ADVERTISEMENT

‘ಹೆಬ್ಬೆಟ್ಟು ನೀಡಲು ಧಾರವಾಡಕ್ಕೆ ಹೋಗ್ಬೇಕಾ?’

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2017, 6:08 IST
Last Updated 19 ನವೆಂಬರ್ 2017, 6:08 IST
ಹಾವೇರಿ ಜಿಲ್ಲಾ ಪಂಚಾಯ್ತಿ ಸಭಾಭವನದಲ್ಲಿ ಶನಿವಾರ ನಡೆದ ದಿಶಾ ತ್ರೈಮಾಸಿಕ ಸಭೆಯಲ್ಲಿ ಸಂಸದ ಶಿವಕುಮಾರ ಉದಾಸಿ ಮಾತನಾಡಿದರು. (ಎಡದಿಂದ) ಉಪ ಕಾರ್ಯದರ್ಶಿ ಜಿ.ಗೋವಿಂದಸ್ವಾಮಿ, ಹೆಚ್ಚುವರಿ ಜಿಲ್ಲಾಧಿಕಾರಿ ಶಾಂತಾ ಹುಲ್ಮನಿ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಬಿ.ಅಂಜನಪ್ಪ, ಜಿಲ್ಲಾಧಿಕಾರಿ ಡಾ.ವೆಂಕಟೇಶ ಎಂ.ವಿ., ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಕೊಟ್ರೇಶಪ್ಪ ಬಸೇಗಣ್ಣಿ ಇದ್ದಾರೆ
ಹಾವೇರಿ ಜಿಲ್ಲಾ ಪಂಚಾಯ್ತಿ ಸಭಾಭವನದಲ್ಲಿ ಶನಿವಾರ ನಡೆದ ದಿಶಾ ತ್ರೈಮಾಸಿಕ ಸಭೆಯಲ್ಲಿ ಸಂಸದ ಶಿವಕುಮಾರ ಉದಾಸಿ ಮಾತನಾಡಿದರು. (ಎಡದಿಂದ) ಉಪ ಕಾರ್ಯದರ್ಶಿ ಜಿ.ಗೋವಿಂದಸ್ವಾಮಿ, ಹೆಚ್ಚುವರಿ ಜಿಲ್ಲಾಧಿಕಾರಿ ಶಾಂತಾ ಹುಲ್ಮನಿ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಬಿ.ಅಂಜನಪ್ಪ, ಜಿಲ್ಲಾಧಿಕಾರಿ ಡಾ.ವೆಂಕಟೇಶ ಎಂ.ವಿ., ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಕೊಟ್ರೇಶಪ್ಪ ಬಸೇಗಣ್ಣಿ ಇದ್ದಾರೆ   

ಹಾವೇರಿ: ‘80–90 ದಾಟಿದ ವೃದ್ಧರು ವೃದ್ಧಾಪ್ಯ ವೇತನ ಪಡೆಯಲು ಅವರು ಬದುಕಿದ್ದಾರೆ ಎಂದು ತಿಳಿಸಲು, ಧಾರವಾಡಕ್ಕೆ ಹೋಗಿ ಬೆರಳಚ್ಚು ನೀಡುವ ಅನಿವಾರ್ಯತೆ ಇದೆಯೇ?’ ಇದು ಸಂಸದ ಶಿವಕುಮಾರ ಉದಾಸಿ ಅವರು ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಪರಿ.

