ADVERTISEMENT

‘3 ವಸತಿ ಶಾಲೆ ಇದೇ ವರ್ಷ ಆರಂಭ’

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2017, 7:10 IST
Last Updated 29 ಏಪ್ರಿಲ್ 2017, 7:10 IST

ಹಾನಗಲ್: ‘ತಾಲ್ಲೂಕಿಗೆ ಹೊಸದಾಗಿ ಮೂರು ವಸತಿ ಶಾಲೆಗಳು ಮಂಜೂರಾಗಿದ್ದು, ಇದೇ ಶೈಕ್ಷಣಿಕ ವರ್ಷದಿಂದ ಕಾರ್ಯಾರಂಭ ಮಾಡಲಿವೆ’ ಎಂದು ಶಾಸಕ ಮನೋಹರ ತಹಸೀಲ್ದಾರ್‌ ಹೇಳಿದರು.ತಾಲ್ಲೂಕಿನ ಯಳವಟ್ಟಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಆವರಣದಲ್ಲಿ ₹2.45 ಕೋಟಿ ವೆಚ್ಚದಲ್ಲಿ ಸಿಬ್ಬಂದಿ ಗೃಹಗಳು ಮತ್ತು ಹೆಚ್ಚುವರಿ ಕಾಮಗಾರಿಗಳಿಗೆ ಶುಕ್ರವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

‘ನೂತನ ಮೊರಾರ್ಜಿ ದೇಸಾಯಿ ವಸತಿ ಶಾಲೆ ಸ್ಥಾಪನೆಗೆ ತಾಲ್ಲೂಕಿನ ಕಲಕೇರಿ ಗ್ರಾಮ ಸಮೀಪ 10 ಎಕರೆ ಭೂಮಿ ಗುರುತಿಸಲಾಗಿದೆ. ಬ್ಯಾತನಾಳ ಸಮೀಪ 10 ಎಕರೆಯಲ್ಲಿ ಅಲ್ಪಸಂಖ್ಯಾತರ ವಸತಿ ಶಾಲೆ ಮತ್ತು ಹಾನಗಲ್‌ನಲ್ಲಿ ಎಸ್‌.ಸಿ ಬಾಲಕಿಯರಿಗಾಗಿ ವಸತಿ ಶಾಲೆ ಸ್ಥಾಪನೆ ಮಾಡಲಾಗುತ್ತದೆ’ ಎಂದರು.‘ಈಗಾಗಲೇ ತಾಲ್ಲೂಕಿನಲ್ಲಿ 4 ವಸತಿ ಶಾಲೆಗಳಿದ್ದು, ಹೊಸ ವಸತಿ ಶಾಲೆಗಳ ಸ್ಥಾಪನೆಯಿಂದ ಅವುಗಳ ಸಂಖ್ಯೆ ಏಳಕ್ಕೆ ಹೆಚ್ಚಲಿದೆ. ಆರಂಭದಲ್ಲಿ ತಾತ್ಕಾಲಿಕ ಕಟ್ಟಡದಲ್ಲಿ ನಡೆಯುತ್ತಿದ್ದ ಹಳ್ಳಿಬೈಲ್‌, ಯಳವಟ್ಟಿ, ಮಾರನಬೀಡ ಮೊರಾರ್ಜಿ ವಸತಿ ಶಾಲೆ ಮತ್ತು ಅಕ್ಕಿಆಲೂರಿನ ರಾಣಿಚನ್ನಮ್ಮ ವಸತಿ ಶಾಲೆಗೆ ಈಗಾಗಲೇ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಲಾಗಿದೆ’ ಎಂದರು.

‘ನಮ್ಮ ಸರ್ಕಾರ ಶೈಕ್ಷಣಿಕ ಕ್ಷೇತ್ರದ ಉನ್ನತಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಈ ಕಾರಣಕ್ಕಾಗಿ ತಾಲ್ಲೂಕಿನ ಹಳ್ಳಿಬೈಲ್‌ ವಸತಿ ಶಾಲೆಗೆ ₹2.17 ಕೋಟಿಯಲ್ಲಿ ಹೆಚ್ಚಿನ ಕಾಮಗಾರಿ ಮತ್ತು ಅಕ್ಕಿಆಲೂರ ರಾಣಿ ಚನ್ಮಮ್ಮ ಶಾಲೆಯ ಆವರಣದಲ್ಲಿ ಮೂಲ ಸೌಲಭ್ಯಕ್ಕಾಗಿ ₹5.50 ಕೋಟಿ ವೆಚ್ಚದ ಕಾಮಗಾರಿಗಳು ಪ್ರಗತಿಯಲ್ಲಿವೆ’ ಎಂದು ಅವರು ಮಾಹಿತಿ ನೀಡಿದರು.

