ADVERTISEMENT

ಹಿಂಗಾರಿ ಬಿತ್ತನೆಯಲ್ಲಿ ನಿರತ ರೈತ ಸಮೂಹ

ಎಂ.ವಿ.ಗಡಾದ
Published 26 ಅಕ್ಟೋಬರ್ 2012, 6:20 IST
Last Updated 26 ಅಕ್ಟೋಬರ್ 2012, 6:20 IST

ಶಿಗ್ಗಾವಿ: ಮುಂಗಾರು ಮಳೆ ಸಂಪೂರ್ಣವಾಗಿ ಬಾರದೆ ರೈತರು ಹಿಂಗಾರು ಮಳೆಯಾದರೂ ಬರಬಹುದು ಎಂಬ ನಿರೀಕ್ಷೆಯಲ್ಲಿ ತಾಲ್ಲೂಕಿನ್ಯಾದಂತ ರೈತ ಸಮೂಹ ಹಿಂಗಾರು ಬಿತ್ತನೆ ಆರಂಭಿಸಿದ್ದಾರೆ. ಅರ್ಧ ಹಸಿಯಲ್ಲಿ ಬಿತ್ತಿದ ಬೀಜಗಳು ಬೆಳೆಯಬಹುದೆ ಎಂಬ ಆತಂಕದ ಛಾಯೆ ರೈತನ ಮುಖದಲ್ಲಿ ಕಾಣುತ್ತಿದೆ.

ಅತಿವೃಷ್ಟಿ-ಅನಾವೃಷ್ಟಿಯಿಂದ ಪ್ರತಿವರ್ಷ ರೈತರು ಒಂದಿಲ್ಲ ಒಂದು ಸಮಸ್ಯೆಗೆ ಸಿಲುಕಿ ಆರ್ಥಿಕವಾಗಿ ಕುಗ್ಗುವಂತಾಗಿದೆ. ಪ್ರಸಕ್ತ ವರ್ಷ ಕೆಲವು ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿದ್ದರೂ ಸರಿಯಾಗಿ ಬಳಸುವಲ್ಲಿ ಗ್ರಾಮ ಪಂಚಾಯಿತಿಗಳು ವಿಫಲವಾಗಿವೆ, ಹೊಲ - ಗ್ದ್ದದೆಗಳಲ್ಲಿ ಬೆಳೆ ನೀರಿದ್ದರೂ ಒಣಗಿ ಹೋಗುತ್ತಿದೆ.

ತಕ್ಷಣ ನಿರಂತರ ವಿದ್ಯುತ್ ಪೂರೈಕೆ ಮಾಡುವಂತೆ ಸರ್ಕಾರವನ್ನು ಒತ್ತಾಯಿಸಿ ಬಂಕಾಪುರ ವ್ಯಾಪ್ತಿ ಸುಮಾರು 30ಕ್ಕೂ ಹೆಚ್ಚು ಗ್ರಾಮಗಳ ರೈತರು ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ್ದರು. 15- 20 ದಿನಗಳ ಹಿಂದೆ ತಾಲ್ಲೂಕಿನ ಹುಲಗೂರ, ಶಿಶುವಿನಹಾಳ ಗ್ರಾಮದ ಸುತ್ತಲೂ ಬಿದ್ದ ಆಲಿಕಲ್ಲು ಮಳೆಯಿಂದ ಬೆಳೆದ ಹತ್ತಿ ಬೆಳೆ ಸಂಪೂರ್ಣ ಹಾಳಾಗಿ ರೈತರಿಗೆ ಸಾಕಷ್ಟು ಹಾನಿಯಾಗಿದೆ.

