ADVERTISEMENT

‘ಕನಕ: ದಾಸಶ್ರೇಷ್ಠರು ಎಂದು ಸೀಮಿತಗೊಳಿಸಬೇಡಿ’

​ಪ್ರಜಾವಾಣಿ ವಾರ್ತೆ
Published 21 ಜನವರಿ 2018, 9:53 IST
Last Updated 21 ಜನವರಿ 2018, 9:53 IST
ಕಾಗಿನೆಲೆಯಲ್ಲಿ ನಡೆಯುತ್ತಿರುವ ‘ಕನಕ ನಡೆ ನುಡಿ’ ಅಂಗವಾಗಿ ಹಮ್ಮಿಕೊಂಡ ಚಿತ್ರಕಲಾ ಶಿಬಿರದಲ್ಲಿ ರಚಿಸಿದ ಕಲಾಕೃತಿಗಳನ್ನು ಸಚಿವರಾದ ರುದ್ರಪ್ಪ ಲಮಾಣಿ ಮತ್ತು ಎಚ್.ಎಂ. ರೇವಣ್ಣ ವೀಕ್ಷಿಸಿದರು. ಶಾಸಕ ಬಸವರಾಜ ಶಿವಣ್ಣನವರ, ಮೇಳದ ಸಂಚಾಲಕ ಕಾ.ತ. ಚಿಕ್ಕಣ್ಣ ಇದ್ದಾರೆ
ಕಾಗಿನೆಲೆಯಲ್ಲಿ ನಡೆಯುತ್ತಿರುವ ‘ಕನಕ ನಡೆ ನುಡಿ’ ಅಂಗವಾಗಿ ಹಮ್ಮಿಕೊಂಡ ಚಿತ್ರಕಲಾ ಶಿಬಿರದಲ್ಲಿ ರಚಿಸಿದ ಕಲಾಕೃತಿಗಳನ್ನು ಸಚಿವರಾದ ರುದ್ರಪ್ಪ ಲಮಾಣಿ ಮತ್ತು ಎಚ್.ಎಂ. ರೇವಣ್ಣ ವೀಕ್ಷಿಸಿದರು. ಶಾಸಕ ಬಸವರಾಜ ಶಿವಣ್ಣನವರ, ಮೇಳದ ಸಂಚಾಲಕ ಕಾ.ತ. ಚಿಕ್ಕಣ್ಣ ಇದ್ದಾರೆ   

ಕಾಗಿನಲೆ (ಹಾವೇರಿ ಜಿಲ್ಲೆ): ‘ಕನಕರನ್ನು ದಾಸಶ್ರೇಷ್ಠರು ಎಂದು ಸೀಮಿತಗೊಳಿಸಬೇಡಿ’ ಎಂದು ಸಾರಿಗೆ ಸಚಿವ ಎಚ್.ಎಂ. ರೇವಣ್ಣ ಹೇಳಿದರು.

ಇಲ್ಲಿನ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಕನಕ ಕಲಾ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರಗಳು ಹಮ್ಮಿಕೊಂಡ ‘ಕನಕ ನಡೆ ನುಡಿ’ ಕನಕ– ಕನ್ನಡ ಸಮುದಾಯದ ಸಾಂಸ್ಕೃತಿಕ ಮೇಳವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ನಾವೆಲ್ಲ ದಾಸಶ್ರೇಷ್ಠರು ಎಂದು ಕನಕರ ಒಂದು ಭಾಗವನ್ನು ಮಾತ್ರ ತಿಳಿದುಕೊಂಡಿದ್ದೇವೆ. ಆದರೆ, ಅವರ ಬಹುಮುಖ ಪ್ರತಿಭೆಯನ್ನು, ಎಲ್ಲ ಪ್ರಕಾರಗಳನ್ನು ಜನತೆಗೆ ತಿಳಿಸಬೇಕಾಗಿದೆ. ಈ ನಿಟ್ಟಿನಲ್ಲಿ ಮೇಳವು ಅವಶ್ಯವಾಗಿ ಬೇಕಾಗಿತ್ತು’ ಎಂದರು. ‘ಕನಕರು ನೀಡಿದ ಚಿಂತನೆಗಳ ಅಗತ್ಯ ಇಂದು ಇದೆ. ಇಂತಹ ಸಂವಾದಗಳು ರಾಜಕೀಯಕ್ಕಿಂತ ಹೆಚ್ಚಾಗಿ ಸಾಂಸ್ಕೃತಿಕ ಸಂಚಲನ ಉಂಟು ಮಾಡಬೇಕು’ ಎಂದರು.