ಜಿಲ್ಲಾ ಪಂಚಾಯ್ತಿ ಸಭಾಭವನದಲ್ಲಿ ಶನಿವಾರ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ತ್ರೈಮಾಸಿಕ ಸಭೆಯಲ್ಲಿ ಅವರು ಮಾತನಾಡಿದರು. ‘ಹಾನಗಲ್‌ ತಾಲ್ಲೂಕು ಅಕ್ಕಿಆಲೂರಿನ ಗಂಗಣ್ಣ ಶೇಷಗಿರಿ ಸೇರಿದಂತೆ ಜಿಲ್ಲೆಯ ಎಷ್ಟೋ ವೃದ್ಧರು ಇಂದಿರಾಗಾಂಧಿ ವೃದ್ಧಾಪ್ಯ ಯೋಜನೆ ಅಡಿಯಲ್ಲಿ ವೇತನ ಪಡೆಯಲು, ಧಾರವಾಡಕ್ಕೆ ಹೋಗಿ ಬೆರಳಚ್ಚು ನೀಡಿ ಬಂದಿದ್ದಾರೆ. ಆದರೆ, ಈವರೆಗೂ ವೇತನ ಬಂದಿಲ್ಲ. ಅಧಿಕಾರಿಗಳು ಏನು ಮಾಡುತ್ತಿದ್ದಾರೆ’ ಎಂದು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಾಮಾಜಿಕ ಭದ್ರತೆ ಪಿಂಚಣಿ ಯೋಜನೆ ಅಧಿಕಾರಿ ವಿ.ಪಿ.ಕೊಟ್ರಳ್ಳಿ, ‘ಇಂದಿರಾಗಾಂಧಿ ವೃದ್ಧಾಪ್ಯ ಯೋಜನೆ ಸೇರಿದಂತೆ ಎಲ್ಲ ಯೋಜನೆಗಳ ಮೂಲಕ ಒಟ್ಟು 2,20,530 ಜನರಿಗೆ ಪಿಂಚಣಿ ನೀಡಲಾಗುತ್ತಿದೆ. ಆದರೆ, ಒಟ್ಟು 700 ಜನರಿಗೆ ಖಜಾನೆ–2ರಿಂದ ವೇತನ ಬರಬೇಕಾಗಿದ್ದು ಸೆಪ್ಟೆಂಬರ್‌ನಿಂದ ಈ ತನಕ ಬಂದಿಲ್ಲ’ ಎಂದರು.

ADVERTISEMENT

‘ಕೆಲವು ಬ್ಯಾಂಕ್‌ಗಲ್ಲಿ ವೃದ್ಧಾಪ್ಯ ವೇತನ ಪಡೆಯುವವರು ಜೀವಂತವಾಗಿ ಇದ್ದಾರೆಯೇ ಎಂದು ಸ್ಪಷ್ಟಪಡಿಸಿಕೊಳ್ಳುವ ಉದ್ದೇಶದಿಂದ, ಬೆರಳಚ್ಚು ಪಡೆಯಲು ಅವರನ್ನು ಧಾರವಾಡಕ್ಕೆ ಕರೆಸಿಕೊಳ್ಳುತ್ತಿದ್ದಾರೆ. ಆದರೆ, ಕೆಲವು ವೃದ್ಧರ ಬೆರಳಚ್ಚು ಅಳಿಸಿ ಹೋಗಿದೆ. ಹೀಗಾಗಿ ವೇತನ ಬರುವಲ್ಲಿ ತೊಂದರೆಯಾಗಿದೆ’ ಎಂದು ವಿವರಿಸಿದರು.

ಈ ಚರ್ಚೆಯ ಮಧ್ಯ ಪ್ರವೇಶಿಸಿದ ಜಿಲ್ಲಾಧಿಕಾರಿ ಡಾ.ವೆಂಕಟೇಶ ಎಂ.ವಿ., ‘ವೃದ್ಧರ ಬೆರಳಚ್ಚು ಅಳಿಸಿದ್ದರೆ ಅವರ ಕಣ್ಣಿನ ದೃಷ್ಟಿಯನ್ನು ಸಂಗ್ರಹಿಸಿ ವೇತನ ನೀಡಬೇಕು ಎಂದು ಈ ಮೊದಲೇ ತಿಳಿಸಲಾಗಿದೆ’ ಎಂದರು.

