾಭ ಕಡಿಮೆಯಾಗಿದೆ. ತೋಟಗಾರಿಕಾ ಇಲಾಖೆಯು ಜಿಲ್ಲೆಯ ಮಾವಿನ ಹಣ್ಣುಗಳನ್ನು ‘ಬ್ರಾಂಡ್’ ಮಾಡುವ ಕಾರಣ ಲಾಭ ಹೆಚ್ಚಳವಾಗುವ ನಿರೀಕ್ಷೆ ಇದೆ’ ಎಂದು ತಾಲ್ಲೂಕಿನ ಬಸಾಪುರ ಗ್ರಾಮದ ಮಾವು ಬೆಳೆಗಾರ ಮಲ್ಲೇಶ ನಾಗಪ್ಪ ಮುದ್ದಿ ತಿಳಿಸಿದರು.

ಉದ್ಘಾಟನೆ ಇಂದು: ತೋಟಗಾರಿಕೆ ಇಲಾಖೆ ಹಾಗೂ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ಆಶ್ರಯದಲ್ಲಿ ನಡೆಯುವ ‘ಮಾವು ಪ್ರದರ್ಶನ ಮತ್ತು ಮಾರಾಟ ಮೇಳ’ವನ ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಮಂಗಳವಾರ ಉದ್ಘಾಟಿಸುವರು. ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಕೊಟ್ರೇಶಪ್ಪ ಬಸೇಗಣ್ಣಿ , ಜಿಲ್ಲಾಧಿಕಾರಿ ಡಾ.ವೆಂಕಟೇಶ.ಎಂ.ವಿ ಮತ್ತಿತರರು ಪಾಲ್ಗೊಳ್ಳುವರು.

*

‘ವರದಾ ಗೋಲ್ಡ್’ ಬ್ರಾಂಡ್‌ ಮೂಲಕ ಹಾವೇರಿ ಜಿಲ್ಲೆಯ ಮಾವಿನ ಹಣ್ಣುಗಳು ಮಾರುಕಟ್ಟೆ ಪ್ರವೇಶಿಸುವ ಕಾರಣ ಲಾಭಾಂಶ ಹೆಚ್ಚಾಗುವ ನಿರೀಕ್ಷೆ ಇದೆ
ನಾಗಪ್ಪ ಮುದ್ದಿ
ಮಾವು ಬೆಳೆಗಾರ, ಬಸಾಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.