ADVERTISEMENT

₹40 ಲಕ್ಷ ವೆಚ್ಚದ ಬಲದಂಡೆ ಕಾಲುವೆ ಕಾಮಗಾರಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2017, 5:23 IST
Last Updated 17 ಏಪ್ರಿಲ್ 2017, 5:23 IST

ಹಾನಗಲ್: ಶಿರಸಿ ತಾಲ್ಲೂಕಿನಿಂದ ಹಾನಗಲ್‌ ತಾಲ್ಲೂಕಿನಲ್ಲಿ ಹರಿಯುವ ನೀರಲಗಿ ಹಳ್ಳಕ್ಕೆ ಅಡ್ಡಲಾಗಿ ನಿರ್ಮಿಸಿರುವ ಹುಲಗಿನಹಳ್ಳಿ ಬಾಂದಾರನಿಂದ ಸಮೀಪದ ಕೃಷಿ ಜಮೀನುಗಳಿಗೆ ನೀರುಣಿಸುವ ₹ 40 ಲಕ್ಷದ ಬಲದಂಡೆ ಕಾಲುವೆ ಕಾಮಗಾರಿಗೆ ಶನಿವಾರ ಶಾಸಕ ಮನೋಹರ ತಹಸೀಲ್ದಾರ್‌ ಚಾಲನೆ ನೀಡಿದರು.

‘ಹಿಂದುಳಿದ ಜನಾಂಗದವರ ಕೃಷಿ ಸೇರಿದಂತೆ ಮೂಲ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ನಾಲ್ಕು ವರ್ಷದ ಅವಧಿಯಲ್ಲಿ ರಾಜ್ಯ ಸರ್ಕಾರ ₹84,000 ಕೋಟಿ ಅನುದಾನ ಖರ್ಚು ಮಾಡಿದೆ. ಈ ಜನಾಂಗದವರು ಹೆಚ್ಚು ವಾಸಿಸುವ ತಾಲ್ಲೂಕಿನ ಜಕ್ಕನಾಯಕನಕೊಪ್ಪ, ಮಾದರಕಟ್ಟಿ ಭಾಗದಲ್ಲಿ ತಲಾ ₹1 ಕೋಟಿಯಲ್ಲಿ ಚೆಕ್‌ ಡ್ಯಾಂ ಮತ್ತು ಕಲಗುಡ್ಡಿಯಲ್ಲಿ ₹75 ಲಕ್ಷದಲ್ಲಿ ಬಾಂದಾರ ನಿರ್ಮಿಸಲಾಗುತ್ತಿದೆ’ ಎಂದರು.

ಜಿಲ್ಲಾ ಪಂಚಾಯ್ತಿ ಸದಸ್ಯ ರಾಘವೇಂದ್ರ ತಹಸೀಲ್ದಾರ್‌ ಮಾತನಾಡಿದರು. ತಾಲ್ಲೂಕು ಪಂಚಾಯ್ತಿ ಸದಸ್ಯ ಸಿದ್ಧನ ಗೌಡ ಪಾಟೀಲ, ಗ್ರಾಮ ಪಂಚಾಯ್ತಿ ಅಧ್ಯಕ್ಷ ವೀರೇಶ ಭಜಂತ್ರಿ, ಸದಸ್ಯ ಎಸ್‌.ಆರ್‌.ಈಳಿಗೇರ, ಚನ್ನವೀರಪ್ಪ ಗಡಿಯಂಕನಹಳ್ಳಿ, ಮಂಜು ಕೊಂಡೇರ, ಮುಖಂಡರಾದ ನಾಗರಾಜ ಗಾಜಿಪೂರ, ರಾಜೇಂದ್ರ ರೆಡ್ಡೇರ, ವೀರಭದ್ರಗೌಡ ಪಾಟೀಲ, ನಿಂಗಪ್ಪ ಪೂಜಾರ, ಚಂದ್ರು ಸುಣ್ಣದಕೊಪ್ಪ, ಹರೀಶ ಈಳಿಗೇರ, ಚಿಕ್ಕ ನೀರಾವರಿ ಇಲಾಖೆಯ ಗೋವಿಂದ ಚಪ್ಪರ ಹಾಜರಿದ್ದರು.

ADVERTISEMENT

ಯೋಜನೆ: ಮಳೆಗಾಲದಲ್ಲಿ ನದಿಯಂತೆ ರಭಸವಾಗಿ ಹರಿಯುವ ನೀರಲಗಿ ಹಳ್ಳಕ್ಕೆ ಈಗಾಗಲೇ ಬಾಂದಾರ ನಿರ್ಮಾಣಗೊಂಡು ಎಡದಂಡ ಕಾಲುವೆ ಮೂಲಕ ಸುತ್ತಲಿನ 125 ಎಕರೆ ಕೃಷಿ ಭೂಮಿಗೆ ನೀರುಣಿಸುವ ವ್ಯವಸ್ಥೆ ಇಲ್ಲಿದೆ. ಈ ಕಾಲುವೆ 7.8 ಕಿ.ಮೀ ಉದ್ದ ವಿದ್ದು, ಆರಂಭದ 2 ಕಿ.ಮೀ ಕಾಲುವೆ ಕಾಂಕ್ರೀಟ್‌ ಮಾಡಲಾಗಿದೆ. ಅಲ್ಲದೆ, ಹುಲಗಿನಹಳ್ಳಿ, ಹೊಸಕಟ್ಟೆ, ಮಾಕಟ್ಟೆ, ಕಾನಕಟ್ಟೆ, ಕೆಂಗಟ್ಟೆ, ಕೊಪ್ಪದಕೆರೆ ಮತ್ತು ಕ್ಯಾಸನೂರ ದೊಡ್ಡ ಕೆರೆ ತುಂಬಿಸಲಾಗುತ್ತದೆ.

ಈಗ ಬಲದಂಡೆ ಕಾಲುವೆ ನಿರ್ಮಾಣ ಮಾಡುವ ಮೂಲಕ ಎಸ್‌ಸಿ, ಎಸ್‌ಟಿ  ರೈತರ 40 ಎಕರೆ ಕೃಷಿ ಭೂಮಿಗೆ ನೀರು ಪೂರೈಸುವ ₹40 ಲಕ್ಷದ ಕಾಮಗಾರಿ ಯಲ್ಲಿ 790 ಮೀ. ಉದ್ದದ ಕಾಲುವೆ, 2 ಕಡೆ ಸಿ.ಡಿ ನಿರ್ಮಾಣ ಆಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.