ತಾಲ್ಲೂಕಿನಲ್ಲಿ ಒಟ್ಟು 37.515 ಹೆಕ್ಟೇರ್ ಭೂಪ್ರದೇಶ ಸಾಗುವಳಿ ಕ್ಷೇತ್ರ ಹೊಂದಿದೆ. ಅದರಲ್ಲಿ 2.5ಸಾವಿರ ಹೆಕ್ಟೇರ್ ಭೂಪ್ರದೇಶ ನೀರಾವರಿ ಕ್ಷೇತ್ರ ಹೊಂದಿದ್ದು, ಉಳಿದ 35.015 ಹೆಕ್ಟೇರ್ ಭೂಪ್ರದೇಶ ಒಣ ಬೇಸಾಯ(ಮಳೆಯಾಶ್ರಿತ) ಅವಲಂಬಿಸಿದೆ. ಹೀಗಾಗಿ ಮಳೆಯನ್ನೇ ನಂಬಿ ಬದುಕುವ ಹಲವು ರೈತರು ಬಿತ್ತನೆ ಮಾಡಬೇಕೊ ಅಥವಾ ಬೇಡವೊ ಎಂದು  ಚಿಂತಾಕ್ರಾಂತರಾಗಿದ್ದಾರೆ.

ಮುಂಗಾರಿ ಬಿತ್ತನೆ ಸಂದರ್ಭದಲ್ಲಿ ಹತ್ತಿ, ಗೋವಿನಜೋಳ, ಸೋಯಾಬೀನ್, ಶೇಂಗಾ ಸೇರಿದಂತೆ ಇತರ ಬೀಜ- ಗೊಬ್ಬರಕ್ಕಾಗಿ ಮಾಡಿರುವ ಸಾಲ ತೀರಿಲ್ಲ. ಮತ್ತೆ ಹಿಂಗಾರು ಬಿತ್ತನೆ ಬೀಜ -ಗೊಬ್ಬರ ಖರೀದಿಗೆ ಸಾಲ ಸೂಲ ಮಾಡಿ ಬಿತ್ತನೆ ಮಾಡಬೇಕಿದೆ. ಈ ಬಾರಿಯಾದರೂ ಮಳೆ ಬಂದು ಉತ್ತಮ ಬೆಳೆ ಬರಬಹುದು. ಹಿಂದೆ ಮಾಡಿದ ಸಾಲ ತೀರಿಸಬಹುದು ಎಂದು ದೇವರ ಮೇಲೆ ಭಾರ ಹಾಕಿ ಬಿತ್ತುವ ಕಾರ್ಯ ಕೈಗೊಂಡಿದ್ದೇವೆ ಎಂದು ತಾಲ್ಲೂಕಿನ ಹುಲಗೂರ ಗ್ರಾಮದ ರೈತ ಕಲ್ಲವೀರಪ್ಪ ಗೌಡಪ್ಪನವರ ಆತಂಕ ವ್ಯಕ್ತಪಡಿಸಿದರು.

ಈಗಾಗಲೆ ತಾಲ್ಲೂಕು ಕೃಷಿ ಇಲಾಖೆ ಹಾಗೂ ರೈತ ಸಂಪರ್ಕ ಕೇಂದ್ರಗಳಲ್ಲಿ ಹಿಂಗಾರಿ ಬಿತ್ತನೆ ಬೀಜಗಳಾದ ಕಡಲೆ, ಗೋದಿ, ಬಿಳಿಜೋಳ, ಸೂರ್ಯಕಾಂತಿ, ಗೋವಿನಜೋಳ ಸೇರಿದಂತೆ ಇತರ ಬೀಜ ಸಂಗ್ರಹಿಸಲಾಗಿದೆ. ತಾಲ್ಲೂಕಿನಲ್ಲಿ ಶೇ. 50ರಷ್ಟು ಹಿಂಗಾರಿ ಬಿತ್ತನೆ ಮಾಡಲಾಗಿದೆ ಎಂದು ತಾಲ್ಲೂಕು ಕೃಷಿ ಸಹಾಯಕ ನಿರ್ದೇಶಕ ಶಿವಕುಮಾರ ಮಲ್ಲಾಡದ ಹೇಳಿದರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.