ADVERTISEMENT

‘ಭ್ರೂಣ ಹತ್ಯೆಯಿಂದ ಹೆಣ್ಣಿಗಾಗಿ ಪರದಾಟ’

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2015, 10:05 IST
Last Updated 2 ಆಗಸ್ಟ್ 2015, 10:05 IST

ಹಾವೇರಿ: ‘ಹೆಣ್ಣು ಭ್ರೂಣಹತ್ಯೆಗೆ ಸಮಾಜ ಕಡಿವಾಣ ಹಾಕದಿದ್ದಲ್ಲಿ, ಮುಂದೊಂದು ದಿನ ಹೆಣ್ಣಿಗಾಗಿ ಗಂಡು ಪರದಾಡುವ ಸ್ಥಿತಿ ನಿರ್ಮಾಣವಾಗಬಹುದು’ ಎಂದು ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಕೆ.ಬಿ ಅಸೋದೆ ಹೇಳಿದರು.

ನಗರದ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಭಾಭವನದಲ್ಲಿ ಶುಕ್ರವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಶ್ರಯದಲ್ಲಿ ನಡೆದ ‘ಹೆಣ್ಣು ಮಗುವನ್ನು ರಕ್ಷಿಸುವ ಕುರಿತ ಕಾನೂನು ಅರಿವು’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಆದರೆ, ಹಲವೆಡೆ ಮಹಿಳೆಯರನ್ನು ಕೀಳಾಗಿ ಕಂಡು ವೇಶ್ಯಾವಾಟಿಕೆ, ಭಿಕ್ಷಾಟನೆ ಹಾಗೂ ಅಂಗಾಗ ಮಾರಾಟಕ್ಕೆ ಬಳಸವ ಮನಸ್ಥಿತಿ ಇನ್ನೂ ಜೀವಂತ ಇದೆ’ ಎಂದು ವಿಷಾದಿಸಿದರು. ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಸ್ತ್ರೀರೋಗತಜ್ಞೆ ಡಾ. ನೇತ್ರಾವತಿ ಮಾತನಾಡಿ, ‘ನಮ್ಮ ದೇಶದ ರಾಜಧಾನಿ ದೆಹಲಿಯಲ್ಲಿ ಸಾವಿರ ಗಂಡಸರಿಗೆ ಹೆಣ್ಣಿನ ಅನುಪಾತವು 806 ಇದೆ. ಹರಿಯಾಣ ರಾಜ್ಯದಲ್ಲಿ  775 ಹೆಣ್ಣು, ಉತ್ತರ ಪ್ರದೇಶದಲ್ಲಿ  800 ಹೆಣ್ಣು, ಕರ್ನಾಟಕ ರಾಜ್ಯದಲ್ಲಿ  960 ಹೆಣ್ಣು ಇದೆ. ಆದರೆ, ಬೆಂಗಳೂರು ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ ಅನುಪಾತ ಕಡಿಮೆ ಇದ್ದರೆ. ದಕ್ಷಿಣ ಕನ್ನಡ,ಉಡುಪಿ, ಕೂಡಗು, ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಯಲ್ಲಿ ಮಾತ್ರ ಸಾವಿರ ಗಂಡಸರಿಗೆ ಸಾವಿರ ಹೆಣ್ಣು ಮಕ್ಕಳ ಅನುಪಾತವಿದೆ’ ಎಂದರು.

ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಪಲ್ಲೇದ ರವೀಂದ್ರ ಜೆ, ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶ ರವಿ ಡಿ.ಅರಿ, ಸಿವಿಲ್ ನ್ಯಾಯಾಧೀಶರಾದ ಸುಜಾತಾ ಎಂ.ಸಾಂಬ್ರಾಣಿ, ಹೆಚ್ಚುವರಿ ಕಿರಿಯ ಸಿವಿಲ್ ನ್ಯಾಯಾಧೀಶರಾದ ಎನ್.ಅನುಪಮಾ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎನ್.ಎಸ್ ಪಾಟೀಲ್‌, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಎಲ್.ಕೆ.ದೇಶಪಾಂಡೆ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಂಜುನಾಥ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಡಿ.ಎಚ್.ಲಲಿತಾ, ಕಾಣೆಯಾದ ಮಕ್ಕಳ ಬ್ಯೂರೋ ಅಧಿಕಾರಿ ಮುತ್ತುರಾಜ ಮಾದರ, ಮಕ್ಕಳ ಸಂರಕ್ಷಣಾಧಿಕಾರಿ ಉಮಾ ಮತ್ತಿತರರು ಇದ್ದರು.

ಭ್ರೂಣ ಹತ್ಯೆ ಬಗ್ಗೆ ಎಚ್ಚರ...
ಸ್ಕ್ಯಾನ್‌ ಸೆಂಟರ್‌ನಲ್ಲಿ  ‘ಗರ್ಭಿಣಿಯರ ಸ್ಕ್ಯಾನ್‌ ಸಂದರ್ಭ ಮಗುವಿನ ಮಾಹಿತಿ (ಭ್ರೂಣ) ನೀಡುವುದಿಲ್ಲ’ ಎಂದು  ನಾಮ ಫಲಕ ಹಾಕದಿದ್ದರೆ ಅಥವಾ ಮಗು (ಭ್ರೂಣ) ಗಂಡು ಅಥವಾ ಹೆಣ್ಣು ಎಂಬ ಮಾಹಿತಿ ನೀಡಿದರೆ ಸುಮಾರು ₨10ಸಾವಿರ ದಂಡ, ಮೂರು ತಿಂಗಳು ಜೈಲು ಶಿಕ್ಷೆ ಇದೆ. ಅಲ್ಲದೇ, ಭ್ರೂಣ ಹತ್ಯೆಗೆ ಸಹಕರಿಸಿದರೆ, ₨50 ಸಾವಿರ ದಂಡ, 3 ವರ್ಷ ಜೈಲು ಜೊತೆ ಪರವಾನಿಗೆ ಶಾಶ್ವತ ರದ್ದು ಮಾಡಲಾಗುವುದು ಎಂದು ಜಿಲ್ಲಾ ಸರ್ಕಾರಿ ಆಸ್ಪತ್ರೆ ಸ್ತ್ರೀರೋಗ ತಜ್ಞೆ ಡಾ. ನೇತ್ರಾವತಿ ವಿವರಿಸಿದರು.

ದೇಶದಲ್ಲಿ ಪ್ರತಿ 7 ನಿಮಿಷಕ್ಕೆ ಒಂದು ಭ್ರೂಣಹತ್ಯೆ ನಡೆದರೆ, ರಾಜಸ್ತಾನ, ಹರಿಹಾಣ, ಪಂಜಾಬ್‌ ರಾಜ್ಯಗಳಲ್ಲಿ ಈ ಕೃತ್ಯಗಳು ಹೆಚ್ಚಾಗಿವೆ.   -ಕೆ.ಬಿ ಅಸೋದೆ, ಒಂದನೇ ಹೆಚ್ಚುವರಿ ಜಿಲ್ಲಾ, ಮತ್ತು ಸೆಷನ್ಸ್ ನ್ಯಾಯಾಧೀಶರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.