‘80–90 ದಾಟಿದ ವೃದ್ಧರು ಬೆರಳಚ್ಚು ನೀಡಲು ಹಾಗೂ ಅವರು ಜೀವಂತವಾಗಿ ಇದ್ದಾರೆ ಎಂದು ಹೇಳಲು ಧಾರವಾಡಕ್ಕೆ ಹೋಗುವ ಜರೂರತ್ತು ಏನಿದೆ. ಬೆರಳಚ್ಚು ಅಥವಾ ಕಣ್ಣಿನ ದೃಷ್ಟಿ ಸಂಗ್ರಹವನ್ನು ಸ್ಥಳೀಯ ಬ್ಯಾಂಕ್‌ಗಳಲ್ಲಿಯೇ ಮಾಡಬಹುದಲ್ಲ’ ಎಂದು ಸಂಸದ ಉದಾಸಿ ಕೇಳಿದರು. ‘ಈ ಬಗ್ಗೆ ಬ್ಯಾಂಕ್‌ ಅಧಿಕಾರಿಗಳಿಗೆ ಸೂಚನೆ ನೀಡಿ’ ಎಂದೂ ಅವರು ಜಿಲ್ಲಾಧಿಕಾರಿಗೆ ಸೂಚಿಸಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಮಮತಾ ನಾಯಕ್‌ ಮಾತನಾಡಿ, ‘ಜಿಲ್ಲೆಯಲ್ಲಿ ಒಟ್ಟು 1,304 ಶಾಲೆಯ ಕೊಠಡಿಗಳು ಸಂಪೂರ್ಣ ಹಾಳಾಗಿವೆ. ಅವುಗಳನ್ನು ಪುನರ್‌ ನಿರ್ಮಾಣ ಮಾಡುವ ಅಗತ್ಯವಿದೆ’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಯು.ಬಿ.ಬಣಕಾರ, ‘ನರೇಗಾ ಯೋಜನೆ ಅಡಿ ಅಂಗನವಾಡಿ ಕಟ್ಟಡಕ್ಕೆ ಹಣ ನೀಡಿದಂತೆ, ಶಾಲಾ ಕೊಠಡಿಗಳಿಗೂ ಹಣ ನೀಡಬೇಕು’ ಎಂದು ಮನವಿ ಮಾಡಿದರು. ‘ಈ ಬಗ್ಗೆ ಸೂಕ್ತ ಪ್ರಸ್ತಾವ ತಯಾರಿಸಿ ಸಂಬಂಧಿಸಿದ ಅಧಿಕಾರಿಗಳಿಗೆ ಕಳುಹಿಸಿ’ ಎಂದು ಉದಾಸಿ ಹೇಳಿದರು.

ರಾಷ್ಟ್ರೀಯ ಆರೋಗ್ಯ ಅಭಿಯಾನದ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಮಹೇಶ ಬಡ್ಡಿ ಸಭೆಗೆ ಸೂಕ್ತ ದಾಖಲೆಗಳನ್ನು ತಂದಿರಲಿಲ್ಲ. ಅದಕ್ಕೆ ಪ್ರತಿಕ್ರಿಯಿಸಿದ ಸಂಸದರು, ‘ನಿಮ್ಮ ಸಭೆಯನ್ನು ಪ್ರತ್ಯೇಕವಾಗಿ ಮಾಡುತ್ತೇನೆ’ ಎಂದರು.

ಚರ್ಚೆಯಲ್ಲಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಕೊಟ್ರೇಶಪ್ಪ ಬಸೇಗಣ್ಣಿ, ಹೆಚ್ಚುವರಿ ಜಿಲ್ಲಾಧಿಕಾರಿ ಶಾಂತಾ ಹುಲ್ಮನಿ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಬಿ.ಅಂಜನಪ್ಪ, ಉಪ ಕಾರ್ಯದರ್ಶಿ ಜಿ.ಗೋವಿಂದಸ್ವಾಮಿ ಭಾಗಿಯಾಗಿದ್ದರು.

* * 

ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನೇಕಾರರಿಗೆ ₹ 10 ಲಕ್ಷದ ವರೆಗೆ ಸಾಲ ನೀಡುತ್ತಿದ್ದು, ಈ ಬಗ್ಗೆ ಜನರಿಗೆ ಮಾಹಿತಿ ನೀಡಬೇಕು
ಶಿವಕುಮಾರ ಉದಾಸಿ
ಸಂಸದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.