ADVERTISEMENT

‘ಕಾರ್ಮಿಕ ಹೋರಾಟದ ವರ್ಷ’

ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 6 ಜುಲೈ 2015, 8:52 IST
Last Updated 6 ಜುಲೈ 2015, 8:52 IST

ಹಾವೇರಿ: ‘ಈ ವರ್ಷ ಹೋರಾಟದ ವರ್ಷ. ಅಂಗನವಾಡಿ ಕಾರ್ಯಕರ್ತೆಯರ, ಬ್ಯಾಂಕ್‌ ನೌಕರರ, ಸಾರಿಗೆ ನೌಕರರ ಪ್ರತಿಭಟನೆಗಳು ಸೇರಿದಂತೆ ಸೆಪ್ಟೆಂಬರ್‌ 2 ರಂದು ದೇಶದಾದ್ಯಂತ ಬೃಹತ್‌ ಹೋರಾಟವೇ ನಡೆಯಲಿದೆ’ ಎಂದು ಬೆಂಗಳೂರಿನ ಹೈಕೋರ್ಟ್‌ ವಕೀಲ ಮುರಳೀಧರ ಚಿಕ್ಕಮಗಳೂರ ಹೇಳಿದರು. 

ನಗರದ ಜಿಲ್ಲಾ ಗುರುಭವನದಲ್ಲಿ ಭಾನುವಾರ ‘ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್‌ 5ನೇ ರಾಜ್ಯ ಸಮ್ಮೇಳನ’ದ ಪ್ರತಿನಿಧಿಗಳ ಸಮಾವೇಶದಲ್ಲಿ ಮಾತನಾಡಿದರು. ‘ಸೆ. 2ರ ಕಾರ್ಮಿಕರ ಬೃಹತ್‌ ಹೋರಾಟವು ನಮ್ಮ ದೇಶವನ್ನು ಖಾಸಗೀಕರಣ ಮಾಡಲು ಹೊರಟಿರುವ ಕೇಂದ್ರ ಸರ್ಕಾರಕ್ಕೆ ಪಾಠವಾಗಬೇಕು.

ಅಂಗನವಾಡಿ ಕಾರ್ಯಕರ್ತೆಯರಿಗೆ ಕಾಯಂ ನೌಕರಿ, ವೇತನ ಮತ್ತಿತರ ಸೌಲಭ್ಯ ನೀಡದಿರುವ ಸರ್ಕಾರಕ್ಕೆ ಕಾರ್ಮಿಕರ ಒಗ್ಗಟ್ಟು ತಿಳಿಯಬೇಕಾಗಿದೆ’ ಎಂದರು. ‘ನರೇಂದ್ರ ಮೋದಿ ಅವರು ಪ್ರಧಾನಿಯಾದ ಕೂಡಲೇ ಸಂಸತ್ತಿನ ‘ಮಹಾ ದ್ವಾರ’ಕ್ಕೆ ಬಗ್ಗಿ ನಮಸ್ಕಾರ ಮಾಡಿದರು. ಆಗಲೇ ಅವರ ಮೂಗಿಗೆ ಮಣ್ಣಿನ ವಾಸನೆ ಬಡಿದಿತ್ತು. ಭೂ–ಸ್ವಾಧೀನ ಕಾಯ್ದೆ ಜಾರಿಗೆ ತಂದರು’ ಎಂದರು.

‘ಪ್ರಧಾನಿ ಮೋದಿ ಭಾಷಣ ಮಾಡುವಾಗ ತಮ್ಮ ಎರಡು ಕೈ ಮೇಲಕ್ಕೆ ಎತ್ತುತ್ತಾರೆ. ಆ ಮೂಲಕ, ಬನ್ನಿ ವಿದೇಶಿಗರೇ ಭಾರತ ಕುರಿಮರಿಯಂತೆ. ನನ್ನ ಕೈಜೋಡಿಸಿ, ನೀವೂ ಆಳ್ವಿಕೆ ಮಾಡಿ ಎಂದು ಕರೆಯುತ್ತಾರೆ. ಅಲ್ಲದೇ, ವಿಶ್ವ ಯೋಗ ದಿನ ಆಚರಣೆ ಹೆಸರಲ್ಲಿ ಕೋಟಿ ಕೋಟಿ ಲೂಟಿ ಮಾಡಿದರು’ ಎಂದು ವಾಗ್ದಾಳಿ ನಡೆಸಿದರು. 

‘ಭಾರತೀಯರು ಯಾವಾಗ ಮೋದಿ ಮೇಲೆ ದಾಳಿ ಮಾಡುತ್ತಾರೋ ಗೊತ್ತಿಲ್ಲ. ಅದಕ್ಕಾಗಿ ನರೇಂದ್ರ ಮೋದಿ ಈಗಲೇ ಸುರಕ್ಷಿತ ತಾಣ ಹುಡುಕಿಕೊಳ್ಳುವ ನಿಟ್ಟಿನಲ್ಲಿ  ವಿದೇಶಿ ಪ್ರವಾಸ ಮಾಡು ತ್ತಿದ್ದಾರೆ’ ಎಂದು ಲೇವಡಿ ಮಾಡಿದರು. ಎ.ಐ.ಟಿ.ಯು.ಸಿ ಪ್ರಧಾನ ಕಾರ್ಯ ದರ್ಶಿ ಎಚ್‌. ವಿ ಅನಂತಸುಬ್ಬರಾವ್‌ ಮಾತನಾಡಿ, ‘ದೇಶದಲ್ಲಿ 46 ಕೋಟಿ ಕಾರ್ಮಿಕರಿದ್ದು, ಈ ಪೈಕಿ 42 ಕೋಟಿ ಕಾರ್ಮಿಕರು ತಮ್ಮ ಹಕ್ಕು ಪಡೆಯಲು ಸಂಘಟಿತರಾಗಿ ಹೋರಾಟ ಮಾಡುತ್ತಿ ದ್ದರೆ, 4 ಕೋಟಿ ಕಾರ್ಮಿಕರು ಅಸಂಘಟಿ ತರಾಗಿದ್ದು, ಕಾನೂನು ಹಾದಿಗಳ ಮೂಲಕ ತಮ್ಮ ಹಕ್ಕಗಳನ್ನು ಪಡೆಯಲು ಪ್ರಯತ್ನಿಸುತ್ತಿದ್ದಾರೆ’ ಎಂದರು. 

ಕ.ರಾ. ಅಂ.ಕಾ.ಸ. ಫೆಡರೇಷನ್‌ ಅಧ್ಯಕ್ಷ ಎಚ್‌. ಕೆ ರಾಮಚಂದ್ರಪ್ಪ, ಉಪಾಧ್ಯಕ್ಷ ಹೊನ್ನಪ್ಪ ಮರೆಮ್ಮನವರ, ಪ್ರಧಾನ ಕಾರ್ಯದರ್ಶಿ ಎಸ್‌.ಎಲ್. ರಾಧಾಸುಂದರೇಶ್, ಕಾರ್ಯದರ್ಶಿ ಗಳಾದ ಎನ್‌.ಶಿವಣ್ಣ, ಎಂ.ಬಿ ಶಾರದಮ್ಮ, ಖಜಾಂಚಿ ಕೆ. ನೀಲಾಂಬಿಕೆ, ಎಂ. ಜಯಮ್ಮ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.