ADVERTISEMENT

‘ತನ್ನನ್ನು ಪ್ರಶ್ನಿಸಲು ಎಂಟೆದೆ ಬೇಕು? ಎಂದು ಕವಿ ರನ್ನ ಬರೆದುಕೊಂಡಿದ್ದಾರೆ. ಆದರೆ, ಕನಕರ ಸಾಹಿತ್ಯವೇ, ಅದನ್ನು ಓದಲು ಎಂಟೆದೆ ಬೇಕು? ಎಂದು ವಿನಮ್ರವಾಗಿ ಪ್ರಶ್ನಿಸುವಷ್ಟು ಗಟ್ಟಿಯಾಗಿದೆ’ ಎಂದು ಸಾಹಿತಿ ಎಂ.ಆರ್. ಸತ್ಯನಾರಾಯಣ ಹೇಳಿದರು.

‘ಹಳತೆಂದು ಹೊಗಳಬೇಡಿ. ಹೊಸತೆಂದು ಹೀಯಾಳಿಸಬೇಡಿ ಎಂದು ಕವಿ ಕಾಳಿದಾಸರು ಹೇಳಿದ್ದರು. ಇಂತಹ ಸಾಮಾಜಿಕ ಪರಿಸ್ಥಿತಿಯನ್ನು ಕನಕದಾಸರೂ ಎದುರಿಸಿದ್ದರು ಎಂಬುದು ಅವರ ಸಾಹಿತ್ಯಗಳಿಂದ ಸ್ಪಷ್ಟವಾಗುತ್ತದೆ’ ಎಂದರು.

‘ಕನ್ನಡ, ಕರ್ನಾಟಕಕ್ಕೆ ಶಕ್ತಿ ನೀಡಿದ ಕನಕರು ಕಾಗಿನೆಲೆಯಲ್ಲಿ ಸಾಹಿತ್ಯ ರಚನೆ ಮಾಡಿರುವುದೇ ಹಾವೇರಿ ಜಿಲ್ಲೆಯ ಹೆಮ್ಮೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಹೇಳಿದರು.

ಶಾಸಕ ಬಸವರಾಜ ಶಿವಣ್ಣನವರ, ಕನಕರ ಕರ್ಮಭೂಮಿಯೇ ಕಾಗಿನೆಲೆಯನ್ನು ಉದ್ಯಾನ, ಕೆರೆಗೆ ನೀರು ತುಂಬಿಸುವುದು ಮತ್ತಿತರ ಯೋಜನೆಗಳ ಮೂಲಕ ಅಭಿವೃದ್ಧಿ ಪಡಿಸಲಾಗಿದೆ ಎಂದರು.

ಮೇಳದ ಸಂಚಾಲಕ ಕಾ.ತ.ಚಿಕ್ಕಣ್ಣ ಮಾತನಾಡಿ, ‘ಯುವಜನತೆಯ ಚಿಂತನೆ ಹೇಗೆ ಸಾಗಬೇಕು ಎಂಬ ಬಗ್ಗೆ ಸಂವಾದದ ಮೂಲಕ ದೃಷ್ಟಿಕೋನವನ್ನು ರೂಪಿಸಲು ಸಾಧ್ಯವಾಗಲಿದೆ’ ಎಂದರು.

ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಕೊಟ್ರೇಶಪ್ಪ ಬಸೇಗಣ್ಣಿ, ಸದಸ್ಯ ಅಬ್ಉಲ್ ಮುನಾಫ್‌ಸಾಬ ಎಲಿಗಾರ, ಬ್ಯಾಡಗಿ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಸವಿತಾ ರಮೇಶ ಸುತ್ತಕೋಟಿ, ಉಪಾಧ್ಯಕ್ಷೆ ಶಾಂತವ್ವ ಮಲ್ಲಪ್ಪ ದೇಸಾಯಿ, ಸದಸ್ಯರಾದ ಜಗದೀಶ ಚನ್ನಕೇಶವ ಪೂಜಾರ, ಗ್ರಾಮ ಪಂಚಾಯ್ತಿ ಅಧ್ಯಕ್ಷ ಹಯಾತಬಿ ಮೊಹ್ಮದ್‌ ಇಸಾಕ್ ಮತ್ತಿಹಳ್ಳಿ, ಉಪಾಧ್ಯಕ್ಷ ಸೈಯದ್ ಗಫಾರ್ ಇಮಾಮ್‌ಸಾಬ ತಹಶೀಲ್ದಾರ್, ಜಿಲ್ಲಾಧಿಕಾರಿ ಡಾ.ವೆಂಕಟೇಶ್‌ ಎಂ.ವಿ, ಜಿಲ್ಲಾ ಪಂಚಾಯ್ತಿ ಸಿಇಒ ಸಿ.ಟಿ. ಶಿಲ್ಪಾ ನಾಗ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಪರಶುರಾಂ, ಪ್ರಾಧಿಕಾರದ ಆಯುಕ್ತ ಮಲ್ಲೇಶಪ್ಪ ಹೊರಪೇಟೆ, ಸದಸ್ಯರಾದ ಬಿ.ಕೆ.ರವಿ, ಶ್ರೀನಿವಾಸನ್ ಎಚ್.ಎ., ಚನ್ನಪ್ಪ ಕಾಕೋಳ, ಮೈಲಾರಪ್ಪ ಹಾದಿಮನಿ ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.