ADVERTISEMENT

ಹಿಂದುಳಿದವರ ಏಳಿಗೆಗೆ ಶಿಕ್ಷಣವೇ ಅಸ್ತ್ರ

ಸಂವಿಧಾನ ಶಿಲ್ಪಿ ಡಾ. ಬಿ.ಆರ್‌. ಅಂಬೇಡ್ಕರ್‌ ಅವರ 61ನೇ ಮಹಾಪರಿನಿರ್ವಾಣ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2017, 10:47 IST
Last Updated 7 ಡಿಸೆಂಬರ್ 2017, 10:47 IST
ಶಿಗ್ಗಾವಿ ಪಟ್ಟಣದಲ್ಲಿ ಬುಧವಾರ ಸಂವಿಧಾನ ಶಿಲ್ಪಿ ಡಾ. ಬಿ.ಆರ್‌. ಅಂಬೇಡ್ಕರ್‌ ಅವರ ಮಹಾಪರಿನಿರ್ವಾಣ ದಿನಾಚರಣೆ ನಡೆಯಿತು
ಶಿಗ್ಗಾವಿ ಪಟ್ಟಣದಲ್ಲಿ ಬುಧವಾರ ಸಂವಿಧಾನ ಶಿಲ್ಪಿ ಡಾ. ಬಿ.ಆರ್‌. ಅಂಬೇಡ್ಕರ್‌ ಅವರ ಮಹಾಪರಿನಿರ್ವಾಣ ದಿನಾಚರಣೆ ನಡೆಯಿತು   

ಶಿಗ್ಗಾವಿ: ಬಡ ಕೂಲಿಕಾರರು, ದೀನ ದಲಿತರ ಹಾಗೂ ಹಿಂದುಳಿದ ಸಮುದಾಯಗಳ ಏಳಿಗೆಗೆ ಶಿಕ್ಷಣವೇ ಅಸ್ತ್ರ. ಪಾಲಕರು ಜಾಗೃತರಾಗುವ ಮೂಲಕ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಮುಂದಾಗಬೇಕು ಎಂದು ಮಾನವ ಹಕ್ಕುಗಳ ಹಾಗೂ ಭ್ರಷ್ಟಾಚಾರ ನಿರ್ಮೂಲನಾ ಸಂಘಟನೆ ತಾಲ್ಲೂಕು ಘಟಕದ ಅಧ್ಯಕ್ಷ ಅಶೋಕ ಕಾಳೆ ಹೇಳಿದರು.

ಪಟ್ಟಣದಲ್ಲಿ ಬುಧವಾರ ದಲಿತ ಸಂಘರ್ಷ ಸಮಿತಿ, ಜೀವಿಕ ಜೀತ ವಿಮುಕ್ತಿ ತಾಲ್ಲೂಕು ಘಟಕ, ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಘಟಕ ಹಾಗೂ ಮಾನವ ಹಕ್ಕುಗಳ ಹಾಗೂ ಭ್ರಷ್ಠಾಚಾರ ನಿರ್ಮೂಲನಾ ಸಂಘಟನೆ ಸಹಯೋಗದಲ್ಲಿ ನಡೆದ ಸಂವಿಧಾನ ಶಿಲ್ಪಿ ಡಾ. ಬಿ.ಆರ್‌. ಅಂಬೇಡ್ಕರ್‌ ಅವರ 61ನೇ ಮಹಾ ಪರಿನಿರ್ವಾಣ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ಹಿಂದುಳಿದ ಸಮುದಾಯಗಳನ್ನು ಸಾಮಾಜಿಕವಾಗಿ, ರಾಜಕೀಯವಾಗಿ, ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ಮೂಲೆಗುಂಪು ಮಾಡಲಾಗುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.

ADVERTISEMENT

ಶೋಷಣೆ ರಹಿತ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರು ಸಂಕಲ್ಪ ಮಾಡಬೇಕಾಗಿದೆ. ಅದು ಶಿಕ್ಷಣದಿಂದ ಮಾತ್ರ ಸಾಧ್ಯವಿದೆ. ಉಡುಪಿಯ ಪೇಜಾವರ ಶ್ರೀ, ಪ್ರತಾಪ್ ಸಿಂಹ, ಗೋ. ಮಧುಸೂಧನ ನೀಡಿದ ಹೇಳಿಕೆಗಳು ಅಂಬೇಡ್ಕರ್, ಕಿತ್ತೂರ ಚನ್ನಮ್ಮ ಹಾಗೂ ಓಬವ್ವ ಅವರಿಗೆ ಮಾಡಿದ ಅವಮಾನದಂತಿವೆ. ಅವರ ವಿರುದ್ಧ ಕಠಿಣ ಕಾನೂನು ಕಠಿಣ
ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ವಕೀಲ ಬಸವರಾಜ ಜಕ್ಕಿನಕಟ್ಟಿ, ಅಂಬೇಡ್ಕರ್ ಅವರು ನೀಡಿರುವ ಸಂವಿಧಾನ ಮನುಕುಲದ
ಸರ್ವಾಂಗೀಣ ಏಳಿಗೆಯನ್ನು ಒಳಗೊಂಡಿದೆ. ಅವರ ಆಸೆಯಗಳಂತೆ ನಡೆದಾಗ ಯಶಸ್ವಿ ಬದುಕು ಸಾಗಿಸಲು ಸಾಧ್ಯವಿದೆ. ಕಾನೂನಿನ ವಿಚಾರಗಳನ್ನು ತಿಳಿಯುವ ಮೂಲಕ ಸಮಾನತೆ ನಿಟ್ಟಿನಲ್ಲಿ ನಡೆದಾಗ ಬದುಕು ಅರ್ಥಪೂರ್ಣವಾಗಲು ಸಾಧ್ಯ ಎಂದರು.

ಮುಖಂಡರಾದ ಸುರೇಶ ಹರಿಜನ, ಜೀಲಾನಿ ಜಂಗ್ಲಿ, ಯಲ್ಲಪ್ಪ ತೊಂಡೂರ, ನಾಜೀರ್‌ಸಾಬ ಸವಣೂರ, ಮಹ್ಮದಹನಿಫ್ ಗುಲ್ಮಿ, ಉಮೇಶ ಬೆನಕನಹಳ್ಳಿ, ಮಹ್ಮದ ದಿವಾನವರ, ಗಣೇಶ ಚಲವಾದಿ, ಬಸವರಾಜ ಹಂಚಿನಮನಿ ಹಾಗೂ ಸುಭಾಸ ಇಂದ್ರಕರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.