ADVERTISEMENT

ಅಕ್ರಮ ಚಟುವಟಿಕೆ ನಡೆಸಿದರೆ ಕಠಿಣ ಕ್ರಮ

ಶಹಾಬಾದ ಉಪ ವಿಭಾಗದ ರೌಡಿಗಳ ಪರೇಡ್ ಸಂದರ್ಭದಲ್ಲಿ ಡಿವೈಎಸ್ಪಿ ಖಡಕ್‌ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2018, 9:33 IST
Last Updated 5 ಏಪ್ರಿಲ್ 2018, 9:33 IST

ಚಿತ್ತಾಪುರ: ವಿಧಾನಸಭೆಗೆ ಚುನಾವಣೆ ನಡೆಯುತ್ತಿದ್ದರಿಂದ ರೌಡಿಗಳು ಅನಧಿಕೃತ ಮತ್ತು ಕಾನೂನು ಬಾಹಿರ ವಾದ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾದರೆ ನಿರ್ದಾಕ್ಷಿಣ್ಯವಾಗಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಶಹಾಬಾದ ಡಿವೈಎಸ್ಪಿ ಕೆ.ಬಸವರಾಜ ಅವರು ರೌಡಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.ಪಟ್ಟಣದ ಪೊಲೀಸ್ ಠಾಣೆಯ ಆವರಣದಲ್ಲಿ ಬುಧವಾರ ಶಹಾಬಾದ ಡಿವೈಎಸ್ಪಿ ಉಪ ವಿಭಾಗದ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿನ ರೌಡಿಗಳ ಪರೇಡ್ ನಡೆಸಿದ ಅವರು, ‘ನೀತಿ ಸಂಹಿತೆ ಜಾರಿಯಲ್ಲಿದೆ. ರೌಡಿಗಳು ಬಹಳ ಎಚ್ಚರಿಕೆ ವಹಿಸಬೇಕು. ನೀಡಿರುವ ಸೂಚನೆಗಳನ್ನು ತಪ್ಪದೆ ಪಾಲಿಸಬೇಕು. ನಿರ್ಲಕ್ಷಿಸಿದರೆ ಕ್ರಮ ಎದುರಿಸಬೇಕಾಗುತ್ತದೆ’ ಎಂದರು.

‘ಚುನಾವಣೆಯಲ್ಲಿ ಯಾವುದೇ ಒಂದು ಪಕ್ಷದ ಪರವಾಗಿ ಅಥವಾ ಅಭ್ಯರ್ಥಿಯ ಪರವಾಗಿ ಪ್ರಚಾರ ನಡೆಸುವಂತಿಲ್ಲ. ಮತದಾರರ ಮೇಲೆ ಪ್ರಭಾವ ಬೀರುವಂತಿಲ್ಲ ಮತ್ತು ಭಯ ಹುಟ್ಟಿಸಿ ಬೆದರಿಸುವಂತಿಲ್ಲ. ಹಣ ಹಂಚುವ ಅಕ್ರಮ ಚಟುವಟಿಕೆ ನಡೆಸುವಂತಿಲ್ಲ. ಚುನಾವಣೆ ಪ್ರಚಾರ ದಲ್ಲಿ ಭಾಗಿಯಾಗಬೇಕಾದರೆ ಚುನಾವಣಾ ಅಧಿಕಾರಿಯಿಂದ ಅಧಿಕೃತ ಅನುಮತಿ ಪಡೆಯಬೇಕು. ಪಡೆಯದೆ ಪ್ರಚಾರದಲ್ಲಿ ಭಾಗವಹಿಸಿದರೆ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ಅವರು ಎಚ್ಚರಿಕೆ ನೀಡಿದರು.

‘ನ್ಯಾಯಾಲಯದಲ್ಲಿ ನಡೆಯು ತ್ತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ರೌಡಿಗಳು ನಿಗದಿತ ದಿನಾಂಕದಂದು ಕಡ್ಡಾಯವಾಗಿ  ಖುದ್ದು ಹಾಜರಾಗ ಬೇಕು. ಯಾವುದೇ ಕಾರಣ ನೀಡಿ ತಪ್ಪಿಸುವ ದುಸ್ಸಾಹಸ ಮಾಡಬಾರದು. ತಪ್ಪಿಸಿದರೆ ಅಂತಹವರ ವಿರುದ್ಧ ಜಾಮೀನು ರದ್ದು ಮಾಡುವಂತೆ ನ್ಯಾಯಾಲಯಕ್ಕೆ ವರದಿ ಸಲ್ಲಿಸುತ್ತೇವೆ. ಇಂದಿನ ಪರೇಡ್ ನಡೆಯುವ ಮಾಹಿತಿ ನೀಡಿದರೂ ಗೈರಾದ ರೌಡಿಗಳ ವಿರುದ್ಧ ಕಲಂ 110ರ ಅಡಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳುತ್ತೇವೆ’ ಎಂದು ಹೇಳಿದರು.‘ಕಾನೂನು ಸುವ್ಯವಸ್ಥೆ ಹಾಳಾಗ ದಂತೆ, ಸಾಮಾಜಿಕ ಶಾಂತಿಗೆ ಭಂಗವುಂಟು ಮಾಡದಂತೆ ರೌಡಿಗಳು ನಡೆದುಕೊಳ್ಳಬೇಕು. ಸಾರ್ವಜನಿಕ ರಲ್ಲಿ ಭಯದ ವಾತಾವರಣ ಸೃಷ್ಟಿಸುವ ರೀತಿಯಲ್ಲಿ ದುರ್ವರ್ತನೆ ಮಾಡ ಬಾರದು. ಸಮಾಜಘಾತುಕ ಚಟುವಟಿಕೆಗಳಿಂದ ಸಂಪೂರ್ಣ ದೂರವಿರಬೇಕು’ ಎಂದು ಅವರು ಎಚ್ಚರಿಸಿದರು.ಚಿತ್ತಾಪುರ, ವಾಡಿ, ಶಹಾಬಾದ, ಮಾಡಬೂಳ ಮತ್ತು ಕಾಳಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ 219 ರೌಡಿಗಳನ್ನು ಕರೆಸಲಾಗಿತ್ತು. ರೌಡಿಗಳ ಪರೇಡ್‌ನಲ್ಲಿ ಚಿತ್ತಾಪುರ ಸಿಪಿಐ ಮಹಾಂತೇಶ ಪಾಟೀಲ್, ಕಾಳಗಿ ಸಿಪಿಐ ಭೋಜರಾಜ ರಾಠೋಡ್, ಪಿಎಸ್ಐಗಳಾದ ನಟರಾಜ ಲಾಡೆ, ಹುಷೇನ್ ಬಾಷಾ ಇದ್ದರು.

ADVERTISEMENT

**

ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ತಡೆಗೆ ಪೊಲೀಸ್ ಇಲಾಖೆಯಿಂದ ಬಿಗಿ ಕ್ರಮ. ರೌಡಿಗಳ ಕಾನೂನುಬಾಹಿರ ಚಟುವಟಿಕೆ ಮೇಲೆ ನಿಗಾ ಇಡಲಾಗುವುದು –  ಕೆ.ಬಸವರಾಜ, ಡಿವೈಎಸ್ಪಿ, ಶಹಾಬಾದ ಉಪ ವಿಭಾಗ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.