ADVERTISEMENT

‘ಮೋದಿ: ಜನಸಾಮಾನ್ಯರ ವಿರೋಧಿ’

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2018, 10:22 IST
Last Updated 8 ಫೆಬ್ರುವರಿ 2018, 10:22 IST

ಹಾವೇರಿ: ಪ್ರಧಾನಿ ನರೇಂದ್ರ ಮೋದಿ ಜನ ಸಾಮಾನ್ಯರ ಹಾಗೂ ಕರ್ನಾಟಕ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ಬುಧವಾರ ಸಂಸದ ಶಿವಕುಮಾರ್ ಉದಾಸಿ ಕಚೇರಿಗೆ ಮುತ್ತಿಗೆ ಹಾಕಲು ಬಂದ ಯುವ ಕಾಂಗ್ರೆಸ್ ಜಿಲ್ಲಾ ಘಟಕದ ಸದಸ್ಯರನ್ನು ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ಪಡೆದ ಪೊಲೀಸರು, ಬಳಿಕ ಬಿಡುಗಡೆ ಮಾಡಿದರು.

ಇದಕ್ಕೂ ಮೊದಲು ಯುವ ಕಾಂಗ್ರೆಸ್ ಕಾರ್ಯಕರ್ತರು ಪಿ.ಬಿ. ರಸ್ತೆಯ ಮೂಲಕ ಸಂಸದರ ಕಚೇರಿಯತ್ತ ಎಮ್ಮೆಗಳನ್ನು ಹೊಡೆದುಕೊಂಡು ಬಂದರು. ಅವರನ್ನು ವಶಕ್ಕೆ ಪಡೆದ ಪೊಲೀಸರು ಗ್ರಾಮೀಣ ಪೊಲೀಸ್ ಠಾಣೆಗೆ ಕರೆದೊಯ್ದರು. ಆದರೆ, ಅಲ್ಲಿಯೂ ಕಾರ್ಯಕರ್ತರು ಪ್ರತಿಭಟನಾ ಘೋಷಣೆಗಳನ್ನು ಕೂಗಿದರು.

ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲೇಶಪ್ಪ ಸವಣೂರ ಮಾತನಾಡಿ, ‘ಅಧಿಕಾರಕ್ಕೆ ಬರುವ ಮೊದಲು ಭಾರಿ ಭರವಸೆಗಳನ್ನು ನರೇಂದ್ರ ಮೋದಿ ನೀಡಿದ್ದರು. ಆದರೆ, ಈಗ ರೈತರು, ಮಹಿಳೆಯರು, ಅಲ್ಪಸಂಖ್ಯಾತರು, ಬಡವರು, ಪರಿಶಿಷ್ಟರು, ಯುವಕರು ಸೇರಿದಂತೆ ಜನ ಸಾಮಾನ್ಯರ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ. ಕರ್ನಾಟಕಕ್ಕೆ ಮಲತಾಯಿ ಧೋರಣೆ ತೋರುತ್ತಿದ್ದಾರೆ’ ಎಂದು ಆರೋಪಿಸಿದರು.

ADVERTISEMENT

‘ಕಪ್ಪು ಹಣ ತರುವುದಾಗಿ ಹೇಳಿದ್ದ ಮೋದಿ, ‘ನೋಟು ರದ್ಧತಿ’ ಮೂಲಕ ಜನತೆ ತಮ್ಮದೇ ಹಣ ಪಡೆಯಲು ಸರದಿ ಕಾಯುವಂತೆ ಮಾಡಿದ್ದಾರೆ. ಶ್ರೀಮಂತ ಉದ್ಯಮಿಗಳ ಲಕ್ಷಾಂತರ ಕೋಟಿ ಸಾಲ ಮನ್ನಾ ಮಾಡಿದ ಮೋದಿ, ಬಡ ರೈತರ ಸಾಲ ಮನ್ನಾ ಮಾಡುತ್ತಿಲ್ಲ’ ಎಂದು ದೂರಿದರು.

ರಾಜ್ಯ ಘಟಕದ ಕಾರ್ಯದರ್ಶಿ ನಾಸೀರ್ ಖಾನ್ ಪಠಾಣ್ ಮಾತನಾಡಿ, ‘ಮಹದಾಯಿ ವಿವಾದವನ್ನು ಪ್ರಧಾನಿ ಮೋದಿ ಬಗೆಹರಿಸಬೇಕು. ಆದರೆ, ಅವರು ಮೌನ ವಹಿಸುವ ಮೂಲಕ ರಾಜ್ಯದ ರೈತರಿಗೆ ಮೋಸ ಮಾಡುತ್ತಿ ದ್ದಾರೆ. ಅಂದು, ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿದ್ದು, ಈಗ ಪಕೋಡ ಮಾರಿ ಜೀವನ ಸಾಗಿಸಿ ಎಂಬ ಸಂದೇಶ ನೀಡಿ ದ್ದಾರೆ’ ಎಂದು ಆಪಾದಿಸಿದರು.

‘ಕನ್ನಡಿಗರನ್ನು ಹರಾಮಿಗಳು ಎಂದ ಗೋವಾ ಸಚಿವರ ವಿರುದ್ಧ ಬಿಜೆಪಿಯು ಯಾವುದೇ ಕ್ರಮಕೈಗೊಂಡಿಲ್ಲ. ಕರ್ನಾಟಕವು ಅತಿ ಹೆಚ್ಚು ತೆರಿಗೆ ಪಾವತಿಸಿದರೂ, ಸೂಕ್ತ ಅನುದಾನ ನೀಡುತ್ತಿಲ್ಲ. ಕಾರ್ಪೋರೇಟ್ ಉದ್ಯಮಿಗಳ ತೆರಿಗೆ ಇಳಿಸಿದ ಅವರು, ಪರಿಶಿಷ್ಟ ವಿದ್ಯಾರ್ಥಿನಿಯರ ವಿದ್ಯಾರ್ಥಿ ವೇತನ ಕಡಿತಗೊಳಿಸಿದ್ದಾರೆ. ಕೋಮು ದ್ವೇಷಿ ಹೇಳಿಕೆ ನೀಡುತ್ತಿರುವ ಬಿಜೆಪಿ ಮುಖಂಡರಿಗೆ ಯಾವುದೇ ಎಚ್ಚರಿಕೆಯನ್ನು ನೀಡುತ್ತಿಲ್ಲ’ ಎಂದು ಆರೋಪಿಸಿದರು.

ಜಿಲ್ಲಾ ಪಂಚಾಯ್ತಿ ಸದಸ್ಯ ರಾಘವೇಂದ್ರ ತಹಸೀಲ್ದಾರ್, ಯುವ ಕಾಂಗ್ರೆಸ್ ಕಾರ್ಯಕರ್ತರಾದ ದಾದಾ ಖಲಂದರ್ ಹಬ್ಬುನಾಬನವರ, ರಮೇಶ ಪುಟ್ಟಪ್ಪನವರ, ಜಾಬೀರ್ ಆಲಿ, ಸತೀಶ್ ಕಲ್ಮನಿ, ಉಮರ್ ಇನಾಂದಾರ್, ಜಾವೀದ್ ಹಿತ್ತಲಮನಿ, ಯಲ್ಲಪ್ಪ ನಿಂಬಣ್ಣನವರ ಮತ್ತಿತರರು ಇದ್ದರು. ಸಂಸದ ಆಪ್ತ ಕಾರ್ಯದರ್ಶಿ ರಾಜು ಪೇಟಕರ ಠಾಣೆಯಲ್ಲಿಯೇ ಮನವಿ ಸ್ವೀಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.