ADVERTISEMENT

‘ಈ ಬಾರಿಯ ಬಜೆಟ್‌ನಲ್ಲಿ ರಾಜ್ಯದಲ್ಲಿ 1 ಸಾವಿರ ಪ್ರೌಢಶಾಲೆಗಳ ಸ್ಥಾಪನೆಯ ಘೋಷಣೆಯಾಗಿದೆ, ಈ ಪೈಕಿ ತಾಲ್ಲೂಕಿನಲ್ಲಿ ಬೇಡಿಕೆ ಇರುವ 6 ಪ್ರೌಢಶಾಲೆಗಳು ಮಂಜೂರಾಗುವ ಭರವಸೆಯಿದೆ. ಹಾನಗಲ್‌, ಅಕ್ಕಿಆಲೂರ, ಸಮ್ಮಸಗಿ, ಮಲಗುಂದ, ಹುಲ್ಲತ್ತಿ ಮತ್ತು ಕೆಲವರಕೊಪ್ಪ ಗ್ರಾಮದಲ್ಲಿ ಪ್ರೌಢಶಾಲೆ ಸ್ಥಾಪಿಸಲಾಗುವುದು’ ಎಂದು ಹೇಳಿದರು.

‘ವಸತಿ ಶಾಲೆಗಳಲ್ಲಿನ ವ್ಯವಸ್ಥೆಯನ್ನು ಅರಿಯುವ ನಿಟ್ಟಿನಲ್ಲಿ ಆಗಾಗ ಜನಪ್ರತಿನಿಧಿಗಳು ಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು, ಸರ್ಕಾರ ನೀಡುತ್ತಿರುವ ಅನುದಾನದ ಸದ್ಭಳಕೆ ಆಗಬೇಕು, ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಬೇಕು’ ಎಂದು ನುಡಿದರು.ಸ್ಥಳೀಯ ಮುಖಂಡ ಯಾಸೀರಖಾನ್‌ ಪಠಾಣ ಮಾತನಾಡಿ, ‘ಪರೀಕ್ಷೆ ಫಲಿತಾಂಶದಲ್ಲಿ ತಾಲ್ಲೂಕಿಗೆ ಪ್ರಥಮ ಸ್ಥಾನದಲ್ಲಿರುವ ಯಳವಟ್ಟಿ ಮೊರಾರ್ಜಿ ವಸತಿ ಶಾಲೆಯು ಮೂಲ ಸೌಕರ್ಯಗಳಿಂದ ವಂಚಿತವಾಗಿದೆ. ಶಾಲೆ ಆರಂಭಗೊಂಡು 10 ವರ್ಷ ಕಳೆದರೂ ಸಮಸ್ಯೆಗಳು ಪರಿಹಾರವಾಗಿಲ್ಲ’ ಎಂದರು.

ಮುಖಂಡ ವಿಷ್ಣುಕಾಂತ ಜಾಧವ, ಶಾಲೆಯ ಪ್ರಾಚಾರ್ಯ ರಾಘವೇಂದ್ರ ಓ.ಬಿ. ಮಾತನಾಡಿದರು. ಜಿಲ್ಲಾ ಪಂಚಾಯ್ತಿ ಸದಸ್ಯ ರಾಘವೇಂದ್ರ ತಹಸೀಲ್ದಾರ್‌, ಯಳವಟ್ಟಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ವರ್ಧಮಾನ ಚೌಟಿ, ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷೆ ಸರಳಾ ಜಾಧವ, ಸದಸ್ಯ ಶಂಕ್ರಣ್ಣ ಪ್ಯಾಟಿ ಹಾಜರಿದ್ದರು.ಗಣ್ಯರಾದ ಸಿ.ಬಿ.ಪಾಟೀಲ, ಮೈಲಾರಪ್ಪ ಕಬ್ಬೂರ, ಎಂ.ಎಸ್‌.ಪಾಟೀಲ, ಮಾರ್ಕಂಡೆಪ್ಪ ಕ್ಯಾಬಳ್ಳಿ, ಈರಪ್ಪ ಚಿಕ್ಕಣಗಿ, ಗುಡದಪ್ಪ ನೆವರದ, ಸಿದ್ಧರಾಮಗೌಡ ಪಾಟೀಲ, ರಾಮಣ್ಣ ರಾಮಜೀ, ಚನ್ನವೀರಗೌಡ ಪಾಟೀಲ, ಹುಸೇನಮಿಯಾ ವಾಲಿಕಾರ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಯ ಎಂಜನಿಯರ್‌ ಬಿ.ಎಸ್‌.ಶ್ರೀಧರ, ದರ್ಶನ ಇದ್ದರು. ಶಿಕ್ಷಕ ವೆಂಕಟೇಶ ಪೂಜಾರ ಸ್ವಾಗತಿಸಿದರು. ಎಫ್‌.ಬಿ.ಈಳಿಗೇರ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.